ಸಿದ್ದಾಪುರ, ಆ. 16: ಹಾಡಹಗಲೇ ವ್ಯಕ್ತಿಯೋರ್ವರ ಮೇಲೆ ಕಾಡಾನೆ ಧಾಳಿ ಮಾಡಿದ್ದು, ಪರಿಣಾಮ ವ್ಯಕ್ತಿ ಗಾಯಗೊಂಡಿರುವ ಘಟನೆ ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ ನಡೆದಿದೆ.

ಬೆಟ್ಟದ ಕಾಡು ನಿವಾಸಿಯಾಗಿರುವ ಕೆ.ಎಸ್ ಉತ್ತಯ್ಯ (ಶ್ಯಾಂ-55) ಎಂಬವವರು ಬೆಳಗ್ಗೆ 9 ಗಂಟೆಗೆ ತನ್ನ ತೋಟದಲ್ಲಿ ಗಸ್ತು ತಿರುಗುತ್ತಿರುವ ಸಂದÀರ್ಭದಲ್ಲಿ ಕಾಡಾನೆಯೊಂದು ಏಕಾಎಕಿ ಧಾಳಿ ನಡೆಸಿ ಸೊಂಡಿಲಿನಿಂದ ಗುದ್ದಿದ ಪರಿಣಾಮ ಉತ್ತಯ್ಯನವರ ಬಲಕಾಲಿಗೆ ಗಾಯವಾಗಿದೆ. ಅದÀೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿದ್ದಾಪುರ ಸಮುದಾಯ ಆರೋಗ್ಯಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಸ್ಥಳಕ್ಕೆ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಬಾನಂಡ ದೇವಿಪ್ರಸಾದ್ ಭೇಟಿ ನೀಡಿ ಗಾಯಾಳುವಿನ ಯೋಗಕ್ಷೇಮ ವಿಚಾರಿಸಿದರು.

ಗ್ರಾಮಸ್ಥರ ಒತ್ತಾಯ: ನೆಲ್ಯಹುದಿಕೇರಿ ವ್ಯಾಪ್ತಿಯ ಬೆಟ್ಟದ ಕಾಡು, ನಲವತ್ತೇಕರೆ ಮತ್ತು ಅತ್ತಿಮಂಗಲ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು ಕಾಡಾನೆಯ ಉಪಟಳದಿಂದಾಗಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು, ಕಾರ್ಮಿಕರು ಭಯಬೀತರಾಗಿದ್ದಾರೆ. ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕೂಡಲೇ ಅರಣ್ಯಕ್ಕೆ ಅಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.