ಗೋಣಿಕೊಪ್ಪಲು, ಆ. 16: ಕೃಷಿಕರು ಯಾಂತ್ರೀಕೃತ ನಾಟಿಗೆ ಮುಂದಾಗುವ ಮೂಲಕ ಕೃಷಿ ಗದ್ದೆಯನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಪ್ರಗತಿಪರ ಕೃಷಿಕ ಸೊಮೇಂಗಡ ಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ಕುಮಟೂರು ಗ್ರಾಮದ ಕೃಷಿಕ ಕಳ್ಳಂಗಡ ಸುಬ್ಬಯ್ಯ ಅವರ ಗದ್ದೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪುತ್ತರಿ ರೈತ ಉತ್ಪಾದಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿತೆಯಲ್ಲಿ ಅವರು ಮಾತನಾಡಿದರು.
ಮಣ್ಣಿನ ಟ್ರೇ ಮೂಲಕ ಸಸಿಮಡಿ ತಯಾರಿಸುವಾಗ ಸಂಗ್ರಹಿಸುವ ಮಣ್ಣಿನಲ್ಲಿ ಕಲ್ಲಿನ ಪ್ರಮಾಣ ಹೆಚ್ಚಿದ್ದರೆ ಇಳುವರಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಮಣ್ಣಿನಲ್ಲಿ ಕಲ್ಲು ಇರದಂತೆ ಮುಂಜಾಗೃತೆ ವಹಿಸಬೇಕಿದೆ ಎಂದರು.
ಯುವ ಕೃಷಿಕ ಕಳ್ಳಂಗಡ ಸುಬ್ಬಯ್ಯ ಮಾತನಾಡಿ, ಯಾಂತ್ರೀಕೃತ ನಾಟಿ ಪದ್ದತಿಯಲ್ಲಿ ಪಾಸ್ಟಿಕ್ ಹೊದಿಕೆ ಹಾಗೂ ಮಣ್ಣಿನ ಸಸಿಮಡಿ ತಯಾರಿಕೆ ವಿಧಾನ ಹೆಚ್ಚು ಲಾಭದಾಯಕ. ಪ್ಲಾಸ್ಟಿಕ್ ಹೊದಿಕೆ ಬಳಸಿ ಸಸಿಮಡಿ ತಯಾರಿಸಲು ಕಡಿಮೆ ಬೆಲೆಯ ಪ್ಲಾಸ್ಟಿಕ್ ಹೊದಿಕೆ ಮಾತ್ರ ಬೇಕಾಗಿದ್ದು ರೈತರು ಸುಲಭವಾಗಿ ತಯಾರಿಸಿಕೊಳ್ಳಬಹುದು. ಮಣ್ಣು ಹಾಗೂ ಭತ್ತದ ಪೈರಿನ ಬೇರುಗಳು ಒಂದಕ್ಕೊಂದು ಬೆಸೆದು ಕೃತಕ ಟ್ರೇಯಂತೆ ಮಾರ್ಪಾಡು ಹೊಂದುವದರಿಂದ ಈ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಕೆವಿಕೆ ಸಸ್ಯ ಸಂರಕ್ಷಣಾ ತಜ್ಞ ವೀರೇಂದ್ರಕುಮಾರ್ ಮಾತನಾಡಿ, ರೈತರು ಭತ್ತ ಬೆಳೆಯಲು ಯಾಂತ್ರೀಕೃತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸಬಹುದು. ಬೆಂಕಿ ರೋಗ ನಿರೋಧಕ ಭತ್ತದ ತಳಿಗಳಾದ ಕೆಪಿಆರ್ 1 ಹಾಗೂ ಕೆಪಿಆರ್ 2 ತಳಿಗಳನ್ನು ಹೆಚ್ಚಾಗಿ ಬೆಳೆಯುವಂತೆ ರೈತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೆವಿಕೆ ಮುಖ್ಯಸ್ಥ ಸಾಜು ಜಾರ್ಜ್, ವಿಜ್ಞಾನಿ ಡಾ. ಪ್ರಭಾಕರ್ ಹಾಗೂ ಪುತ್ತರಿ ರೈತ ಉತ್ಪಾದಕ ಸಂಸ್ಥೆ ನಿರ್ದೇಶಕ ನವೀನ್ ಪಾಲ್ಗೊಂಡಿದ್ದರು. ಸುಮಾರು 7 ಏಕ್ರೆ ಗದ್ದೆಯಲ್ಲಿ ಯಾಂತ್ರೀಕೃತ ನಾಟಿ ಮಾಡಲಾಯಿತು. ಸ್ಥಳೀಯ ಕೃಷಿಕರು ಪಾಲ್ಗೊಂಡಿದ್ದರು.