ಮಡಿಕೇರಿ, ಆ. 17: ನಗರಸಭೆಯ ಸಾಮಾನ್ಯ ಸಭೆಯಲ್ಲಿಂದು ಸದಸ್ಯ ಕೆ.ಎಂ. ಗಣೇಶ್ ಆರಂಭದಲ್ಲೇ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ವಿರುದ್ಧ ಹರಿಹಾಯ್ದರು. ನಗರದಲ್ಲಿ ಯಾವದೇ ಅಭಿವೃದ್ಧಿ ಕೆಲಸ ಗಳಾಗುತ್ತಿಲ್ಲ. ಸ್ವಚ್ಛತೆ ಮಾಯವಾಗಿದೆ ಯುಜಿಡಿ ಕಾಮಗಾರಿ ಅಪೂರ್ಣ ವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಆಯುಕ್ತರೊಂದಿಗೆ ಅಧ್ಯಕ್ಷರು ಹೊಂದಾಣಿಕೆ ಮಾಡಿ ಕೊಂಡು ಕೆಲಸ ಮಾಡಬೇಕು. ಅದುಬಿಟ್ಟು ಆಯುಕ್ತರ ವರ್ಗಾವಣೆ ಯೊಂದೆ ನಿಮ್ಮ ಅಜೆಂಡಾ ಆಗಿದೆ. ಹೊಂದಾಣಿಕೆಯಿಂದ ಕೆಲಸ ಮಾಡುವದಾದರೆ ಮಾಡಿ ಇಲ್ಲವಾದರೆ ಅಧಿಕಾರದಿಂದ ಇಳಿಯಿರಿ. ಇಲ್ಲವಾದರೆ ನಾನು ಈ ಸಭೆಯನ್ನು ಬಹಿಷ್ಕರಿಸುತ್ತೇನೆ ಎಂದರು.

ಗಣೇಶ್ ಅವರ ಈ ಮಾತುಗಳಿಂದ ಕೆಂಡಾಮಂಡಲರಾದ ನಗರಸಭಾ ಸದಸ್ಯರುಗಳಾದ ಹೆಚ್.ಎಂ. ನಂದಕುಮಾರ್, ಪ್ರಕಾಶ್ ಆಚಾರ್ಯ, ವೆಂಕಟೇಶ್ ಇವರುಗಳು ಗಣೇಶ್ ವಿರುದ್ಧ ಹರಿಹಾಯ್ದರು. ಕೇವಲ ಅಧ್ಯಕ್ಷರಿಗೆ ಮಾತ್ರ ನಗರದ ಬಗ್ಗೆ ಕಾಳಜಿ ಇರಬೇಕೆಂಬದು ಸರಿಯಲ್ಲ. ಆಯುಕ್ತರಿಗೂ ಜವಾಬ್ದಾರಿ ಇದೆ ಎಂದರು. ಫುಟ್ಪಾತ್‍ನಲ್ಲಿ ಕೆಸ ಬೆಳೆಯುತ್ತದೆ. ರಸ್ತೆಗಳಲ್ಲಿ ನಡೆದಾಡಲು ಆಗುತ್ತಿಲ್ಲ. ಅಧ್ಯಕ್ಷರು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ, ಈ ರೀತಿ ಆಗುವದಿಲ್ಲ ಎಂದು ಗಣೇಶ್ ಹೇಳಿದಾಗ ಕೆಸ ಬೆಳೆದರೆ ಗುದ್ದಲಿ ಯಿಂದ ಅಗೆದು ತೆಗೆಯುವದು ಅಧ್ಯಕ್ಷರ ಕೆಲಸವಲ್ಲ ಅದಕ್ಕೆ ಸಿಬ್ಬಂದಿ ಗಳಿದ್ದಾರೆ. ಆಯುಕ್ತರು ಸಿಬ್ಬಂದಿ ಮೂಲಕ ಕೆಲಸ ಮಾಡಿಸಬೇಕೆಂದು ನಂದಕುಮಾರ್ ಹೇಳಿದರು. ಕಾಂಗ್ರೆಸ್‍ನಲ್ಲಿದ್ದಾಗ ಎಲ್ಲಾ ವ್ಯವಸ್ಥೆಗಳು ಉತ್ತಮವಾಗಿತ್ತು. ಈಗ ಮಾತ್ರ ಹಾಳಾಗಿದೆ ಅಲ್ವಾ ಎಂದು ಸದಸ್ಯ ಪ್ರಕಾಶ್ ಆಚಾರ್ಯ ಅವರು ಕೆ.ಎಂ. ಗಣೇಶ್ ಪಕ್ಷಾಂತರಗೊಂಡ ಬಗ್ಗೆ ಪರೋಕ್ಷವಾಗಿ ಕುಟುಕಿದರು.

ಹೆರಿಗೆಯಾದ ಹತ್ತು ದಿನಗಳಲ್ಲೆ ಕರ್ತವ್ಯಕ್ಕೆ ಹಾಜರಾದ ಆಯುಕ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಒಗ್ಗಟ್ಟು ಮುಖ್ಯ ಎಂದು ಗಣೇಶ್ ಮಾತನಾಡುತ್ತಿದ್ದಂತೆ ಪ್ರತಿಕ್ರಿಯಿಸಿದ ಸದಸ್ಯ ವೆಂಕಟೇಶ್ ಹೆರಿಗೆಯಾದ ಹತ್ತು ದಿನದಲ್ಲೇ ಕೆಲಸಕ್ಕೆ ಬರಬೇಕೆಂದು ನಾವು ಹೇಳಿಲ್ಲ. ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ಭಾಷಣ ನಿಲ್ಲಿಸಿ ಎಂದು ತಿರುಗೇಟು ನೀಡಿದರು. ಹೀಗೆ ಪರಸ್ಪರ ಮಾತಿನ ಚಕಮಕಿ ನಡೆದು ಗಣೇಶ್ ಸಭೆ ಬಹಿಷ್ಕರಿಸಲು ಮುಂದಾದಾಗ ಉಪಾಧ್ಯಕ್ಷ ಪ್ರಕಾಶ್ ಸಮಾಧಾನ ಪಡಿಸಿದರು. ಆದರೂ ಕಲಹ ಮುಗಿಯಲಿಲ್ಲ ಅಧ್ಯಕ್ಷರೆಂದ ಮೇಲೆ ಕೆಲಸ ಮಾಡಿಸುವ ಯೋಗ್ಯತೆ ಇರಬೇಕು ಎಂದು ಗಣೇಶ್ ಹೇಳಿದಾಗ ನಿಮ್ಮ ಯೋಗ್ಯತೆ ಏನೆಂಬದು ಗೊತ್ತು ನನ್ನ ಯೋಗ್ಯತೆ ಬಗ್ಗೆ ಮಾತನಾಡಬೇಡಿ ಎಂದು ಕಾವೇರಮ್ಮ ಪ್ರತ್ಯುತ್ತರ ನೀಡಿದರು.

ವಿನಾಕಾರಣ ಜಗಳವಾಡಬೇಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಚಿಂತಿಸಿ ಎಂದು ಸದಸ್ಯ ಟಿ.ಹೆಚ್. ಉದಯಕುಮಾರ್ ಹೇಳಿದರು. ಸದಸ್ಯ ಅಮೀನ್ ಮೊಯ್ಸಿನ್ ಮಾತನಾಡಿ, ಅಧ್ಯಕ್ಷರು ಹಾಗೂ ಆಯುಕ್ತರ ನಡುವೆ ಹೊಂದಾಣಿಕೆ ಯಿದ್ದರೆ ಮಾತ್ರ ಅಭಿವೃದ್ಧಿ. ಕೆಲವರು ಆಯುಕ್ತರ ಪರ, ಇನ್ನೂ ಕೆಲವರು ಅಧ್ಯಕ್ಷರ ಪರ ಮಾತನಾಡುತ್ತಾರೆ ಎಂದು ಹೇಳಿದಾಗ ಆಕ್ಷೇಪಿಸಿದ ಯಾರು ಯಾರ ಪರ ಎಂಬದನ್ನು ಹೆಸರಿಟ್ಟು ಹೇಳಿ ಅದನ್ನು ಬಿಟ್ಟು ವೃಥಾ ಆರೋಪ ಮಾಡಬೇಡಿ ಎಂದು ವಿಪಕ್ಷ ಸದಸ್ಯ ಹೇಳಿದರು. ಕಾಂಗ್ರೆಸ್‍ನಲ್ಲಿದ್ದಾಗ ಅಧ್ಯಕ್ಷರನ್ನು ಹಾಡಿಹೊಗಳಿದ್ರಿ, ವಿರೋಧ ಪಕ್ಷಕ್ಕೆ ಬಂದಾಗ ತೆಗಳುತ್ತಿದ್ದೀರಿ ಎಂದು ಅಮೀನ್, ಗಣೇಶ್ ಅವರನ್ನು ಕುರಿತು ಹೇಳಿದಾಗ ವಿಪಕ್ಷ ಸದಸ್ಯರು ವಿನಾಕಾರಣ ತೆಗಳುವದಿಲ್ಲ ವಿಪಕ್ಷಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡಬೇಡಿ ಎಂದು ಬಿಜೆಪಿ ಸದಸ್ಯರು ಅಮೀನ್ ವಿರುದ್ಧ ಹರಿಹಾಯ್ದರು. ಗಣೇಶ್ ಅವರ ಬಗ್ಗೆ ಮಾತನಾಡಿದರೆ, ನಿಮಗೇನು ನಷ್ಟ ಎಂದು ಮನ್ಸೂರ್ ಬಿಜೆಪಿ ಸದಸ್ಯರನ್ನು ಛೇಡಿಸಿದರು.

ಕಾಂಗ್ರೆಸ್‍ನ ಹಿರಿಯ ಸದಸ್ಯ ಚುಮ್ಮಿ ದೇವಯ್ಯ ಮಾತನಾಡಿ, ಈ ರೀತಿಯ ಕಚ್ಚಾಟ ಒಳ್ಳೆಯ ಬೆಳವÀಣಿಗೆಯಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಜನತೆ ನಮ್ಮನ್ನು ‘ಜೋಕರ್’ಗಳಂತೆ ನೋಡುತ್ತಿದ್ದಾರೆ. ಆದ್ದರಿಂದ ವ್ಯವಸ್ಥೆಗಳನ್ನು ಸರಿಪಡಿಸಿ ಕೊಂಡು ಅಭಿವೃದ್ಧಿಯತ್ತ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ ಎಂದು ಸಲಹೆಯಿತ್ತರು.