ಇಂದಿರಾ ಕ್ಯಾಂಟೀನ್ ಉದ್ಘಾಟನೆ ಬೆಂಗಳೂರು, ಆ. 16: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‍ಅನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉದ್ಘಾಟನೆ ಮಾಡಿದರು. ಬೆಂಗಳೂರಿನ ಜಯನಗರದ ಕನಕನಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ಅನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಉದ್ಘಾಟನೆ ಮಾಡಿದರು. ಈ ವೇಳೆ ಕ್ಯಾಂಟೀನ್ ವೀಕ್ಷಿಸಿದ ರಾಹುಲ್ ಗಾಂಧಿ ಅವರು, ಕ್ಯಾಂಟೀನ್ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಮೊದಲ ಹಂತದಲ್ಲಿ 101 ಕ್ಯಾಂಟೀನ್‍ಗಳು ಕಾರ್ಯಾಚರಿಸಲಿವೆ. ಅಕ್ಟೋಬರ್‍ಗೆ ಎಲ್ಲ 198 ವಾರ್ಡ್‍ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ. ಎಲ್ಲ 27 ವಿಧಾನಸಭಾ ಕ್ಷೇತ್ರದಲ್ಲಿ ತಲಾ 1 ಅಡುಗೆ ಮನೆ ನಿರ್ಮಿಸಲಾಗಿದೆ. ಕ್ಯಾಂಟೀನ್‍ನಲ್ಲಿ ರೂ. 5 ಗೆ ತಿಂಡಿ, ರೂ. 10 ಗೆ ಊಟ ಲಭಿಸಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಲೋಕಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹಾಗೂ ರಾಜ್ಯ ಉಸ್ತುವಾರಿ ಕೆ.ಎಲ್. ವೇಣುಗೋಪಾಲ್, ವಿ.ಎಸ್. ಉಗ್ರಪ್ಪ, ಬಿಬಿಎಂಪಿ ಮೇಯರ್ ಜಿ. ಪದ್ಮಾವತಿ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಹಾಜರಿದ್ದರು.

ಕಾಶ್ಮೀರ: 12 ಕಡೆ ಎನ್‍ಐಎ ಧಾಳಿ

ಶ್ರೀನಗರ, ಆ. 16: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಪ್ರತ್ಯೇಕತಾವಾದಿಗಳು ಪಾಕಿಸ್ತಾನದಿಂದ ಹಣಕಾಸು ನೆರವು ಪಡೆಯುತ್ತಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮತ್ತೆ ಕಾಶ್ಮೀರದ 12 ಕಡೆಗಳಲ್ಲಿ ಧಾಳಿ ನಡೆಸಿದ್ದಾರೆ. ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ ಅಧಿಕಾರಿಗಳು ಶ್ರೀನಗರ, ಬಾರಾಮುಲ್ಲಾ ಮತ್ತು ಹಂದ್ವಾರ ಸೇರಿದಂತೆ ಒಟ್ಟು 12 ಪ್ರತ್ಯೇಕ ಪ್ರದೇಶಗಳಲ್ಲಿ ಧಾಳಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆಗೊಳಪಡಿಸಿದ ವ್ಯಕ್ತಿಗಳು ನೀಡಿದ ಮಾಹಿತಿ ಆಧಾರದ ಮೇರೆಗೆ ಇಂದು ಧಾಳಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಸಿಎಂ ಕರುಣಾನಿಧಿ ಆಸ್ಪತ್ರೆಗೆ ದಾಖಲು

ಚೆನ್ನೈ, ಆ. 16: ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಕಾವೇರಿ ಆಸ್ಪತ್ರೆಗೆ ಇಂದು ಬೆಳಿಗ್ಗೆ ಕರುಣಾನಿಧಿಯವರು ದಾಖಲಾದರು. ಕೃತಕ ಆಹಾರ ಪೂರೈಕೆ ಪೈಪ್ ಬದಲಾವಣೆಗಾಗಿ ಕರುಣಾನಿಧಿಯವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿಯೂ ಅನಾರೋಗ್ಯದ ಕಾರಣಕ್ಕೆ ಕರುಣಾನಿಧಿಯವರು ಆಸ್ಪತ್ರೆಗೆ ದಾಖಲಾಗಿದ್ದರು.

ಸಂಸದ ಡಿ.ಕೆ. ಸುರೇಶ್‍ಗೆ ಪೂಜಾರಿ ಬೆದರಿಕೆ

ಬೆಂಗಳೂರು, ಆ. 16: ಸಂಸದ ಡಿ.ಕೆ. ಸುರೇಶ್ ಅವರ ಕಚೇರಿ ದೂರವಾಣಿಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ ಆರೋಪದಡಿ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಮೂರು ದಿನಗಳ ಕಾಲ ಆದಾಯ ತೆರಿಗೆ ಅಧಿಕಾರಿಗಳು ಧಾಳಿ ನಡೆಸಿದ 7 ಗಂಟೆಗಳ ನಂತರ ವ್ಯಕ್ತಿಯೊಬ್ಬ ಸಚಿವರ ಸಹೋದರ ಸುರೇಶ್ ಅವರ ಕಚೇರಿಗೆ ಕರೆ ಮಾಡಿದ್ದಾನೆ. ಆ ಸಂದರ್ಭ ಸುರೇಶ್ ಕಚೇರಿಯಲ್ಲಿ ಇರಲಿಲ್ಲವಾದ್ದರಿಂದ ಅವರ ಸಹಾಯಕ ಅರುಣ್ ದೇವ್ ಕರೆ ಸ್ವೀಕರಿಸಿದ್ದಾರೆ. ಹಿಂದಿಯಲ್ಲಿ ಮಾತನಾಡಿರುವ ಆರೋಪಿ, ‘ನಾನು ರವಿ ಪೂಜಾರಿ. ಹಣಕ್ಕಾಗಿ ಕರೆ ಮಾಡಿದ್ದೇನೆ’ ಎಂದಿದ್ದಾನೆ. ಕರೆ ಬಂದ ಸಂಖ್ಯೆಯ ಮೂಲ ಪತ್ತೆಗೆ ಸದಾಶಿವನಗರ ಪೆÇಲೀಸರು ಸೈಬರ್ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಸಿಡಿಆರ್ ಪರಿಶೀಲಿಸಿದಾಗ ಆರೋಪಿ 14 ಸಂಖ್ಯೆಗಳನ್ನು ಬಳಸಿ ಕರೆ ಮಾಡಿರುವದು ಗೊತ್ತಾಗಿದೆ. ಬಹುಶಃ ಅದು ‘ಇಂಟರ್ನೆಟ್ ಕಾಲ್’ ಇರಬಹುದು ಎಂದು ಪೆÇಲೀಸರು ಶಂಕಿಸಿದ್ದಾರೆ.

ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ

ಮಂಗಳೂರು, ಆ. 16: ಪಶ್ಚಿಮ ವಲಯ ಐಜಿಪಿಯಾಗಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಐಜಿಪಿಪಿ. ಹರಿಶೇಖರನ್ ಅವರು ಹೇಮಂತ್ ನಿಂಬಾಳ್ಕರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಮದ್ಯದಂಗಡಿಗಳು ಪುನಾರಂಭ ಸಾಧ್ಯತೆ ಕ್ಷೀಣ

ನವದೆಹಲಿ, ಆ. 16: ನಗರ ಮತ್ತು ಪಟ್ಟಣ ಪ್ರದೇಶ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯನ್ನು ಡಿನೋಟಿಫೈ ಮಾಡಲು ಕೇಂದ್ರ ಸರ್ಕಾರ ನಿರಾಸಕ್ತಿ ತಾಳಿರುವದರಿಂದ, ರಾಜ್ಯದ ಬೆಂಗಳೂರು ಮತ್ತಿತರ ನಗರಗಳಲ್ಲಿನ ಹೆದ್ದಾರಿ ಪಕ್ಕದ ಮದ್ಯದಂಗಡಿಗಳು ಸದ್ಯದ ಮಟ್ಟಿಗೆ ಪುನಾರಂಭವಾಗುವ ಸಾಧ್ಯತೆಗಳು ಕ್ಷೀಣಿಸಿವೆ. ರಾಷ್ಟ್ರೀಯ ಹೆದ್ದಾರಿ ಡಿನೋಟಿಫೈ ಮಾಡಿ ಆದೇಶ ಹೊರಡಿಸಿದಲ್ಲಿ ಸಾಮಾಜಿಕ ಕಾರ್ಯಕರ್ತರು, ಸ್ವಯಂ ಸೇವಾ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ಮುಖಂಡರು ‘ಮದ್ಯದ ವ್ಯಾಪಾರಿಗಳ ಲಾಬಿಗೆ ಮಣಿದು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಆರೋಪಿಸುವ ಸಾಧ್ಯತೆಗಳಿವೆ. ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆಯೂ ನಡೆಯಲಿರುವುದರಿಂದ ಅನಗತ್ಯ ಆರೋಪಗಳಿಗೆ ಅವಕಾಶ ನೀಡುವದು ಬೇಡ ಎಂದೇ ಕೇಂದ್ರ ಹಿಂಜರಿಯುತ್ತಿದೆ ಎನ್ನಲಾಗಿದೆ. ನಗರ, ಪಟ್ಟಣ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯ 500 ಮೀಟರ್ ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳಿಗೆ ಅನುಕೂಲ ಕಲ್ಪಿಸಲೆಂದೇ ಡಿನೋಟಿಫೈ ಮಾಡಬೇಕಿದೆ.

ಲತಾ ರಜನೀಕಾಂತ್ ಶಾಲೆಗೆ ಬೀಗಮುದ್ರೆ

ಚೆನ್ನೈ, ಆ. 16: ತಮಿಳು ಚಿತ್ರರಂಗದ ಸೂಪರ್ ಸ್ಚಾರ್ ರಜನೀಕಾಂತ್ ಅವರ ಪತ್ನಿ ಲತಾ ರಜನೀಕಾಂತ್ ಒಡೆತನದ ಶಾಲೆಗೆ ಬೀಗಮುದ್ರೆ ಹಾಕಲಾಗಿದೆ. ಚೆನ್ನೈನಲ್ಲಿರುವ ಆಶ್ರಮ ಮೆಟ್ರಿಕುಲೇಶನ್ ಶಾಲೆ ಕಟ್ಟಡಕ್ಕೆ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಶಾಲೆಗೆ ಬೀಗ ಜಡಿಯಲಾಗಿದೆ. ಶಾಲೆಗೆ ಬೀಗ ಮುದ್ರೆ ಹಾಕಿರುವ ಹಿನ್ನೆಲೆ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ. ಶಾಲೆಯ ಕಟ್ಟಡದ ಬಾಡಿಗೆ ಹಣವನ್ನು ಮಾಲೀಕನಿಗೆ ಲತಾ ರಜನೀಕಾಂತ್ ಪಾವತಿಸಿರಲಿಲ್ಲ. ರಜನೀಕಾಂತ್ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಈ ಕೆಲಸ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ವೇಮುಲಾ ಸಾವಿಗೆ ವೈಯುಕ್ತಿಕ ಸಮಸ್ಯೆ ಕಾರಣ

ಹೈದರಾಬಾದ್, ಆ. 16: ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ವೈಯುಕ್ತಿಕ ಸಮಸ್ಯೆಗಳೇ ಕಾರಣ ಎಂದು ಪ್ರಕರಣ ಸಂಬಂಧ ಮಾನವ ಸಂಪನ್ಮೂಲ ಇಲಾಖೆ ನೇಮಿಸಿದ್ದ ತನಿಖಾ ಆಯೋಗ ಹೇಳಿದೆ. ಹೈದರಾಬಾದ್ ವಿಶ್ವ ವಿದ್ಯಾನಿಲಯ ಕೈಗೊಂಡ ಕ್ರಮದಿಂದ ಆತ್ಮಹತ್ಯೆಗೆ ಶರಣಾಗಿಲ್ಲ, ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ನಿವೃತ್ತ ಜಸ್ಟೀಸ್ ಎ.ಕೆ. ರೂಪಾನ್‍ವಾಲ್ ಆಯೋಗ ತಿಳಿಸಿದೆ. ರೋಹಿತ್ ವೇಮುಲಾ ಅವರನ್ನು ಹಾಸ್ಟೆಲ್‍ನಿಂದ ಹೊರ ಹಾಕಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ ಹಲವಾರು ಕಾರಣಗಳಿಂದ ಅಸಮಾಧಾನಗೊಂಡಿದ್ದ. ರೋಹಿತ್ ವೇಮುಲಾ ವಯಕ್ತಿಕ ಸಮಸ್ಯೆಗಳಿಗೆ ಸಿಲುಕಿ ಹಾಕಿಕೊಂಡಿದ್ದ ಎಂಬದು ಆತನ ಸೂಸೈಡ್ ನೋಟ್‍ನಲ್ಲಿ ದಾಖಲಿಸಿದ್ದ ಅಂಶಗಳಿಂದ ತಿಳಿದು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.