ವೀರಾಜಪೇಟೆ, ಆ. 17: ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಸಮಾಜ ಸೇವೆಗೆ ಆದ್ಯತೆ ನೀಡಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಇಂತಹ ಸಮಾಜ ಸೇವಾ ಸಂಸ್ಥೆಗಳ ಪ್ರಗತಿ ಹಾಗೂ ಬೆಳವಣಿಗೆಗೆ ಸಂಸ್ಥೆಯ ಸದಸ್ಯರುಗಳ ಮಹತ್ತರ ಜವಾಬ್ದಾರಿ ಇದೆ ಎಂದು ರೋಟರಿಯ ಜಿಲ್ಲಾ ಗವರ್ನರ್ ಎಂ.ಎಂ. ಸುರೇಶ್ ಚಂಗಪ್ಪ ಹೇಳಿದರು.

ವೀರಾಜಪೇಟೆ ರೋಟರಿ ಕ್ಲಬ್‍ಗೆ ಗವರ್ನರ್ ಅಧಿಕೃತ ಭೇಟಿ ಪ್ರಯುಕ್ತ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸುರೇಶ್ ಚಂಗಪ್ಪ ಅವರು; ಸಮಾಜ ಸೇವೆಯ ನಿಟ್ಟಿನಲ್ಲಿ ರೋಟರಿ ಸಂಸ್ಥೆಯ 6 ಯೋಜನೆಗಳು ಅನುಷ್ಠಾನಕ್ಕೆ ಬಂದಿದೆ. ಇದರಲ್ಲಿ ಕುಗ್ರಾಮದ ದುರ್ಗಮ ಪ್ರದೇಶದಲ್ಲಿರುವ ಕಡುಬಡವರ ಸೂರಿಗೆ ಸರಕಾರದಿಂದಲೂ ಅಸಾಧ್ಯವಾದ ವಿದ್ಯುತ್ ಯೋಜನೆ ಬಂಡೀಪುರದ ಬಳಿಯ ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಸುಮಾರು 150 ಮನೆಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕಕ್ಕೆ ಕಾರ್ಯಯೋಜನೆ ಚಾಲನೆಯಲ್ಲಿದೆ. ಎಲ್ಲೆಡೆಗಳಲ್ಲಿ ಸ್ವಚ್ಚತೆ ಕಾಪಾಡುವಿಕೆ, ವನಮಹೋತ್ಸವ, ಕ್ಷಯ ರೋಗ ನಿರ್ಮೂಲನೆ, ಶಿಕ್ಷಣದ ಸುಧಾರಣೆಗೆ ಒತ್ತು ನೀಡುವ ಸೇವೆಯನ್ನು ಯೋಜನೆಯಲ್ಲಿ ಅಳವಡಿಸಲಾಗಿದೆ. ಸಮಾಜದ ಬಡವರು, ನಿರ್ಗತಿಕರು, ಅಸಹಾಯಕರಿಗೆ ರೋಟರಿ ಸಂಸ್ಥೆ ಸಹಾಯ ಹಸ್ತ ನೀಡಲಿದೆ ಎಂದರು.

ಸಭೆಯನ್ನುದ್ದೇಶಿಸಿ ಅತಿಥಿಗಳಾಗಿ ಭಾಗವಹಿಸಿದ್ದ ಅಸಿಸ್ಟೆಂಟ್ ಗವರ್ನರ್ ಮಹೇಶ್ ನಾಲ್ವಡೆ, ರೋಟರಿ ಜೋನಲ್‍ನ ಹರಿಶಂಕರ್ ಪ್ರಸಾದ್ ಮಾತನಾಡಿದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಪಟ್ಟಣ ಪಂಚಾಯಿತಿಯ ಆರೋಗ್ಯ ಅಧಿಕಾರಿ ವೇಲ್ ಮುರುಗನ್, ಗೃಹ ರಕ್ಷಕ ದಳದ ಬೇಬಿ ರಾಯ್‍ಫೆಲ್, ಮೋಟಾರ್ ರ್ಯಾಲಿ ಪಟುಗಳಾದ ಜಗತ್‍ನಂಜಪ್ಪ, ಚೇತನ್, ನೀಲಂ ಹಾಗೂ ನಿಷ್ಠಾವಂತ ವರ್ತಕರಾದ ನರಸಿಂಹಭಟ್ ಇವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಇಲ್ಲಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ವೀರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಶಾಂತರಾಂ ಕಾಮತ್ ಮಾತನಾಡಿ, ಕ್ಲಬ್ ಕೈಗೊಂಡಿರುವ ಸೇವೆಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಕೆ.ಎಚ್. ಆದಿತ್ಯ ಉಪಸ್ಥಿತರಿದ್ದರು.

ಸಮಾರಂಭಕ್ಕೆ ಗೋಣಿಕೊಪ್ಪ, ಮೂರ್ನಾಡು, ಮಡಿಕೇರಿ ಸೇರಿದಂತೆ ವಿವಿಧೆಡೆಗಳಿಂದ ರೋಟರಿ ಪ್ರತಿನಿಧಿಗಳು ಆಗಮಿಸಿದ್ದರು.