ಮಡಿಕೇರಿ, ಆ. 16: ಮನುಷ್ಯ ಜೀವನದಲ್ಲಿ ಸತ್ಯತೆ, ವಿಶ್ವಾರ್ಥತೆ, ಪವಿತ್ರತೆ ಎಂಬ ಮೂರು ಸೂತ್ರಗಳನ್ನು ಮೈಗೂಡಿಸಿಕೊಂಡರೆ, ಉತ್ತಮ ಮಾರ್ಗದಿಂದ ಸಾಧನೆಯನ್ನು ಕಂಡುಕೊಳ್ಳಬಹುದು ಎಂದು ಬೆಂಗಳೂರು ರಾಮಕೃಷ್ಣ ಆಶ್ರಮದ ತ್ಯಾಗೀಶ್ವರಾನಂದ ಮಹಾರಾಜ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಪ್ರಥಮ ದರ್ಜೆ ಸರಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ವಿಶ್ವ ಮಾನವ ಸ್ವಾಮಿ ವಿವೇಕಾನಂದರ ದಿವ್ಯವಾಣಿಗಳಿಂದ ಆಕರ್ಷಿತರಾಗಿ ಭಾರತಕ್ಕೆ ಬಂದ ಸಹೋದರಿ ನಿವೇದಿತಾ ಅವರು, ಆ ಮೂಲಕ ಸಾಧನೆ ತೋರುತ್ತಾ, ಸತ್ಸಂಗಿಗಳಿಗೆ ವಿಶ್ವಮಾತೆಯಾಗಿ ಮಾರ್ಗದರ್ಶನ ನೀಡಿದರೆಂದು ಸ್ವಾಮೀಜಿ ಬಣ್ಣಿಸಿದರು.

ಇಂದಿನ ಕಲುಷಿತ ವಾತಾವರಣದಲ್ಲಿ ಸಿಲುಕಿ ಯುವ ಜನಾಂಗ ಹಾದಿ ತಪ್ಪುತ್ತಿದ್ದಾರೆ ಎಂದು ವಿಷಾದಿಸಿದ ಸ್ವಾಮೀಜಿ, ಈ ದಿಸೆಯಲ್ಲಿ ಸಹೋದರಿ ನಿವೇದಿತಾ ಅವರ 150ನೇ ಜಯಂತಿ ಆಚರಣೆ ಮೂಲಕ ಮಠದಿಂದ ದೇಶದೆಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಈ ನಿಟ್ಟಿನಲ್ಲಿ ಕೊಡಗಿನ ವಿದ್ಯಾರ್ಥಿಗಳಿಗೂ ಮೌಲ್ಯ ಜೀವನದೆಡೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳನ್ನು ಆಯೋಜಿಸಲಾಗುವದು ಎಂದರಲ್ಲದೆ, ವಿದ್ಯಾರ್ಥಿ ಸಮೂಹದಿಂದ ಸಾಮಾಜಿಕ ಪರಿವರ್ತನೆ ತರಲಾಗುವದು ಎಂದು ಅಭಿಪ್ರಾಯಪಟ್ಟರು.

ತಮ್ಮ 31ನೇ ವಯಸ್ಸಿನಲ್ಲಿ ಇಂಗ್ಲೆಂಡ್‍ನಿಂದ ಭಾರತಕ್ಕೆ ಆಗಮಿಸಿದ ಮಾರ್ಗರೇಟ್ ಎಲಿಜಿಬೆತ್ ನೋಬಲ್ ಈ ಮಣ್ಣಿನ ಮಗಳಂತೆ ಎಲ್ಲರಿಗೆ ಸೋದರಿ ಅಥವಾ ಸಹೋದರಿಯಾಗಿ ನಿವೇದಿತಾ ಎಂದು ನಾಮಕರಣಗೊಂಡು, ಯೋಗಿ ಅರವಿಂದರಿಂದ ಮಹಾ ಮಾತೆ ಎಂದು ಕರೆಸಿಕೊಂಡಿದ್ದಾಗಿ ತ್ಯಾಗೀಶ್ವರಾ ನಂದರು ನೆನಪಿಸಿದರು. ದೇಶದ ಯುವ ಜನತೆ ಸ್ವಾಮಿ ವಿವೇಕಾನಂದ ಹಾಗೂ ನಿವೇದಿತಾರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ರಾಷ್ಟ್ರಕ್ಕಾಗಿ ಬಾಳುವಂತೆ ಕರೆ ನೀಡಿದ ಸ್ವಾಮೀಜಿ, ಆ ಮುಖಾಂತರ ತಮ್ಮ ಹೆತ್ತವರು, ಗುರುಗಳು, ಸಮಾಜ, ದೇಶಕ್ಕೆ ಕೀರ್ತಿವಂತರಾಗಬೇಕೆಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪಾನಂದ ಮಹಾರಾಜ್ ಆಶಯ ನುಡಿಗಳನ್ನು ಆಡಿದರು. ಪ್ರಾಂಶುಪಾಲೆ ಪ್ರೊ. ಚಿತ್ರಾ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ.ಕೆ.ಸಿ. ದಯಾನಂದ ಸ್ವಾಗತಿಸಿ, ಪತ್ರಕರ್ತ ಚಿ.ನಾ. ಸೋಮೇಶ್ ವಂದಿಸಿದರು.