ಗೋಣಿಕೊಪ್ಪಲು, ಆ. 17: ಭಾರತ ಕೃಷಿ ಪ್ರಧಾನ ದೇಶ. ಇಂಜಿನಿಯರ್ ಅಥವಾ ವೈದ್ಯ ವೃತ್ತಿಯಲ್ಲಿಯೇ ಸಾಧನೆ ಮಾಡಬೇಕು, ಹಣ ಗಳಿಸಬೇಕು ಎಂದೇನೂ ಇಲ್ಲ. ಕೃಷಿಯಲ್ಲಿಯೂ ಸಾಧನೆ ಮಾಡುವ ಮೂಲಕ ಬದುಕು ಹಸನು ಮಾಡಿಕೊಳ್ಳಬಹುದು ಎಂದು ಯುನೈಟೆಡ್ ಕೊಡವ ಸಂಘಟನೆಯ ಅಧ್ಯಕ್ಷ ಮಂಜು ಚಿಣ್ಣಪ್ಪ ಅವರು ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಇಲ್ಲಿಗೆ ಸಮೀಪದ ಕಳತ್ಮಾಡುವಿನಲ್ಲಿ ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅವರ ಗದ್ದೆಯಲ್ಲಿ ಯಾಂತ್ರಿಕ ನಾಟಿ ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ‘ನಾಡ ಮಣ್ಣ್ ನಾಡ ಕೂಳ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗದ್ದೆಯ ಉಳುಮೆ, ನಾಟಿ ಕಾರ್ಯ, ಕೊಯ್ಲು ಇತ್ಯಾದಿಗಳನ್ನು ರೈತರೇ ಮಾಡಿದ್ದಲ್ಲಿ ಆರೋಗ್ಯವಂತ ಜೀವನ ಸಾಗಿಸಬಹುದು. ಕೆಸರಿನಲ್ಲಿ ಕೆಲಸ ನಿರ್ವಹಿಸುವದರಿಂದ ಡೆಂಗ್ಯೂ ಮುಂತಾದ ಕಾಯಿಲೆಗಳನ್ನು ದೂರವಿಡಲು ಸಾಧ್ಯವಿದೆ. ನಮ್ಮ ಹಿಂದಿನ ತಲೆಮಾರು ಕೃಷಿಯಲ್ಲಿ ಅಧಿಕವಾಗಿ ತೊಡಗಿದ್ದರಿಂದ ಹಾಗೂ ಸಾವಯವ ಗೊಬ್ಬರ ಬಳಸಿ ಭತ್ತ ಉತ್ಪಾದನೆ ಮಾಡುತ್ತಿದ್ದುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಹೆಚ್ಚಳ ಹಾಗೂ ಆರೋಗ್ಯವಂತ ಜೀವನ ಸಾಗಿಸುತ್ತಿದ್ದರು. ಆದರೆ, ಇಂದಿನ ಪೀಳಿಗೆ ಬೀಟಿ ಅಕ್ಕಿ ಇತ್ಯಾದಿ ರಾಸಾಯನಿಕ ಬಳಕೆ ಪದಾರ್ಥ ಸೇವನೆಯಿಂದಾಗಿ ಹಲವು ರೋಗಗಳನ್ನು ಬಳುವಳಿಯಾಗಿ ಪಡೆದುಕೊಳ್ಳುತ್ತಿದ್ದಾರೆ ಎಂದು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ವಿವರಿಸಿದರು.

ಯಾಂತ್ರಿಕ ನಾಟಿ ಪದ್ಧತಿಯನ್ನು ಈಗಾಗಲೇ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆ ಯೂಕೋ ಸಂಘಟನೆಯ ಪ್ರಚಾರದಿಂದಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಭತ್ತದ ಕೃಷಿ ಉತ್ಪಾದನೆ ಹೆಚ್ಚಳಕ್ಕಾಗಿ ಸುಮಾರು 30 ಕ್ಕೂ ಅಧಿಕ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಪಾಳು ಬಿದ್ದ ಗದ್ದೆಯಲ್ಲಿ ಮತ್ತೆ ಭತ್ತದ ಉತ್ಪಾದನೆ ಮಾಡಿದಲ್ಲಿ ಮಾತ್ರ ಜಿಲ್ಲೆಯಲ್ಲಿ ಮುಂದೆ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ಸಾಧ್ಯ.

ನಾವು ಬೆಳೆದ ಭತ್ತದ ಅಕ್ಕಿಯನ್ನು ನಾವೇ ವರ್ಷಪೂರ್ತಿ ಸೇವಿಸಿದ್ದಲ್ಲಿ ಮಾತ್ರ ಆರೋಗ್ಯವಾಗಿರಲು ಸಾಧ್ಯ. ಇದೀಗ ಮುಂದುವರಿದ ರಾಷ್ಟ್ರಗಳು ಕೃಷಿಗೆ ಅಧಿಕ ಒತ್ತು ನೀಡುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳೂ ವಿದ್ಯಾರ್ಜನೆ ಹಾಗೂ ಉದ್ಯೋಗದೊಂದಿಗೆ ಕೃಷಿ ಕ್ಷೇತ್ರಕ್ಕೂ ಒಲವು ತೋರಿಸಲು ಮನವಿ ಮಾಡಿದರು.

ಯಾಂತ್ರಿಕ ನಾಟಿ ಪದ್ಧತಿ ಅಳವಡಿಸಿಕೊಂಡಲ್ಲಿ ಸಮಯ ಮಿತವ್ಯಯ, ಕಾರ್ಮಿಕರ ವೇತನದ ಉಳಿತಾಯ, ಕಡಿಮೆ ವೆಚ್ಚದಲ್ಲಿ ಅತ್ಯಲ್ಪ ಸಮಯದಲ್ಲಿ ಭತ್ತದ ನಾಟಿ ಕಾರ್ಯ ಮಾಡಬಹುದು ಎಂದರು. ಪ್ರಗತಿಪರ ಕೃಷಿಕ ಹಾಗೂ ನಾಡ ಮಣ್ಣ್ ನಾಡ ಕೂಳ್ ಕಾರ್ಯಕ್ರಮ ಸಂಯೋಜಕ ಚೆಪ್ಪುಡಿರ ಸುಜು ಕರುಂಬಯ್ಯ ಮಾತನಾಡಿ, ಯಾಂತ್ರಿಕ ವ್ಯವಸಾಯ, ಸಾವಯವ ಕೃಷಿ ಪದ್ಧತಿಯ ಅಗತ್ಯತೆ. ನಾಟಿ ಯಂತ್ರದ ಖರೀದಿ ಅವಶ್ಯಕತೆ, ಸಬ್ಸಿಡಿ ಸೌಲಭ್ಯ, ತಮಗೆ ಬೇಕಾದ ಜೀವನಾವಶ್ಯಕ ಪದಾರ್ಥಗಳನ್ನು ಭೂಮಿಯಲ್ಲಿಯೇ ಬಳಸುವದರಿಂದ ಸಿಗುವ ಲಾಭ ಇತ್ಯಾದಿಗಳನ್ನು ಮನವರಿಕೆ ಮಾಡಿದರು. ಕಾರ್ಯಕ್ರಮದಲ್ಲಿ ಕಳತ್ಮಾಡು ಲಯನ್ಸ್ ಪ್ರೌಢಶಾಲೆ, ಲಯನ್ಸ್ ಪ.ಪೂ. ಕಾಲೇಜು, ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಮಾಹಿತಿ ಪಡೆದರು. ಕೆಲವು ಉತ್ಸಾಹಿ ವಿದ್ಯಾರ್ಥಿಗಳು ನಾಟಿ ಯಂತ್ರದ ಮೇಲೆ ಕುಳಿತು ಯಾಂತ್ರಿಕ ನಾಟಿ ವಿಧಾನ ಅರಿತುಕೊಂಡರು. ಇದೇ ಸಂದರ್ಭ ವಿದ್ಯಾರ್ಥಿಗಳನ್ನು ಕೆಸರು ಗದ್ದೆಯಲ್ಲಿ ನಡೆಯಲು ಅವಕಾಶ ಮಾಡಿಕೊಡಲಾಯಿತು.

ಪೂರ್ವಜರ ಕೆಸರು ಗದ್ದೆಯ ಅನುಭವವನ್ನು ಹಲವು ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಓಡಾಡುವ ಮೂಲಕ ಅನುಭವಿಸಿದರು. ಇದೇ ಸಂದರ್ಭ ಮಾತನಾಡಿದ ಭೂ ಮಾಲೀಕ ಹಾಗೂ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಸುಮಾರು ಮೂರುವರೆ ಎಕರೆ ಗದ್ದೆಯಲ್ಲಿ ಈ ಬಾರಿ ಭತ್ತ ಬೆಳೆಯುವ ಉದ್ಧೇಶವಿದ್ದು ಕೆಪಿಆರ್ 1 ಭತ್ತದ ಬಿತ್ತನೆಯನ್ನು ಬಳಸಿರುವದಾಗಿ ಹೇಳಿದರು. ಪ್ರತಿಯೋರ್ವ ವಿದ್ಯಾರ್ಥಿಗಳು ತಮ್ಮಲ್ಲಿ ಭೂಮಿ ಇದ್ದಲ್ಲಿ ಕೃಷಿ ಚಟುವಟಿಕೆಯನ್ನು ಹಮ್ಮಿಕೊಳ್ಳಲು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ. ಸದಸ್ಯ ಕೊಲ್ಲೀರ ಧರ್ಮಜ, ಪಡಿಕಲ್ ಯದು, ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಕೊಲ್ಲೀರ ಧನು ಪೂಣಚ್ಚ, ಬಲ್ಯಮಂಡ ವಿಠಲ್, ಕೊಲ್ಲೀರ ಗಿರೀಶ್, ಕುಂದೀರ ಪ್ರಕಾಶ್, ಪಟ್ಟಡ ನೆಹರು, ಮಂಡೇಟಿರ ಅರವಿಂದ್ ಬೋಪಣ್ಣ, ಕೊಲ್ಲೀರ ಸೀತಮ್ಮ, ಕೊಲ್ಲೀರ ದೇಚಮ್ಮ, ಕೆ.ಎಸ್. ಮಾದಯ್ಯ, ಸರಸ್ವತಿ, ಕೃಷಿ ಇಲಾಖಾಧಿಕಾರಿ ಲವಿನಾ, ಯುಕೋ ಸಂಘಟನೆಯ ಸದಸ್ಯ ಲೋಹಿತ್ ಭೀಮಯ್ಯ, ಶಾಲಾ ಶಿಕ್ಷಕರಾದ ಮೇಕೇರಿರ ಝಾನ್ಸಿ, ಕಾಯೆರ ಉಷಾ ಕಿರಣ್, ನಾಗೇಶ್, ನಾಣಯ್ಯ, ವೀರಾಜಪೇಟೆ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಇ. ಸುರೇಂದ್ರ, ಶಿಕ್ಷಕಿ ಭಾಗ್ಯವತಿ, ಸಂದ್ಯಾ ಮುಂತಾದವರು ಪಾಲ್ಗೊಂಡಿದ್ದರು.

- ಟಿ.ಎಲ್. ಶ್ರೀನಿವಾಸ್