ಮಡಿಕೇರಿ, ಆ. 16: ರಾಜ್ಯದ ವಿವಿಧ ಅಕಾಡೆಮಿಗಳ ಪೈಕಿ ಎರಡು ಅಕಾಡೆಮಿಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಇದೀಗ ಅಕಾಡೆಮಿ ಅಧ್ಯಕ್ಷಗಿರಿ ಹಾಗೂ ಸದಸ್ಯ ಸ್ಥಾನಕ್ಕೆ ತೀವ್ರ ಕಸರತ್ತು ನಡೆಯುತ್ತಿದೆ. ಆಗಸ್ಟ್ 13ಕ್ಕೆ ಈ ಹಿಂದೆ ಅಧ್ಯಕ್ಷರುಗಳಾಗಿದ್ದ ಕೊಡವ ಅಕಾಡೆಮಿಯ ಬಿ.ಎಸ್. ತಮ್ಮಯ್ಯ ಹಾಗೂ ಅರೆಭಾಷಾ ಅಕಾಡೆಮಿಯ ಕೊಲ್ಯದ ಗಿರೀಶ್ ಅವರುಗಳ ನೇತೃತ್ವದ ತಂಡದ ಅಧಿಕಾರಾವಧಿ ಪೂರ್ಣಗೊಂಡಿದ್ದು, ಇದೀಗ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಬೇಕಾಗಿದೆ. 2018 ಚುನಾವಣೆಯ ವರ್ಷವೂ ಆಗಿದ್ದು, ಈ ನೇಮಕಾತಿಯಲ್ಲಿ ವಿವಿಧ ಲೆಕ್ಕಾಚಾರಗಳೂ ಆಡಳಿತ ಪಕ್ಷದಲ್ಲಿ ನಡೆಯುತ್ತಿವೆ. ಸಾಹಿತಿಗಳು, ಜಾನಪದ ತಜ್ಞರೋ ಅಥವಾ ಪಕ್ಷದಲ್ಲಿ ಕೆಲಸ ನಿರ್ವಹಿಸಿದವರೋ ಎಂಬ ಜಿಜ್ಞಾಸೆಯ ನಡುವೆ ಈ ಪಟ್ಟಕ್ಕೆ ಹಲವು ಕಸರತ್ತುಗಳು ನಡೆಯುತ್ತಿದ್ದು, ದಿನೇ ದಿನೇ ಕುತೂಹಲ ಕೆರಳಿಸುತ್ತಿವೆ.

ಕಳೆದ 20 ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಕೊಡವ ಅಕಾಡೆಮಿ ಸ್ಥಾನಕ್ಕೆ ಜಿಲ್ಲೆಯ ಹಲವರ ಹೆಸರು ಚಲಾವಣೆಯಲ್ಲಿದೆಯಾದರೂ, ಒಂದಿಬ್ಬರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಆಡಳಿತಾರೂಢ ಕಾಂಗ್ರೆಸ್‍ನ ಕೆಲವು ಪ್ರಮುಖರು ಒಬ್ಬೊಬ್ಬರ ಪರವಿರುವದು ಸುಲಲಿತ ಆಯ್ಕೆಗೆ ಅಡಚಣೆಯಾಗುತ್ತಿದೆ ಎನ್ನಲಾಗುತ್ತಿದೆ.

ಕೊಡವ ಅಕಾಡೆಮಿ ಸ್ಥಾನಕ್ಕೆ ಸಾಹಿತಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ, ಕಲಾವಿದ ಮಾದೇಟಿರ ಬೆಳ್ಯಪ್ಪ ಅವರ ಹೆಸರಿನೊಂದಿಗೆ ಪಕ್ಷದಲ್ಲಿ ಕೆಲಸ ನಿರ್ವಹಣೆ, ಸಂಘಟನೆಯ ಆಧಾರದಲ್ಲಿ ಇನ್ನು ಹಲವರ ಹೆಸರು ಚಲಾವಣೆಯಲ್ಲಿದೆ.

(ಮೊದಲ ಪುಟದಿಂದ) ಪಿ.ಕೆ. ಪೊನ್ನಪ್ಪ ಅವರ ಹೆಸರೂ ಈ ಪಟ್ಟಿಯಲ್ಲಿರುವ ಮತ್ತೊಂದು ಪ್ರಬಲ ಹೆಸರು. ಒಂದು ವಲಯದ ಪ್ರಕಾರ ಬಹುತೇಕ ಇವರ ಆಯ್ಕೆ ಖಚಿತವಾಗಿದೆ ಎನ್ನಲಾಗಿದೆ.

ಇವರೊಂದಿಗೆ ಆಪಟ್ಟಿರ ಟಾಟು ಮೊಣ್ಣಪ್ಪ ಅವರು ಯುವ ಒಕ್ಕೂಟದಲ್ಲಿ ಮಾಡಿದ ಸಾಧನೆ, ಪಕ್ಷದ ಹಿನ್ನೆಲೆ ಮುಂದಿಟ್ಟು ಪ್ರಯತ್ನ ನಡೆಸುತ್ತಿದ್ದಾರೆ. ನೆರವಂಡ ಉಮೇಶ್ ಅವರ ಹೆಸರೂ ಪಟ್ಟಿಯಲ್ಲಿದೆ. ಇದೆಲ್ಲದರ ನಡುವೆ ಈ ಬಾರಿ ಕೊಡವ ಭಾಷಿಕ ಜನಾಂಗದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆಯೊಂದಿಗೆ ಈ ಪಟ್ಟಿಯಲ್ಲಿ ಕೊರಕುಟ್ಟಿರ ಸರಾ ಚಂಗಪ್ಪ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಬಗ್ಗೆ ಭಾಷಿಕ ಜನಾಂಗದವರ ಸಭೆಯನ್ನೂ ನಡೆಸಿರುವದು ಹೊಸ ಬೆಳವಣಿಗೆ. ಕೊನೆಯ ಕ್ಷಣದಲ್ಲಿ ತೆನ್ನೀರ ಮೈನಾ ಅವರೂ ಅಧ್ಯಕ್ಷ ಸ್ಥಾನದ ಬೇಡಿಕೆಯನ್ನು ನಾಯಕರ ಮುಂದಿಟ್ಟಿದ್ದಾರೆ. ವಿವಿಧ ರೀತಿಯ ಒತ್ತಡಗಳು, ಬೇಡಿಕೆಗಳನ್ನು ಪಕ್ಷದ ಪ್ರಮುಖರು ಯಾವ ರೀತಿ ನಿಭಾಯಿಸಿ ಆಯ್ಕೆಯನ್ನು ಅಂತಿಮಗೊಳಿಸಲಿದ್ದಾರೆ ಎಂಬ ಕುತೂಹಲ ಎದುರಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿರುವದರಿಂದ ಈ ವಿಚಾರದಲ್ಲಿ ಬಿಜೆಪಿ ತಟಸ್ಥವಾಗಿದೆ ಎನ್ನಲಾಗಿದೆ. ಉಸ್ತುವಾರಿ ಸಚಿವ ಸೀತಾರಾಂ ಅವರು ಆಗಮಿಸಿದ್ದ ಸಂದರ್ಭವೂ ಹಲವು ಪ್ರಯತ್ನಗಳು ನಡೆದಿವೆ.

ಅರೆಭಾಷಾ ಅಕಾಡೆಮಿ

ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 2012ರಲ್ಲಿ ಅರೆಭಾಷಾ ಸಂಸ್ಕøತಿ, ಸಾಹಿತ್ಯ ಅಕಾಡೆಮಿಯನ್ನು ಪ್ರಾರಂಭಿಸಲಾಗಿದ್ದು, ಈ ಅಕಾಡೆಮಿ ಕೊಡಗಿನೊಂದಿಗೆ ದಕ್ಷಿಣ ಕನ್ನಡದ ವ್ಯಾಪ್ತಿಯನ್ನೂ ಒಳಗೊಂಡಿದೆ. ಈತನಕ ಅರೆಭಾಷಾ ಅಕಾಡೆಮಿ ಎರಡು ಅಧ್ಯಕ್ಷರನ್ನು ಕಂಡಿದೆ. ಸಂಪಾಜೆಯ ಎನ್.ಎಸ್. ದೇವಿಪ್ರಸಾದ್ ಆರಂಭಿಕ ಅಧ್ಯಕ್ಷರಾಗಿದ್ದು, ಇದೀಗ ತಾನೆ ಮುಕ್ತಾಯಗೊಂಡ ಕಳೆದ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಯುವಕ ಕೊಲ್ಯದ ಗಿರೀಶ್ ಅವರು ಅಧ್ಯಕ್ಷರಾಗಿ ಗಮನ ಸೆಳೆದಿದ್ದಾರೆ. ಅರೆಭಾಷಾ ಅಕಾಡೆಮಿ ಎರಡು ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವದರಿಂದ ಈ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖರ ಒತ್ತಡ ಜೋರಾಗಿದೆ. ಈ ತನಕದ ಎರಡು ಅಧ್ಯಕ್ಷರು ಕೊಡಗಿನವರಾಗಿದ್ದು, ಈ ಬಾರಿ ದಕ್ಷಿಣ ಕನ್ನಡಕ್ಕೆ ಪ್ರಾತಿನಿಧ್ಯಕ್ಕಾಗಿ ಒತ್ತಾಯ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ರಮಾನಾಥ ರೈ ಅವರು ಕೂಡ ಈ ಬೇಡಿಕೆಯ ಪರವಾಗಿ ನಿಂತಿರುವದರಿಂದ ಈ ಬಾರಿ ಕೊಡಗು ಜಿಲ್ಲೆಯಿಂದ ಯಾರೊಬ್ಬರೂ ಪ್ರಬಲವಾಗಿ ಅಧ್ಯಕ್ಷ ಸ್ಥಾನದ ಬೇಡಿಕೆ ಮುಂದಿಟ್ಟಿಲ್ಲ ಎಂದು ತಿಳಿದುಬಂದಿದೆ.

ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಸುಳ್ಯದ ಪಿ.ಸಿ. ಜಯರಾಂ, ಬದ್ದಡ್ಕದ ತೇಜಕುಮಾರ್, ಬೆಳ್ಳಾರೆಯ ಕಾಮಧೇನು ಮಾಧವ ಗೌಡ, ಅರಂತೋಡುವಿನ ಕುರುಂಜಿ ಗಂಗಾಧರ ಗೌಡ ಅವರುಗಳ ಹೆಸರು ಚಲಾವಣೆಯಲ್ಲಿದೆ. ಇಲ್ಲಿಯೂ ವಿವಿಧ ಕಸರತ್ತುಗಳು ನಡೆಯುತ್ತಿದ್ದು, ಪಟ್ಟ ಯಾರಿಗೆ ಒಲಿಯಲಿದೆ ಎಂದು ಕಾದು ನೋಡಬೇಕಿದೆ.