ಕೂಡಿಗೆ, ಆ. 16: ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ವಿಸ್ತಾರಗೊಳ್ಳುತ್ತಿದ್ದು, ಇಂದಿನ ಮಕ್ಕಳಲ್ಲಿ ನೈಜವಾಗಿ ಮೂಡಿ ಬರುವ ನಾಟಕಗಳು, ರಂಗಭೂಮಿ, ರಂಗಸಾಹಿತ್ಯದ ಬಗ್ಗೆ ಅರಿವು ಮೂಡಿಸುವದು ಅನಿವಾರ್ಯವಾಗಿದೆ ಎಂದು ಶಿರಂಗಾಲ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕುಶಾಲನಗರ ಹೋಬಳಿ ಘಟಕದ ಜಂಟಿ ಆಶ್ರಯದಲ್ಲಿ ಕೂಡಿಗೆಯ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗಭೂಮಿ ಹಾಗೂ ರಂಗ ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ರಂಗನಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಶಾಲನಗರದ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ಊ.ರಾ. ನಾಗೇಶ್ ಮಾತನಾಡಿ, ಜನಸಾಮಾನ್ಯರು ಟಿವಿ ಧಾರಾವಾಹಿಗಳತ್ತ ಮುಖಮಾಡಿ ಹಿಂದಿನ ನಾಟಕ ದೃಶ್ಯಗಳನ್ನೇ ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿದರು. ರಂಗನಂದನ ಕಾರ್ಯಕ್ರಮದಲ್ಲಿ ಬೆಂಗಳೂರಿನ ನವಚೇತನ ಲೀಲಾವತಿ ಅಶ್ವಥ್‍ನಾರಾಯಣ್ ತಂಡದವರಿಂದ ನಾಟಕಗಳು ನಡೆದವು.
ನಿರ್ದೇಶಕರಾದ ಅಣ್ಣಯ್ಯ ನೇತೃತ್ವದಲ್ಲಿ ಹಿನ್ನೆಲೆ ಗಾಯನದೊಂದಿಗೆ ಕುವೆಂಪು ಅವರ ಬೆರಳ್ಗೆ ಕೊರಳ್ ಮತ್ತು ಶ್ರೀರಾಮಪಾದುಕೆ ಪಟ್ಟಾಭಿಷೇಕ ನಾಟಕಗಳನ್ನು ಪ್ರದರ್ಶಿಸಲಾಯಿತು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೆಂಗಳೂರಿನ ನವಚೇತನ ಲೀಲಾವತಿ ಅಶ್ವಥ್‍ನಾರಾಯಣ್ ತಂಡದವರನ್ನು ಸನ್ಮಾನಿಸಲಾಯಿತು.
ಸಮಾರೋಪದ ಸಮಾರಂಭದಲ್ಲಿ ಶಿಕ್ಷಕಿ ಹಾಗೂ ಲೇಖಕಿ ಸುನೀತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ, ಹೋಬಳಿ ಘಟಕದ ಕಾರ್ಯದರ್ಶಿ ದಿನೇಶಾಚಾರಿ ಮಾತನಾಡಿದರು.
ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ರಂಗಸ್ವಾಮಿ, ವಿಜ್ಞಾನ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಫಿಲಿಪ್ ವಾಸ್, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಹೆಚ್.ಎಂ. ವೆಂಕಟೇಶ್ ಇದ್ದರು.