ಕೂಡಿಗೆ, ಆ, 15: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾ.ಪಂ ಅಧ್ಯಕ್ಷೆ ಲತಾ ಅಧ್ಯಕ್ಷತೆಯಲ್ಲಿ ನಡೆಯಿತು.
ಪಂಚಾಯಿತಿಗೆ ಸೇರಿದ ಮಳಿಗೆಗಳನ್ನು ಬಾಡಿಗೆದಾರರು ಈ ಹಿಂದೆ ಹರಾಜಿನಲ್ಲಿ ಪಾಲ್ಗೊಂಡು ಪಡೆದಿದ್ದು, ಅದರ ಅವಧಿಯು ಮುಗಿದಿರುವ ಹಿನ್ನೆಲೆಯಲ್ಲಿ ಮುಂದಿನ ವಾರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಹಾರಾಜು ಮಾಡುವಂತೆ ಕಳೆದ ಮಾಸಿಕ ಸಭೆಯಲ್ಲಿ ಕೈಗೊಳ್ಳಲಾಗಿತ್ತು ಎಂದು ವಿಷಯವನ್ನು ಸದಸ್ಯರಾದ ವಿಜಯ್ಕುಮಾರ್ ಹಾಗೂ ದಿನೇಶ್ ಪ್ರಸ್ತಾಪಿಸಿದರು. ಇದಕ್ಕುತ್ತರಿಸಿದ ಅಧ್ಯಕ್ಷರು, ಬಾಡಿಗೆದಾರರು ಈ ಸಾಲಿನಲ್ಲಿಯು ಬಾಡಿಗೆ ಕಟ್ಟುವದರ ಮೂಲಕ ಮರು ಹರಾಜು ಮಾದರಿಯಲ್ಲಿ ಪಡೆದುಕೊಳ್ಳಲಿದ್ದಾರೆ ಎಂದು ಉತ್ತರಿಸಿದರು. ಈ ಸಂದರ್ಭ ಪರ ವಿರುದ್ಧ ಚರ್ಚೆಗಳು ನಡೆದವು.
ಇದೆ ವೇಳೆ 21 ಅಂಗಡಿ ಮಳಿಗೆಗಳ ಬಾಡಿಗೆದಾರರು ಆಡಳಿತ ಮಂಡಳಿಯ ಎದುರು ಅಂಗಡಿಗಳಿಗೆ ಅಧಿಕ ಬಂಡವಾಳ ವಿನಿಯೋಗಿಸಿರುವದರಿಂದ ಮುಂದಿನ ಅವಧಿಯವರೆಗೂ ನವೀಕರಣಗೊಳಿಸಿ ಉಪಯೋಗಕ್ಕೆ ಅನುವು ಮಾಡಿಕೊಡ ಬೇಕೆಂದು ಕೇಳುತ್ತಿದ್ದಂತೆಯೇ ವಾದ ವಿವಾದಗಳು ಹೆಚ್ಚಾಗಿ ಸಭೆಯಲ್ಲಿ ಗದ್ದಲವೇರ್ಪಟ್ಟಿತು.
ಅಂಗಡಿ ಮಳಿಗೆಗಳ ಮಾಲೀಕರ ಮಾತುಗಳನ್ನು ಆಡಳಿತ ಮಂಡಳಿಯವರು ತಿರಸ್ಕರಿಸಿದ ಪರಿಣಾಮ ಅಧ್ಯಕ್ಷರನ್ನೊಳಗೊಂಡಂತೆ ಆಡಳಿತ ಮಂಡಳಿಯವರು ಹಿಟ್ಲರ್ ಮಾದರಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಅಂಗಡಿ ಮಾಲೀಕರು ಆರೋಪಿಸಿದರು.
ನಿವೇಶನ ರಹಿತರಿಗೆ ನಿವೇಶನ ನೀಡುವ ಸಂಬಂಧ ಈಗಾಗಲೇ ಮಂಜೂರಾಗಿರುವ ಮನೆಗಳನ್ನು ಸಮರ್ಪಕವಾಗಿ ನಿವೇಶನವಿಲ್ಲದ ಫಲಾನುಭವಿಗಳಿಗೆ ನೀಡುವ ಬಗ್ಗೆ ಚರ್ಚೆ ನಡೆಯಿತು.
ಅಲ್ಲದೆ, 14ನೇ ಹಣಕಾಸಿನ ಯೋಜನೆಯಡಿಯಲ್ಲಿ ಹಣವನ್ನು ವ್ಯವಸ್ಥಿತವಾಗಿ ವಿನಿಯೋಗಿಸಲು ಹಾಗೂ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸು ವದರ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಲತಾ ಮಾತನಾಡಿ, ಎಲ್ಲಾ ಸದಸ್ಯರುಗಳ ಸಲಹೆ ಸಹಕಾರಗಳನ್ನು ತೆಗೆದುಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಬಸವ ವಸತಿ ಯೋಜನೆ ಜಾರಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವದು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಮಾತನಾಡಿ, ಈಗಾಗಲೇ ಅಂಗಡಿ ಮಳಿಗೆಗಳ ಬಾಡಿಗೆದಾರರ ಅವಧಿ ಮುಗಿದಿದ್ದು, ಮುಂದಿನ ದಿನಗಳಲ್ಲಿ ಮೇಲಾಧಿಕಾರಿಗಳ ಅನುಮತಿ ಪಡೆದು ಹರಾಜು ಪ್ರಕ್ರಿಯೆ ನಡೆಸಲು ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.
ಸಭೆಗೆ ಬಂದ ಅರ್ಜಿಗಳ ಬಗ್ಗೆ ಚರ್ಚಿಸಿ, ಅನುಮೋದನೆ ನೀಡಲು ನಿಯಮಾನುಸಾರವಾಗಿ ಕ್ರಮಕೈಗೊಳ್ಳು ವದರ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮ ಸೇರಿದಂತೆ ಸದಸ್ಯರುಗಳಾದ ಮಧುಸೂದನ್, ಶಿವನಂಜಪ್ಪ, ವೆಂಕಟೇಶ, ದೇವಮ್ಮ, ಅಶೋಕ, ವಿಜಯ್, ದಿನೇಶ್, ಸರೋಜಮ್ಮ, ಪ್ರಮೀಳ, ಮಂಜುಳ, ದೇವಮ್ಮ ಇದ್ದರು.