ಮಡಿಕೇರಿ, ಆ.16: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮಡಿಕೇರಿ ನಗರಸಭೆಗೆ ಚುನಾಯಿತರಾದ ಕೆ.ಎಂ.ಗಣೇಶ್ ಹಾಗೂ ಶೇಷಮ್ಮ (ಲೀಲಾ) ಅವರು ಮಡಿಕೇರಿ ನಗರಸಭೆಯ ಸದಸ್ಯರಾಗಿದ್ದು, ತಮ್ಮನ್ನು ಚುನಾಯಿಸಿರುವ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಇತ್ತೀಚೆಗೆ ಜಾತ್ಯಾತೀತ ಜನತಾದಳವನ್ನು ಸೇರುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ಕಾರಣದಿಂದ ಇಬ್ಬರನ್ನು ಕರ್ನಾಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯಿದೆ 1987ರ ಅಡಿಯಲ್ಲಿ ನಗರಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಿಗೆ ನಗರಸಭೆಯ ಆಯುಕ್ತರ ಮೂಲಕ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಶಿವು ಮಾದಪ್ಪ ದೂರು ಸಲ್ಲಿಸಿದ್ದಾರೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ತಿಳಿಸಿದ್ದಾರೆ.

ಇಬ್ಬರ ಅಮಾನತು

ಮಡಿಕೇರಿ ನಗರಸಭೆಯ ಸದಸ್ಯರುಗಳಾದ ಕೆ.ಎಂ.ಗಣೇಶ್ (ಕಾಂಗ್ರೆಸ್ ಸದಸ್ಯತ್ವ ಸಂಖ್ಯೆ 188591) ಮತ್ತು ಲೀಲಾ ಶೇಷಮ್ಮ (ಸದಸ್ಯತ್ವ ಸಂಖ್ಯೆ 187655) ಇವರುಗಳನ್ನು ಕಾಂಗ್ರೆಸ್ ಪಕ್ಷದಿಂದ ಮುಂದಿನ 6 ವರ್ಷಗಳವರೆಗೆ ಅಮಾನತು ಗೊಳಿಸಲು ಜಿಲ್ಲಾಧ್ಯಕ್ಷರು ಆದೇಶಿಸಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.