*ಗೋಣಿಕೊಪ್ಪಲು, ಆ. 16: ದೇಶದ ಬಗ್ಗೆ ಅಭಿಮಾನ, ಗೌರವ, ದೇಶಭಕ್ತಿ ಬೆಳೆಸಿಕೊಂಡು ದೇಶದ ಕೀರ್ತಿಯನ್ನು ಹಾರಿಸಬೇಕು. ಯುವ ಜನಾಂಗಕ್ಕೆ ದೇಶ ಭಕ್ತಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.ವಾಹನ ಚಾಲಕರ ಹಾಗೂ ಮಾಲೀಕರ ಸಂಘ ಆಯೋಜಿಸಿದ 4ನೇ ವರ್ಷದ ಸೈಕ್ಲೋತಾನ್ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಿಂದ ಇತಿಹಾಸ, ವಿಜ್ಞಾನ, ದೇಶದ ಬಗ್ಗೆ ಅರಿವು ಮೂಡುತ್ತಿಲ್ಲ. ಯುವ ಸಮುದಾಯದಲ್ಲಿ ದೇಶ ಪ್ರೇಮ ಬೆಳೆಸಲು ವಿಶೇಷ ಕಾರ್ಯಗಾರವನ್ನು ನಡೆಸಬೇಕಾಗಿದೆ ಎಂದರು. ವಾಹನ ಚಾಲಕರ ಸಂಘ ನಡೆಸುತ್ತಿರುವ ಸೈಕ್ಲೋತಾನ್ ಸ್ಪರ್ಧೆ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ತುಂಬಲು, ದೇಶಭಕ್ತಿ ಬೆಳೆಯಲು ಕಾರಣ ವಾಗುತ್ತಿದೆ. ಸೈಕಲ್ ತುಳಿಯುವದ ರಿಂದ ಮಕ್ಕಳಲ್ಲಿ ದೈಹಿಕ ಬಲ ಹೆಚ್ಚುತ್ತದೆ. ಆರೋಗ್ಯ ವೃದ್ದಿಸುತ್ತದೆ. ನಿತ್ಯ ಒಂದು ಗಂಟೆಗಳ ಕಾಲ ಸೈಕಲ್ ತುಳಿಯುವದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ವಾಹನ ಚಾಲಕರ ಸಂಘದ ಅಧ್ಯಕ್ಷ ಸಿ.ಕೆ. ಬೋಪಣ್ಣ ಮಾತನಾಡಿ, ದೇಶದ ಬಗ್ಗೆ ಅಭಿಮಾನ ತುಂಬಲು ಮತ್ತು ಮಕ್ಕಳಲ್ಲಿ ಒಗ್ಗಟ್ಟು ಮತ್ತು ಸ್ನೇಹದ ಬಗ್ಗೆ ತಿಳಿಯಪಡಿಸಲು ಸೈಕಲ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.

ಈ ಸಂಧರ್ಭ ಆರ್.ಎಂ.ಸಿ. ಸದಸ್ಯ ಗುಮ್ಮಟ್ಟಿರ ಕಿಲನ್ ಗಣಪತಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಪುರುಷೋತ್ತಮ, ಕಾರ್ಯಕ್ರಮ ಸಂಯೋಜಕ ಕಾಯೆರ ಕಿರಣ್, ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಶರತ್ ಕಾಂತ್, ಕಾರ್ಯದರ್ಶಿ ಕೃಷ್ಣೇಗೌಡ, ಸಹಕಾರ್ಯದರ್ಶಿ ರೇಣು ಕುಮಾರ್ ಸೇರಿದಂತೆ ಸಂಘದ ಪಧಾದಿಕಾರಿಗಳು, ಸದಸ್ಯರು ಹಾಜರಿದ್ದರು.