ಶನಿವಾರಸಂತೆ, ಆ. 16: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೊಡ್ಲಿಪೇಟೆ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಜಂಟಿ ಸಹಯೋಗದೊಂದಿಗೆ 2017-18ನೇ ಸಾಲಿನ ಕೊಡ್ಲಿಪೇಟೆ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟ ಕೊಡ್ಲಿಪೇಟೆ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಶಂಭುಲಿಂಗಪ್ಪ ಉದ್ಘಾಟಿಸಿದರು.

ವಿದ್ಯಾರ್ಥಿಗಳು ಪಾಠಗಳ ಜೊತೆ ಆಟೋಟಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ಸೋಮವಾರಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ಸ್ಫೂರ್ತಿಯನ್ನು ಬೆಳೆಸಿಕೊಂಡು ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಬೇಕು. ಜಿಲ್ಲಾಮಟ್ಟ, ರಾಜ್ಯಮಟ್ಟಗಳಲ್ಲಿ, ರಾಷ್ಟ್ರಮಟ್ಟ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಎಂದು ಹರಸಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಆಟೋಟಗಳಲ್ಲಿಯೂ ಭಾಗವಹಿಸುವಂತೆ ಪ್ರೋತ್ಸಾಹ ಅಗತ್ಯವೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಗೌರವ ಅಧ್ಯಕ್ಷ ಎಸ್.ಎಸ್. ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳ ಸಮಯ ಪಾಲನೆಯ ಜೊತೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಆಟೋಟಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ವಿದ್ಯಾಸಂಸ್ಥೆಯ ಖಜಾಂಚಿ ಡಾ. ಉದಯಕುಮಾರ್, ಜಿ.ಪಂ. ಸದಸ್ಯ ಪುಟ್ಟರಾಜು, ಬ್ಯಾಡಗೊಟ್ಟ ಪಂಚಾಯಿತಿ ಅಧ್ಯಕ್ಷೆ ನಿರ್ಮಲ, ಬೆಸೂರು ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಸುರೇಶ್, ಹಂಡ್ಲಿ ಪಂಚಾಯಿತಿ ಅಧ್ಯಕ್ಷ ಸಂದೀಪ್, ತಾ.ಪಂ. ಸದಸ್ಯ ಕುಶಾಲಪ್ಪ, ಸಂಪನ್ಮೂಲ ವ್ಯಕ್ತಿ ಸುರೇಶ್, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪರಮೇಶ್, ನಿರ್ದೇಶಕರುಗಳಾದ ಸಿ.ಟಿ. ನಾಗರಾಜ್, ಶಿವಪ್ರಕಾಶ್, ಹರೀಶ್, ನಿವೃತ್ತ ಪ್ರಾಂಶುಪಾಲ ನಾಗಭೂಷಣ್, ಸಂಸ್ಥೆಯ ಬೋಧಕರು, ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್. ಅಬ್ದುಲ್ ರಬ್ ಸ್ವಾಗತಿಸಿ, ಶಿಕ್ಷಕ ಕಿರಣ್ ಕುಮಾರ್ ನಿರೂಪಿಸಿ, ಶಿಕ್ಷಕಿ ಬಿ.ಕೆ. ಬಾನುಮತಿ ವಂದಿಸಿದರು.