ಮಡಿಕೇರಿ, ಆ. 16: ಇಂದು ಛಾಯಾಚಿತ್ರದ ಹೊರತಾಗಿ ಪತ್ರಿಕೋದ್ಯಮಕ್ಕೆ ಅಸ್ತಿತ್ವವೇ ಇಲ್ಲ. ಈ ಕಾರಣದಿಂದಾಗಿ ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಹೇಗೆ ಮುಖ್ಯವೋ ಅದೇ ರೀತಿಯಲ್ಲಿ ಛಾಯಾಚಿತ್ರವೂ ಮುಖ್ಯ ಎಂದು ಕೊಡಗು ಪ್ರೆಸ್‍ಕ್ಲಬ್‍ನ ಸಹಕಾರ್ಯದರ್ಶಿ ವಿಘ್ನೇಶ್ ಎಂ. ಭೂತನಕಾಡು ಹೇಳಿದರು.
ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ‘ಪತ್ರಿಕೋದ್ಯಮದಲ್ಲಿ ಛಾಯಾಚಿತ್ರದ ಮಹತ್ವ’ ವಿಷಯದ ಬಗ್ಗೆ ನಡೆದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಬ್ಬ ಪತ್ರಿಕಾ ಛಾಯಾಗ್ರಾಹಕ ಸಾಮಾನ್ಯ ಕಾರ್ಯಕ್ರಮದಿಂದ ಹಿಡಿದು ಕ್ರೀಡೆ, ಸಿನಿಮಾ, ಅಪಘಾತ ಸೇರಿದಂತೆ ಸುದ್ದಿಗೆ ಸಂಬಂಧಿಸಿದ ಎಲ್ಲಾ ಚಿತ್ರಗಳನ್ನು ಸೆರೆ ಹಿಡಿಯುತ್ತಾನೆ. ಚಿತ್ರಗಳು ಸಮಾಜಕ್ಕೆ ಪರಿಣಾಮಕಾರಿಯಾಗಿರಬೇಕು ಎಂದರು. ನಿಖರವಾದ ಮಾಹಿತಿ ಯುಕ್ತ ಮತ್ತು ಸಮಯಕ್ಕೆ ನಿರ್ಧಿಷ್ಟ ಕ್ಷಣದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಲು ಸಮರ್ಥ ವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ನ್ಯೂಸ್ ಡಾಟ್ ಕಾಂನ ಸುರೇಶ್ ಬಿಳಿಗೇರಿ, ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಮೋನಿಕಾ, ಇಳಯರಾಜ ಮತ್ತಿತರರು ಹಾಜರಿದ್ದರು.