ಶ್ರೀಮಂಗಲ, ಆ. 14: ಕೊಡಗು ಜಿಲ್ಲೆಯ ನದಿ ಹಾಗೂ ನೀರಿನ ಮೂಲಗಳನ್ನು ರಕ್ಷಿಸಿಕೊಳ್ಳಲು ಪಾಳು ಬಿಟ್ಟಿರುವ ಭತ್ತದ ಗದ್ದೆಗಳನ್ನು ಕೃಷಿ ಮಾಡುವದು ಅನಿವಾರ್ಯವಾಗಿದೆ. ಭತ್ತದ ಗದ್ದೆಗಳನ್ನು ಕೃಷಿಯೇತರ ಚಟುವಟಿಕೆಗೆ ಪರಿವರ್ತನೆಯಾಗದಂತೆ ತಡೆಯುವ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಯುನೈಟೆಕ್ ಕೊಡವ ಅರ್ಗನೈಷೇಸನ್ (ಯುಕೊ) ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ವಿವರಿಸಿದರು.

ಪೊನ್ನಂಪೇಟೆ ಸಮೀಪ ಹಳ್ಳಿಗಟ್ಟು ಗ್ರಾಮದ ಮನೆಯಪಂಡ ಬೋಪಣ್ಣ ಅವರ ಗದ್ದೆಯಲ್ಲಿ ಕೃಷಿ ಇಲಾಖೆ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ ಕೆನರಾ ಬ್ಯಾಂಕ್ ಶಾಖೆ, ಪಚ್ಚೆಮಲೆ ರೈತ ಸಂಘ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಯುಕೊ ಸಂಘಟನೆಯ “ನಾಡ ಮಣ್ಣ್ ನಾಡ ಕೂಳ್” ಅಭಿಯಾನದ ಯಾಂತ್ರಿಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಳೆದ 4 ವರ್ಷದ ಹಿಂದೆ ಈ ಅಭಿಯಾನವನ್ನು ಸಂಘಟನೆಯಿಂದ ಆರಂಭಿಸಿದಾಗ ಹಲವು ಪ್ರಮುಖರು ಅಪಹಾಸ್ಯ ಮಾಡಿದ್ದರು. ಆದರೆ, ಈ ಮಣ್ಣಿನ ಹಾಗೂ ಸಂಸ್ಕøತಿಯ ಮೇಲೆ ಇರುವ ವಿಶೇಷ ಮಮತೆಯಿಂದ ಈ ಅಭಿಯಾನವನ್ನು ಎಷ್ಟೇ ಕಷ್ಟವಾದರೂ ಮುಂದುವರಿಸಲಾಯಿತು ಎಂದರು.

ಕಾರ್ಮಿಕರನ್ನು ಬಳಸಿ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಕೃಷಿಯಿಂದ ವಿಮುಖರಾಗಿದ್ದ ಜಿಲ್ಲೆಯ ಕೃಷಿಕರಿಗೆ ಈ ಅಭಿಯಾನದಿಂದ ಯಾಂತ್ರೀಕೃತ ಕೃಷಿಯನ್ನು ಪರಿಚಯಿಸಿ ಕಡಿಮೆ ಖರ್ಚಿನಲ್ಲಿ ಕಾರ್ಮಿಕರ ಕೊರತೆಗೆ ಪರಿಹಾರವಾಗಿ ಪಾಳು ಬಿಟ್ಟಿದ್ದ ಸಾವಿರಾರು ಎಕರೆ ಭತ್ತದ ಗದ್ದೆಗಳು ವ್ಯವಸಾಯಕ್ಕೆ ರೂಪಿತವಾಗಿವೆ. ರಾಜ್ಯದ ಹಲವು ಜಿಲ್ಲೆ ಹಾಗೂ ರಾಜ್ಯ ಸರ್ಕಾರ ಸೇರಿದಂತೆ ದೇಶದ ವಿವಿಧ ಕಡೆಗಳಿಂದಲೂ ತಮ್ಮ ಅಭಿಯಾನವನ್ನು ಒಪ್ಪಿಕೊಂಡು ಅಳವಡಿಸಿಕೊಳ್ಳುತ್ತಿರುವದು ಈ ಅಭಿಯಾನ ಯಶಸ್ವಿಯಾಗಿದೆÉÉ ಎಂಬದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.

ದೇಶದಲ್ಲಿ ಹಲವು ಕೃಷಿ ಪ್ರಧಾನವಾದ ರಾಜ್ಯ ಹಾಗೂ ರಾಜ್ಯದಲ್ಲಿ ಹಲವು ಕೃಷಿ ಪ್ರಧಾನವಾದ ಜಿಲ್ಲೆಗಳಿವೆ. ಆದರೆ, ಕೊಡಗು ಜಿಲ್ಲೆಯ ಆರು ಪ್ರಮುಖ ಸಾಂಸ್ಕøತಿಕ ಹಬ್ಬಗಳಲ್ಲಿ ಭತ್ತದ ಕೃಷಿಯೊಂದಿಗೆ ಸಂಬಂಧವಿದೆ. ಕೊಡಗಿನ ಸಂಸ್ಕøತಿಯೇ ಕೃಷಿಯಾಗಿರುವಾಗ ಕೃಷಿಯಿಂದ ವಿಮುಖರಾಗಬಾರದೆಂದು ಅವರು ಹೇಳಿದರು. ಸರ್ಕಾರದ ನೂತನ ಆದೇಶದಂತೆ ಸತತ 2 ವರ್ಷ ಪಾಳುಬಿಟ್ಟಿರುವ ಭತ್ತದ ಗದ್ದೆಯನ್ನು ಸರ್ಕಾರದ ವಸಕ್ಕೆ ತೆಗೆದುಕೊಳ್ಳುವದು ಸರಿಯಲ್ಲ. ಈ ಮೂಲಕ ನಕಲಿ ನಿರ್ವಸತಿಕರಿಗೆ ಹಾಗೂ ಉದ್ಯಮಿಗಳಿಗೆ ರೈತರ ಗದ್ದೆಗಳನ್ನು ನೀಡಲು ಸರ್ಕಾರ ಚಿಂತಿಸುತ್ತಿದೆ. ಅದರ ಬದಲು ಪಾಳುಬಿಡಲು ಕಾರಣಗಳನ್ನು ಕಂಡುಹಿಡಿದು ಗದ್ದೆಗಳನ್ನು ಕೃಷಿಗೆ ಪರಿವರ್ತಿಸಲು ಪ್ರೋತ್ಸಹ ಧನವನ್ನು ಸರ್ಕಾರ ನೀಡಬೇಕೆಂದು ಹೇಳಿದರು.

ಅಭಿಯಾನದ ನಿರ್ದೇಶಕರಾದ ಚೆಪ್ಪುಡಿರ ಸುಜು ಕರುಂಬಯ್ಯ ಮಾತನಾಡಿ ಭತ್ತದ ಗದ್ದೆಗಳನ್ನು ಪಾಳುಬಿಡುವದರಿಂದ ಜಲಮೂಲಗಳಿಗೆ ಧಕ್ಕೆಯಾಗುತ್ತಿದೆ. ನದಿಯ ರಕ್ಷಣೆಗೆ ನದಿಯ ಕೃಷಿ ಅಗತ್ಯವಾಗಿದೆ. ಕಾವೇರಿ ನದಿ ನೀರಿನ ಒಟ್ಟು ಹರಿವಿಕೆಯಲ್ಲಿ 70 ಭಾಗ ಕೊಡಗು ಜಿಲ್ಲೆಯ ಪಾಲಾಗಿದೆ. ಈ 70 ಭಾಗದಲ್ಲಿ ಶೇ.90ರಷ್ಟು ಪಾಲು ಭತ್ತದ ಗದ್ದೆಯಲ್ಲಿ ಮಳೆ ನೀರು ಇಂಗುವಿಕೆಯ ಮೂಲಕ ಒದಗಿಸುವ ದಾಗಿದೆ ಎಂದು ಹೇಳಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ರೀಣಾ ಅವರು ಮಾತನಾಡಿ ಯಾಂತ್ರಿಕೃತ ನಾಟಿ ಹಾಗೂ ಕೂರಿಗೆ ಬಿತ್ತನೆ (ಡ್ರಮ್ ಸೀಡರ್) ಮಾಡುವ ರೈತರಿಗೆ ಸರ್ಕಾರದಿಂದ ಪ್ರತಿ ಹೆಕ್ಟೇರ್‍ಗೆ 4000 ಗರಿಷ್ಟ 2 ಹೆಕ್ಟೇರ್‍ವರೆಗೆ ಧನ ಸಹಾಯ ದೊರೆಯಲಿದೆ. ಭತ್ತದ ಕೃಷಿ ಮಳೆ ಅವಲಂಬಿತ ಆಗಿದೆ. ಆದರೆ, ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ಕೊರತೆ ಕಾಣುತ್ತಿದ್ದು, ರೈತರು ಪರ್ಯಾಯ ಬೆಳೆಗಳಾದ ಸಿರಿ ಧಾನ್ಯ, ನವಣೆ ಇತ್ಯಾದಿ ಬೆಳೆ ಬೆಳೆದರೂ ಸಹ ಈ ಪ್ರೋತ್ಸಾಹ ಧನ ಲಭ್ಯವಿದೆ ಎಂದರು.

ಇದಲ್ಲದೆ ಜೋಳ ಸಹ ಬೆಳೆಯಬಹುದು. ಇದಕ್ಕೆ ಪ್ರೋತ್ಸಾಹ ಧನವಿಲ್ಲ. ಆದರೆ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಕೃಷಿ ಇಲಾಖೆಯಿಂದ ಲಭ್ಯವಿದೆ. ಆಸಕ್ತ ರೈತರು ಆಗಸ್ಟ್ ಅಂತ್ಯದೊಳಗೆ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು. ಈ ಸಂದರ್ಭ ಗದ್ದೆಗಳಲ್ಲಿ ಯಾಂತ್ರೀಕೃತ ಭತ್ತದ ನಾಟಿ ಕಾರ್ಯ ಪ್ರಾತ್ಯಕ್ಷಿಕೆ ನಡೆಯಿತು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ಪಚ್ಚೆಮಲೆ ರೈತ ಸಂಘಟನೆಯ ಮೂಕಳೇರ ನಂದಾ ಪೂಣಚ್ಚ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕೆವಿಕೆಯ ವಿಷಯ ತಜ್ಞ ಪ್ರಭಾಕರ್, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ವಿನಿತ, ಅರಣ್ಯ ಮಹಾವಿದ್ಯಾಲಯದ ವಿಸ್ತರಣ ಘಟಕದ ಮುಖ್ಯಸ್ಥ ಡಾ. ಕೆಂಚರೆಡ್ಡಿ, ಪಾಧ್ಯಾಪಕರುಗಳಾದ ಡಾ. ಜಡೇಗೌಡ, ಬಿ.ಜಿ. ನಾಯಕ್, ಕೃಷಿ ಇಲಾಖೆಯ ಆತ್ಮ ಯೋಜನೆ ತಾಂತ್ರಿಕ ವ್ಯವಸ್ಥಾಪಕರಾದ ಲಿಖಿತ, ತಾ.ಪಂ. ಮಾಜಿ ಸದಸ್ಯ ಕೊಳೇರ ದಯಾ ಚಂಗಪ್ಪ, ತಾ.ಪಂ. ಸದಸ್ಯೆ ಮೂಕಳೇರ ಅಶಾ ಪೂಣಚ್ಚ, ಪ್ರಾತ್ಯಕ್ಷಿಕೆ ಗದ್ದೆಯ ಮಾಲೀಕರಾದ ಮನೆಯಪಂಡ ಬೋಪಣ್ಣ, ಮನೆಯಪಂಡ ಸೀತಮ್ಮ, ಲೇಖಾ, ಶ್ರೀ ವಿನಾಯಕ ಜಂಟಿ ಬಾಧ್ಯತ ಗುಂಪಿನ ಚಂಗುಲಂಡ ಸೂರಜ್ ಮತ್ತಿತರರು ಹಾಜರಿದ್ದರು.