ಮಡಿಕೇರಿ, ಆ.17: ಜಿಲ್ಲೆಯ ಆದಿವಾಸಿ ಗಿರಿಜನ ಹಾಡಿಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ, ವಸತಿ ಯೋಜನೆ ಮತ್ತಿತರ ಕನಿಷ್ಟ ಮೂಲ ಸೌಲಭ್ಯ ಒದಗಿಸಲು ಮುಂದಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ನಿರ್ದೇಶನ ನೀಡಿದ್ದಾರೆ. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಜಿ.ಪಂ. ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿನ ಆದಿವಾಸಿಗಳು ಸೇರಿದಂತೆ ಎಲ್ಲಾ ಬಡಜನರಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾಳಜಿಯಿಂದ ಕಾರ್ಯ ನಿರ್ವಹಿಸ ಬೇಕಿದೆ. ಸರ್ಕಾರವು ಹಲವು ಸೌಲಭ್ಯಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಅಧಿಕಾರಿಗಳು ಪ್ರಯತ್ನಿಸ ಬೇಕಿದೆ ಎಂದು ಹೇಳಿದರು.

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ವಿಜು ಸುಬ್ರಮಣಿ ವಿಷಯ ಪ್ರಸ್ತಾಪಿಸಿ ಸರ್ಕಾರ ಗಿರಿಜನರ ಶ್ರೇಯೋಬಿ üವೃದ್ಧಿಗಾಗಿ ಕೊಡಗು ಜಿಲ್ಲೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಹಾಗೆಯೇ ದಿಡ್ಡಳ್ಳಿ ಗಿರಿಜನರ ಬದುಕಿಗಾಗಿ

(ಮೊದಲ ಪುಟದಿಂದ) ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ವಸತಿಯನ್ನು ಕಲ್ಪಿಸಿದೆ. ಆದರೆ ಜಿಲ್ಲೆಯಲ್ಲಿ ಇನ್ನೂ ಶೇ.90 ರಷ್ಟು ಹಾಡಿಯಲ್ಲಿ ಗಿರಿಜನರ ಬದುಕು ದುಸ್ತರವಾಗಿದೆ. ಆದ್ದರಿಂದ ಗಿರಿಜನ ಹಾಡಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಿದೆ ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಆದಿವಾಸಿ ಜನರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆದಿವೆ. ಇನ್ನೂ ಪರಿಣಾಮಕಾರಿಯಾಗಿ ತಲುಪಿಸಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್ ಮಾತನಾಡಿ, ದೊಡ್ಡರೇಷ್ಮೆ ಹಡ್ಲುವಿನಲ್ಲಿ ವಾಸಿಸುವ ಆದಿವಾಸಿಗಳು ಈಗ ಇರುವ ಸ್ಥಳದ ಬದಲಾಗಿ ಬೇರೆ ಕಡೆ ನಿವೇಶನ ಒದಗಿಸುವಂತೆ ಮನವಿ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರವನ್ನು ಟೆಂಡರ್ ಮೂಲಕವೇ ಸರಬರಾಜು ಮಾಡಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಕೆ. ವಿಜು ಸುಬ್ರಮಣಿ, ಎಂ.ಪಿ. ಶಶಿ ಸುಬ್ರಮಣಿ ಮತ್ತು ಎಚ್.ಆರ್. ಶ್ರೀನಿವಾಸ್ ಒತ್ತಾಯಿಸಿದರು.

ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್ ಎಂ.ಎಸ್.ಪಿ.ಟಿ.ಎಸ್. ಮೂಲಕವೇ ಆಹಾರ ಪದಾರ್ಥ ಪೂರೈಕೆಯಾಗುತ್ತಿದೆ. ಎಂ.ಎಸ್.ಪಿ.ಟಿ.ಎಸ್ ಅವರು ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸಿ ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಾರೆ ಎಂದು ಮಾಹಿತಿ ನೀಡಿದರು.

ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಎಲ್ಲಾ ಪ್ರಾಥಮಿಕ, ಸಮುದಾಯ ಆಸ್ಪತ್ರೆಗಳು ಅಶುಚಿತ್ವದಿಂದ ಕೂಡಿವೆ. ಆದ್ದರಿಂದ ಆಸ್ಪತ್ರೆಯ ಸುತ್ತಮುತ್ತ ಉತ್ತಮ ವಾತಾವರಣ ನಿರ್ಮಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಗಿಡಗಂಟಿಗಳನ್ನು ಕಡಿಯುವದು, ಶೌಚಾಲಯ ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳುವದು ಮತ್ತಿತರ ಬಗ್ಗೆ ಗಮನ ಹರಿಸಬೇಕಿದೆ.

ಆರೋಗ್ಯ ರಕ್ಷಾ ಸಮಿತಿ ಸಭೆಗಳು ಕಾಲಮಿತಿಯೊಳಗೆ ನಡೆಸಬೇಕು. ಆಸ್ಪತ್ರೆಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಜಿ.ಪಂ. ಉಪಾಧ್ಯಕೆÀ್ಷ ಲೋಕೇಶ್ವರಿ ಗೋಪಾಲ್ ಮಾತನಾಡಿ, ಸೋಮವಾರಪೇಟೆ ತಾಲೂಕಿನಲ್ಲಿ ಇಬ್ಬರು ಡೆಂಗ್ಯೂ ಜ್ವರದಿಂದ ನಿಧನ ಹೊಂದಿದ್ದಾರೆ. ಡೆಂಗ್ಯೂ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಆಶಾ, ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಂಬಂಧಿಸಿದಂತೆ ಮಾಹಿತಿ, ಶಿಕ್ಷಣ, ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡು ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಕುರಿತು ಮಾತನಾಡಿದ ಎಂ.ಪಿ. ಶಶಿ ಸುಬ್ರಮಣಿ, ನಾಪೋಕ್ಲು, ಮೂರ್ನಾಡು ವ್ಯಾಪ್ತಿಗಳಲ್ಲಿ ಹೊಳೆಯಿಂದ ಬರುವ ನೀರನ್ನು ಶುದ್ಧೀಕರಿಸದೆ ನೇರವಾಗಿ ಬಳಕೆ ಮಾಡುತ್ತಿರುವದರಿಂದ ಜಾಂಡೀಸ್‍ಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಶುದ್ಧೀಕರಣ ಘಟಕ ತೆರೆದು ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಸಲಹೆ ಮಾಡಿದರು.

ಜಿ.ಪಂ. ಉಪಾಧ್ಯಕೆÀ್ಷ ಲೋಕೇಶ್ವರಿ ಗೋಪಾಲ್ ಅವರು ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಪ್ರವಾಸಿಗರ ವಾಹನಗಳಿಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರವಾಸೋಧ್ಯಮ ಅಧಿಕಾರಿಗೆ ನಿರ್ದೇಶನ ನೀಡಿದರು.

ಸರ್ಕಾರ ಪ್ರಸಕ್ತ ವರ್ಷ ಕೊಡಗು ಜಿಲ್ಲೆಗೆ ಕೃಷಿ ಭಾಗ್ಯ ಯೋಜನೆಯನ್ನು ಪ್ರಕಟಿಸಿದ್ದು, ಜಿಲ್ಲೆಯಲ್ಲಿ 300 ಕೃಷಿ ಹೊಂಡ ನಿರ್ಮಾಣಕ್ಕೆ ಗುರಿ ಹೊಂದಲಾಗಿದೆ. ಪ್ರತೀ ತಾಲೂಕಿಗೂ ತಲಾ 100 ಕೃಷಿ ಹೊಂಡ ನಿರ್ಮಾಣ ಮಾಡಲಾಗುವದು ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ರಾಜು ಮಾಹಿತಿ ನೀಡಿದರು.

ಈ ಸಂಬಂಧ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪುಟ್ಟಸ್ವಾಮಿ, ಜಿಲ್ಲೆಯಲ್ಲಿ ಒಟ್ಟು 25 ಗ್ರಾಮಗಳಿಗೆ ಸಂಚಾರಿ ವಾಹನದ ಮೂಲಕ ಆಹಾರ ಪೂರೈಕೆ ಯಾಗುತ್ತಿದ್ದು, ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪರಿಶೀಲಿಸ ಲಾಗುವದು ಎಂದು ಹೇಳಿದರು.

ಪಡಿತರ ಚೀಟಿಗಾಗಿ ಹೊಸದಾಗಿ 7 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಈಗಾಗಲೇ ಒಂದು ಸಾವಿರ ಅರ್ಜಿಗಳನ್ನು ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಆರ್‍ಟಿಸಿ ಮಾಡಿಸಿಕೊಳ್ಳದ ಶಾಲೆಗಳು ಕೂಡಲೇ ಆರ್.ಟಿ.ಸಿ. ಮಾಡಿಸಿಕೊಳ್ಳಲು ಗಮನಹರಿಸಬೇಕು. ಗುಣಮಟ್ಟದ ಸಮವಸ್ತ್ರ ಪೂರೈಕೆಗೆ ಸರ್ಕಾರದ ಗಮನ ಸೆಳೆಯುವಂತೆ ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ವಿಜುಸುಬ್ರಮಣಿ ಒತ್ತಾಯಿಸಿದರು.

ಜಿಲ್ಲೆಯ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಂತೆ ಕಾಳು ಮೆಣಸು ಗಿಡಗಳನ್ನು ವಿತರಿಸಬೇಕು. ಈ ಸಂಬಂಧ ರೈತರಿಂದ ಅರ್ಜಿ ಆಹ್ವಾನಿಸುವಂತೆ ಸಲಹೆ ಮಾಡಿದ ಶಶಿ ಸುಬ್ರಮಣಿ, ಜೇನುಹುಳುಗಳ ರಕ್ಷಣೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಿತ್ತಳೆ ಬೆಳೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಬಿಟ್ಟಂಗಾಲ ಬಳಿ ಅನಧಿಕೃತವಾಗಿ ದೊಡ್ಡ ಹೊಂಡವನ್ನು ನಿರ್ಮಾಣ ಮಾಡಿ ಮರಳು ತೆಗೆಯುತ್ತಿದ್ದಾರೆ. ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಭಾನುವಾರದಂದು ಇಂಗ್ಲೀಷ್ ಶಿಕ್ಷಣ ತರಬೇತಿ ನೀಡುವ ಬಗ್ಗೆ ಗೊಂದಲಗಳು ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳಿಗೆ ಯಾವದೇ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ವಸತಿ ಯೋಜನೆಗೆ ಸಂಬಂಧಿಸಿದಂತೆ 2016-17ನೇ ಸಾಲಿನಲ್ಲಿ 36,076 ಗುರಿ ಇದ್ದು, ಇದರಲ್ಲಿ 499 ಮನೆಗಳ ಕಾಮಗಾರಿ ಪೂರ್ಣಗೊಂಡಿವೆ. 2043 ಮನೆಗಳ ಕಾರ್ಯ ವಿವಿಧ ಹಂತದಲ್ಲಿದೆ. 1,103 ಮನೆಗಳ ಕಾಮಗಾರಿ ಆರಂಭ ವಾಗಬೇಕಿದೆ ಎಂದು ಜಿ.ಪಂ. ಉಪ ಕಾರ್ಯದರ್ಶಿ ಸಿದ್ದಲಿಂಗ ಮೂರ್ತಿ ಮಾಹಿತಿ ನೀಡಿದರು.

ಜಿಲ್ಲೆಯ ನಾನಾ ಕಡೆಗಳಲ್ಲಿ ವಿದ್ಯುತ್ ಮಾರ್ಗದ ತಂತಿಗಳು ಕೆಳಕ್ಕೆ ಬೀಳುವಂತಿದ್ದು, ಇದನ್ನು ಕೂಡಲೇ ಸರಿಪಡಿಸುವಂತೆ ಎಂ.ಕೆ. ವಿಜು ಸುಬ್ರಮಣಿ ಸೂಚನೆ ನೀಡಿದರು.

ಜಿಲ್ಲೆಯ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಬೇಕು. ಕೇರಳ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ತೆರಿಗೆ ಸಂಗ್ರಹಿಸಬೇಕು.

ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಂಘ ಸ್ಥಾಪನೆಗೆ ಬೇಡಿಕೆ ಇದ್ದು, ಈ ಸಂಬಂಧ ಮಾರ್ಗ ಸೂಚಿ ತಯಾರಿಸಿ ಹಾಲು ಸಂಗ್ರಹಣೆಗೆ ಕ್ರಮ ಕೈಗೊಳ್ಳುವಂತೆ ಎಂ.ಕೆ. ವಿಜುಸುಬ್ರಮಣಿ ಸೂಚನೆ ನೀಡಿದರು.