ಮಡಿಕೇರಿ, ಆ. 17: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ್ ಹತ್ಯೆಗೆ ಕಾರಣರಾಗಿರುವ ಆರೋಪಿಗಳು ಪ್ರತಿನಿಧಿಸುವ ಕೆಎಫ್‍ಡಿ ಹಾಗೂ ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟಿಸಿದರು.ಅಲ್ಲದೆ, ಈ ಸಂಬಂಧ ನೈತಿಕ ಹೊಣೆ ಹೊತ್ತು ರಾಜ್ಯ ಅರಣ್ಯ ಖಾತೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ರಾಜೀನಾಮೆ ನೀಡುವಂತೆಯೂ ಪ್ರತಿಭಟ ನಾಕಾರರು ಒತ್ತಾಯಿಸಿದರು. ಈ ಸಂಬಂಧ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮುಖಾಂತರ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಸಚಿವರ ರಾಜೀನಾಮೆ ಮತ್ತು ಸಂಘಟನೆಗಳ ನಿಷೇಧ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮುಂದುವರಿಸುವದಾಗಿ ಘೋಷಿಸಿದರು. ಯುವಮೋರ್ಚಾ ಪದಾಧಿಕಾರಿಗಳಾದ ಮಾಚಿಮಂಡ ಗಪ್ಪಣ್ಣ, ಕಿಬ್ಬೆಟ್ಟ ಮಧು, ಕುಟ್ಟಂಡ ಅಜಿತ್ ಕರುಂಬಯ್ಯ, ತೋರಿರ ವಿನು, ಚೌಡಳ್ಳಿ ಮಹೇಶ್, ಕೃಷ್ಣಪ್ಪ, ಮಹೇಶ್ ಜೈನಿ, ದಿಶು ಮೊದಲಾದವರು ಪಾಲ್ಗೊಂಡಿದ್ದರು.