ಸರ್ಕಾರಿ ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ರಾಜ್ಯ ಸರ್ಕಾರದ ಆದೇಶವಿದ್ದರೂ, ಜಿಲ್ಲೆಯಲ್ಲಿ ಜಿಲ್ಲಾಡಳಿತ ಯಾವದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಸಭಾತ್ಯಾಗ ಮಾಡಿದ ಘಟನೆ ನಡೆಯಿತು. ಜಿ.ಪಂ. ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರಾಜ್ಯದಲ್ಲಿ ಕನ್ನಡ ನಾಮಫಲಕ ಅಳವಡಿಸಲು ಮೊದಲ ಆದ್ಯತೆ ನೀಡುವಂತೆ ಆದೇಶ ನೀಡಿದೆ. ಈ ಹಿಂದಿನ ಹಲವು ಜಿ.ಪಂ. ಕೆಡಿಪಿ ಸಭೆಗಳಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತಿದ್ದರೂ ಜಿಲ್ಲಾಡಳಿತ ಯಾವದೇ ಕ್ರಮಕೈಗೊಂಡಿಲ್ಲ. ಅ.2ರ ಗಾಂಧಿ ಜಯಂತಿಗೂ ಮುನ್ನ ಕನ್ನಡ ನಾಮಫಲಕ ಅಳವಡಿಕೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳದಿದ್ದಲ್ಲಿ ಜಿಲ್ಲಾಡಳಿತ ಭವನದೆದುರು ಕಸಾಪ ವತಿಯಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುವದಾಗಿ ಎಚ್ಚರಿಸಿದ ಅವರು, ತನಗೆ ಬಿ.ಪಿ. ಇದ್ದು, ಉಪವಾಸ ಸಂದರ್ಭ ಏನಾದರೂ ಸಮಸ್ಯೆ ಕಂಡು ಬಂದಲ್ಲಿ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದರು. ಅ.2ರೊಳಗೆ ಕನ್ನಡ ನಾಮಫಲಕ ಅಳವಡಿಕೆಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಕಸಾಪ ನಾಮಫಲಕ ಅಳವಡಿಕೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಊರಿನ ಹೆಸರುಗಳ ನಾಮಫಲಕಗಳನ್ನು ಅಳವಡಿಸುವ ಸಂದರ್ಭದಲ್ಲಿ ಕನ್ನಡದಲ್ಲಿ ಹೆಸರನ್ನು ಅಭಾಸವಾಗಿ ಬರೆಸಲಾಗಿದೆ. ಇಂತಹ ತಪ್ಪನ್ನು ಸರಿಪಡಿಸುವಂತೆ ನಾಮಫಲಕಗಳ ಬಿತ್ತಿಚಿತ್ರವನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಕುಶಾಲನಗರ ಕನ್ನಡ ಭವನ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ. ಈ ಸಂಬಂಧ ತುರ್ತು ಕ್ರಮಕ್ಕೆ ಆಗ್ರಹಿಸಿದರು. ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದಿಂದ ಹಲವು ಇಲಾಖೆಗಳು ತಮ್ಮ ಕಚೇರಿಗೆ ಬೇಕಾದ ಪೆನ್, ಪುಸ್ತಕ, ಪ್ಯಾಡ್ ಇನ್ನಿತರ ವಸ್ತುಗಳನ್ನು ಖರೀದಿಸಿದ್ದು, ಹಲವು ವರ್ಷಗಳಿಂದ ಬಿಲ್ ಪಾವತಿಸಿಲ್ಲ. ಕೂಡಲೇ ಬಿಲ್ ಪಾವತಿಸುವಂತೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳು ವಂತೆ ಒತ್ತಾಯಿಸಿದರು.ಕೈಗೊಳ್ಳಬೇಕು. ಕಿತ್ತಳೆ ಬೆಳೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಬಿಟ್ಟಂಗಾಲ ಬಳಿ ಅನಧಿಕೃತವಾಗಿ ದೊಡ್ಡ ಹೊಂಡವನ್ನು ನಿರ್ಮಾಣ ಮಾಡಿ ಮರಳು ತೆಗೆಯುತ್ತಿದ್ದಾರೆ. ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಭಾನುವಾರದಂದು ಇಂಗ್ಲೀಷ್ ಶಿಕ್ಷಣ ತರಬೇತಿ ನೀಡುವ ಬಗ್ಗೆ ಗೊಂದಲಗಳು ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳಿಗೆ ಯಾವದೇ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ವಸತಿ ಯೋಜನೆಗೆ ಸಂಬಂಧಿಸಿದಂತೆ 2016-17ನೇ ಸಾಲಿನಲ್ಲಿ 36,076 ಗುರಿ ಇದ್ದು, ಇದರಲ್ಲಿ 499 ಮನೆಗಳ ಕಾಮಗಾರಿ ಪೂರ್ಣಗೊಂಡಿವೆ. 2043 ಮನೆಗಳ ಕಾರ್ಯ ವಿವಿಧ ಹಂತದಲ್ಲಿದೆ. 1,103 ಮನೆಗಳ ಕಾಮಗಾರಿ ಆರಂಭ ವಾಗಬೇಕಿದೆ ಎಂದು ಜಿ.ಪಂ. ಉಪ ಕಾರ್ಯದರ್ಶಿ ಸಿದ್ದಲಿಂಗ ಮೂರ್ತಿ ಮಾಹಿತಿ ನೀಡಿದರು.

ಜಿಲ್ಲೆಯ ನಾನಾ ಕಡೆಗಳಲ್ಲಿ ವಿದ್ಯುತ್ ಮಾರ್ಗದ ತಂತಿಗಳು ಕೆಳಕ್ಕೆ ಬೀಳುವಂತಿದ್ದು, ಇದನ್ನು ಕೂಡಲೇ ಸರಿಪಡಿಸುವಂತೆ ಎಂ.ಕೆ. ವಿಜು ಸುಬ್ರಮಣಿ ಸೂಚನೆ ನೀಡಿದರು.

ಜಿಲ್ಲೆಯ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಬೇಕು. ಕೇರಳ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ತೆರಿಗೆ ಸಂಗ್ರಹಿಸಬೇಕು.

ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಂಘ ಸ್ಥಾಪನೆಗೆ ಬೇಡಿಕೆ ಇದ್ದು, ಈ ಸಂಬಂಧ ಮಾರ್ಗ ಸೂಚಿ ತಯಾರಿಸಿ ಹಾಲು ಸಂಗ್ರಹಣೆಗೆ ಕ್ರಮ ಕೈಗೊಳ್ಳುವಂತೆ ಎಂ.ಕೆ. ವಿಜುಸುಬ್ರಮಣಿ ಸೂಚನೆ ನೀಡಿದರು.