ಗೋಣಿಕೊಪ್ಪಲು, ಆ. 17 : ಆನೆಗಳು ಗ್ರಾಮಕ್ಕೆ ನುಗ್ಗುವ ಜಾಗದಲ್ಲಿ ಬೆಂಕಿ ಇಟ್ಟು ಆನೆಗಳಲ್ಲಿ ಭಯ ಹುಟ್ಟಿಸುವ ಕಾರ್ಯಾಚರಣೆಗೆ ತಿತಿಮತಿ ರ್ಯಾಪಿಡ್ ರೆಸ್ಪಾನ್ಸ್ ತಂಡ ಮುಂದಾಗಿದೆ.

ನೊಕ್ಯಾ ಗ್ರಾಮಕ್ಕೆ ರಾತ್ರಿ ಲಗ್ಗೆ ಇಡುತ್ತಿರುವ ಕಾಡಾನೆಗಳ ಮಾರ್ಗಗಳನ್ನು ಪತ್ತೆ ಹಚ್ಚಿರುವ ತಂಡ ರಾತ್ರಿ ಕಾರ್ಯಾಚರಣೆಗೆ ಮುಂದಾಗಿದೆ. ಕಳೆದ 10 ದಿನಗಳ ಹಿಂದಷ್ಟೆ ಇದೇ ಕಾರ್ಯಾಚರಣೆ ನಡೆಸಿ ಗ್ರಾಮಕ್ಕೆ ಬಾರದಂತೆ ಯೋಜನೆ ರೂಪಿಸಿದ್ದರು. ಇದರಂತೆ ಆನೆಚೌಕೂರು ವನ್ಯಜೀವಿ ವಲಯದ ಅರಣ್ಯದಿಂದ ಬರುವ ಆನೆಗಳು ನೊಕ್ಯಾ ಗ್ರಾಮಕ್ಕೆ ನುಸುಳಿ ನಷ್ಟ ಮಾಡುತ್ತಿದ್ದು, ಗ್ರಾಮಸ್ಥರ ಮನವಿಯಂತೆ ತಂಡವು ಸ್ಥಳ ಪರಿಶೀಲನೆ ನಡೆಸಿ ರಾತ್ರಿ ಕಾರ್ಯಾಚರಣೆ ನಡೆಸಿ ಗ್ರಾಮಕ್ಕೆ ಬರದಂತೆ ನಿಯಂತ್ರಿಸಲು ಮುಂದಾಗಿದೆ.

ಅರಣ್ಯದಿಂದ ಬರುವ ಆನೆಗಳು ಅಲ್ಲಿನ ಆನೆ ಕಂದಕವನ್ನು ತುಳಿದು ದಾರಿ ಮಾಡಿಕೊಂಡಿವೆ. ಇದೇ ಮಾರ್ಗದಲ್ಲಿ ಬರುವದರಿಂದ ರಸ್ತೆಗೆ ಅಡ್ಡವಾಗಿ ಬೆಂಕಿ ಇಟ್ಟು ಆನೆಗಳಲ್ಲಿ ಭಯ ಮೂಡಿಸಲು ಯೋಜನೆ ರೂಪಿಸಲಾಗಿದೆ.