ಮಡಿಕೇರಿ, ಆ. 16: ತಾ. 25 ರಿಂದ ಆಚರಿಸಲ್ಪಡುವ ಗೌರಿ ಗಣೇಶೋತ್ಸವವನ್ನು ಕೊಡಗಿನಲ್ಲಿ ಜನತೆ ಶಾಂತಿಯುತವಾಗಿ ಶ್ರದ್ಧಾ ಭಕ್ತಿಯಿಂದ ಯಾವದೇ ಅನಾಹುತ ಗಳಿಗೆ ಅವಕಾಶ ನೀಡದೆ ಆಚರಿಸು ವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮಾತನಾಡಿ, ಗಣೇಶೋತ್ಸವ ಆಚರಣೆ ಸಂಬಂಧ ವಿವಿಧ ಇಲಾಖಾಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ. ಉತ್ಸವ ಆಚರಣೆ ಹಿನ್ನೆಲೆ ಗಣೇಶೋತ್ಸವ ಸಮಿತಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚಿಸಲಾಗಿದೆ. ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಎಲ್ಲಾ ಸಮಿತಿಗಳು ಒತ್ತು ನೀಡಬೇಕು. ಮಣ್ಣಿನಿಂದ ತಯಾರಿಸಿದ ಉತ್ಸವ ಮೂರ್ತಿಗಳನ್ನು ಬಳಸುವಂತಾಗಬೇಕು ಎಂದರು. ನಗರ ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಸಂಬಂಧ ನಗರಸಭಾ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ಗೌರಿ ಗಣೇಶ ಸಮಿತಿಯವರು ಸಾರ್ವಜನಿಕ ಸ್ಥಳಗಳಲ್ಲಿ ಗೌರಿಗಣೇಶ ಮೂರ್ತಿಯನು ಪ್ರತಿಷ್ಠಾಪಿಸುವ ಮೊದಲು ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಧ್ವನಿವರ್ಧಕ, ಮೆರವಣಿಗೆ ಕಾರ್ಯಕ್ರಮಗಳಿಗೆ ಕೂಡ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು. ಸಂಬಂಧಪಟ್ಟ ನಗರಸಭೆ, ಚೆಸ್ಕಾಂ, ಅಗ್ನಿಶಾಮಕ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳಿಂದ ಗೌರಿ ಗಣೇಶ ಪ್ರತಿಷ್ಠಾಪನೆ ಸ್ಥಳ, ಬ್ಯಾನರ್ ಬಂಟಿಂಗ್ಸ್ ಅಳವಡಿಕೆಯ ಬಗ್ಗೆ ಅನುಮತಿ ಪತ್ರವನ್ನು ಪಡೆದಿರಬೇಕು. ಗೌರಿಗಣೇಶ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳ ಬಗ್ಗೆ ಮುಂಚಿತವಾಗಿ ಠಾಣೆಗೆ ಮಾಹಿತಿ ನೀಡಬೇಕು, ಉತ್ಸವ ಮೂರ್ತಿಯ ಸುರಕ್ಷತೆಯ ನಿಟ್ಟಿನಲ್ಲಿ ಮೂರ್ತಿ ಪ್ರತಿಷ್ಠಾಪನೆ,

(ಮೊದಲ ಪುಟದಿಂದ) ವಿಸರ್ಜನೆ ಹಾಗೂ ಕಾರ್ಯಕ್ರಮಗಳ ವೇಳೆ ಸಮಿತಿಯ ಸದಸ್ಯರು ಹಾಗೂ ಸ್ವಯಂ ಸೇವಕರನ್ನು ನೇಮಿಸಿಕೊಂಡು ಅಂತಹವರನ್ನು ಗುರುತಿಗೆ ಸಮವಸ್ತ್ರ ಹಾಗೂ ಬ್ಯಾಡ್ಜ್ ವ್ಯವಸ್ಥೆ ಮಾಡಿಕೊಳ್ಳಬೇಕು.

ಸ್ವಯಂ ಸೇವಕ ಸಮಿತಿ ಸದಸ್ಯರ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯುಳ್ಳ ಪಟ್ಟಿಯನ್ನು ಆಯಾ ಠಾಣೆಗೆ ನೀಡಬೇಕು, ಭದ್ರತೆಯ ದೃಷ್ಟಿಯಿಂದ ಪೆಂಡಾಲುಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಸೆರೆಹಿಡಿಯಲು ಸಿ.ಸಿ.ಟಿ.ವಿ. ಯನ್ನು ಅಳವಡಿಸಿಕೊಳ್ಳಬೇಕು. ಗೌರಿ ಗಣೇಶ ವಿಗ್ರಹ, ಶಾಮಿಯಾನ ಅಥವಾ ಪೆಂಡಾಲುಗಳನ್ನು ದಿನದ 24 ಗಂಟೆಗಳ ಕಾವಲಿಗೆ ಸಮಿತಿ ಸದಸ್ಯರನ್ನು ನೇಮಿಸಿಕೊಂಡು ಮುಂಜಾಗ್ರತೆ ಕ್ರಮವಹಿಸಬೇಕು. ಗೌರಿಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಜಾಗದಲ್ಲಿ ಅಗ್ನಿ ಅವಘಡಗಳನ್ನು ತಡೆಯಲು ಮರಳು, ನೀರು ಹಾಗೂ ಅಗ್ನಿಶಾಮಕ ಸಲಕರಣೆಗಳನ್ನು ಸಂಗ್ರಹಿಸಿಡಬೇಕು. ಧ್ವನಿವರ್ದಕ ಬಳಕೆಗೆ ಸಂಬಂಧಪಟ್ಟವರಿಂದ ಅನುಮತಿ ಪಡೆದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸಬೇಕು ಹಾಗೂ ಧ್ವನಿವರ್ಧಕ ಧ್ವನಿಮಟ್ಟವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದವರ ಜೊತೆ ಸಂಪರ್ಕ ಇಟ್ಟುಕೊಂಡು ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿರುವ ಗೌರಿಗಣೇಶ ಮೂರ್ತಿಯ ಮಂಟಪಗಳಿಗೆ ನೀಡಲಾಗಿರುವ ತಾತ್ಕಾಲಿಕ ವಿದ್ಯುತ್ ಸರಬರಾಜಿನಲ್ಲಿ ಯಾವದೇ ತರಹದ ಶಾರ್ಟ್ ಸಕ್ರ್ಯೂಟ್‍ಗಳು ಆಗದಂತೆ ಉತ್ತಮ ಉಪಕರಣಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಕೈಗೊಳ್ಳಬೇಕು.

ಗೌರಿಗಣೇಶ ಮೂರ್ತಿಯ ಸುರಕ್ಷತೆಯು ಸಮಿತಿಯವರ ಜವಾಬ್ದಾರಿಯಾಗಿದ್ದು, ಈ ಬಗ್ಗೆ ಯಾವದೇ ಅವಘಡಗಳು ಸಂಭವಿಸಿದಲ್ಲಿ ಸಮಿತಿಯವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವದು, ಮೆರವಣಿಗೆ ಮತ್ತು ವಿಜರ್ಸನೆಯ ವೇಳೆ ವಿಸರ್ಜನಾ ಸ್ಥಳಗಳಲ್ಲಿ ಸೂಕ್ತ ಬೆಳಕಿನ ಅವಶ್ಯಕತೆಗೆ ವಿದ್ಯುತ್‍ಚ್ಛಕ್ತಿ ಅಥವಾ ಜನರೇಟರ್‍ಗಳನ್ನು ಅಳವಡಿಸಿಕೊಳ್ಳಬೇಕು. ನುರಿತ ಈಜುರಾರರನ್ನೇ ವಿಸರ್ಜನೆಗೆ ನೇಮಿಸಬೇಕು, ಮುನ್ನೆಚರಿಕಾ ಕ್ರಮವಾಗಿ ಲೈಫ್ ಜಾಕೆಟ್‍ಗಳನ್ನು ಕಡ್ಡಾಯವಾಗಿ ಉಪಯೋಗಿಸುವದು. ಗೌರಿಗಣೇಶ ವಿಜರ್ಸನಾ ದಿನ ಮೆರವಣಿಗೆ ಮಾರ್ಗವನ್ನು ನಿರ್ದಿಷ್ಟಪಡಿಸಿ, ಮುಂಗಡವಾಗಿ ಮಾರ್ಗವನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಠಾಣೆಗೆ ಮಾಹಿತಿ ನೀಡಬೇಕು ಹಾಗೂ ಆ ಮಾರ್ಗಗಳನ್ನು ಯಾವದೇ ಕಾರಣಕ್ಕೂ ಬದಲಿಸಬಾರದು ಎಂದರು.

ರಸ್ತೆ, ಫುಟ್‍ಪಾತ್‍ಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು. ಗೌರಿಗಣೇಶ ಪ್ರತಿಷ್ಠಾಪನೆ, ವಿಸರ್ಜನೆಯ ಬಗ್ಗೆ ಬ್ಯಾನರ್, ಬಂಟಿಂಗ್ಸ್‍ಗಳನ್ನು ಸಾರ್ವಜನಿಕ ವಸ್ತುಗಳ, ಕಟ್ಟಡಗಳ ಮೇಲೆ (ವಿದ್ಯುತ್ ಕಂಬ, ಸೂಚನಾ ಫಲಕಗಳು ಇತ್ಯಾದಿ) ಅಳವಡಿಸಬಾರದು. ಇಂತಹವುಗಳ ಮೇಲೆ ಅಳವಡಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವದು. ಗೌರಿಗಣೇಶ ಪ್ರತಿಷ್ಠಾಪನೆ, ವಿಸರ್ಜನೆಯ ಬಗ್ಗೆ ಬ್ಯಾನರ್, ಬಂಟಿಂಗ್ಸ್‍ಗಳನ್ನು ಸಂಬಂಧಪಟ್ಟ ಆರ್‍ಟಿಓ ಇಲಾಖೆಯ ಅನುಮತಿ ಪಡೆಯದೇ ಯಾವದೇ ವಾಹನಗಳ ಮೇಲೆ ಅಳವಡಿಸುವಂತಿಲ್ಲ. ಅನುಮತಿ ಪಡೆಯದೇ ವಾಹನಗಳ ಮೇಲೆ ಅಳವಡಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವದು. ಯಾವದೇ ಸಂಘ - ಸಂಸ್ಥೆ, ಖಾಸಗಿ ಅಥವಾ ವೈಯಕ್ತಿಕವಾಗಿ ಗಣಪತಿ ಪ್ರತಿಷ್ಠಾಪನೆ ಸಂಬಂಧ ಸಾರ್ವಜನಿಕರಿಂದ ಬಲವಂತವಾಗಿ ಚಂದಾ ವಸೂಲು ಮಾಡಬಾರದು.

ಸುಪ್ರೀಂ ಕೋರ್ಟ್ ಆದೇಶದಂತೆ ನಿಷೇಧಕ್ಕೆ ಒಳಪಟ್ಟಿರುವ ಡಿಜೆ ಸೌಂಡ್ ಸಿಸ್ಟಮ್‍ನ್ನು ಮೆರವಣಿಗೆಯ, ಸಾಂಸ್ಕøತಿಕ ಕಾರ್ಯಕ್ರಮದ ಸಮಯದಲ್ಲಿ ಬಳಸುವಂತಿಲ್ಲ. ಗೌರಿಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಹಾಗೂ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ಅನ್ಯ ಧರ್ಮಿಯವರಿಗೆ, ಸಾರ್ವಜನಿಕರಿಗೆ ಯಾವದೇ ತೊಂದರೆಯಾಗಂತೆ ಎಚ್ಚರ ವಹಿಸಬೇಕು. ಚರ್ಚ್, ಮಸೀದಿ, ದೇವಸ್ಥಾನಗಳ ಮುಂದೆ ಮತ್ತು ಜನಸಂದಣಿ ಪ್ರದೇಶಗಳ 50 ಮೀಟರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಪಟಾಕಿ ಸಿಡಿಮದ್ದು ಸಿಡಿಸಬಾರದು. ಗೌರಿಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಹಾಗೂ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ಅನ್ಯ ಧರ್ಮದ ಬಗ್ಗೆ ಘೋಷಣೆ, ಭಾಷಣ ಮಾಡುವಂತಿಲ್ಲ. ವಿಸರ್ಜನಾ ಮೆರವಣಿಗೆಯ ವೇಳೆ ಸುಗಮ ಸಂಚಾರಕ್ಕೆ ಯಾವದೇ ತೊಂದರೆಯುಂಟಾಗದಂತೆ ಸಮಿತಿಯವರು ಎಚ್ಚರ ವಹಿಸಬೇಕು, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಯಾವದೇ ರೀತಿ ಧ್ವತಿವರ್ಧಕ ಬಳಕೆ ಮಾಡುವಂತಿಲ್ಲ. ಅನಧಿಕೃತವಾಗಿ ವಿದ್ಯುತ್ ಸಂಪರ್ಕವನ್ನು ವಿದ್ಯುತ್ ಕಂಬಗಳಿಂದ ಪಡೆಯಬಾರದು ಎಂದು ಎಸ್‍ಪಿ ಸೂಚನೆ ನೀಡಿದರು. ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಇದ್ದರು.