ಮಡಿಕೇರಿ, ಆ. 17: ಮಡಿಕೇರಿ ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳ ದುರಸ್ತಿ ಹಾಗೂ ಪ್ರವಾಸೀತಾಣ ರಾಜಾಸೀಟ್ ಬಳಿ ವಾಹನ ನಿಲುಗಡೆ ವ್ಯವಸ್ಥೆಗೆ ಪರಿಹಾರಕ್ಕೆ ಜಿಲ್ಲಾಡಳಿತ ಮುಂದಾಗಿದೆ.ಇಂದು ಬೆಳ್ಳಂಬೆಳಿಗ್ಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹಾಗೂ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ಡಿವೈಎಸ್‍ಪಿ ಸುಂದರ್‍ರಾಜ್, ಆಯುಕ್ತೆ ಶುಭ ಅವರುಗಳೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ ರಸ್ತೆ, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಿದರು.

ಜ. ತಿಮ್ಮಯ್ಯ ವೃತ್ತದ ಬಳಿಯಿಂದ ಪರಿಶೀಲನೆ ಆರಂಭಿಸಿದ ಅವರು ರಾಜಾಸೀಟ್ ರಸ್ತೆ, ವೆಬ್ಸ್ ರಸ್ತೆ, ಮಹದೇವಪೇಟೆ ರಸ್ತೆಗಳನ್ನು ಪರಿಶೀಲಿಸಿದರು. ವೆಬ್ಸ್ ಬಳಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗಲಿ ರುವದರಿಂದ ವಾಹನ ಸಂಚಾರ ವ್ಯವಸ್ಥೆ ಯಾವ

(ಮೊದಲ ಪುಟದಿಂದ) ರೀತಿಯಲ್ಲಿ ಮಾಡಬೇಕು, ರಸ್ತೆ ಅಗಲೀಕರಣ ಯಾವ ರೀತಿಯಲ್ಲಿ ಮಾಡಬೇಕೆಂಬದರ ಬಗ್ಗೆ ಹಾಗೂ ನಗರೋತ್ಥಾನ 3ನೇ ಹಂತದ ಯೋಜನೆಯಡಿ ಲಭ್ಯವಿರುವ ಅನುದಾನದಲ್ಲಿ ಸಮರ್ಪಕ ರಸ್ತೆ, ಚರಂಡಿ ಸೇರಿದಂತೆ ತಡೆಗೋಡೆ ಕಾಮಗಾರಿಗಳನ್ನು ಯಾವ ರೀತಿಯಲ್ಲಿ ಮಾಡಬಹುದೆಂದು ಸಮಗ್ರ ವರದಿ ತಯಾರಿಸಿ ಸಲ್ಲಿಸುವಂತೆ ಆಯುಕ್ತರಿಗೆ ಸೂಚಿಸಿದರು.

ಪಾರ್ಕಿಂಗ್ ವ್ಯವಸ್ಥೆ

ನಗರದಲ್ಲಿ ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕೆಂದು ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದರು. ಗಾಂಧಿ ಮೈದಾನದ ಹಿಂದಿರುವ ಜಾಗದಲ್ಲಿ ಸರಿಯಾದ ರೀತಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವದು, ವಾಹನಗಳಿಗೆ ಒಳ ಹೋಗುವ-ಹೊರ ಬರುವ ಮಾರ್ಗ ನಿರ್ಮಿಸುವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು, ಗಾಂಧಿ ಮೈದಾನದ ಬಳಿಯಿಂದ ರಾಜಾಸೀಟ್ ಉದ್ಯಾನ, ಕುಂದುರುಮೊಟ್ಟೆ ದೇವಾಲಯದ ಬಳಿವರೆಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ ನೀಡಬೇಕು. ಮುಂದಕ್ಕೆ ನಿಲ್ಲಿಸಲು ಅವಕಾಶ ನೀಡಬಾರದು. ರಾಜಾಸೀಟ್ ಉದ್ಯಾನದ ಬಳಿ ಆಗಮಿಸುವ ಪ್ರವಾಸೀ ವಾಹನಗಳನ್ನು ಅಡ್ಡಗಟ್ಟಿ ನಿಲುಗಡೆ ಶುಲ್ಕ ವಸೂಲಿ ಮಾಡಬಾರದು. ಉದ್ಯಾನದ ಬಳಿ ನಿಲುಗಡೆಗೊಂಡ ವಾಹನಗಳಿಂದ ಮಾತ್ರ ಶುಲ್ಕ ವಸೂಲಿ ಮಾಡಬೇಕೆಂದು ಶುಲ್ಕ ವಸೂಲಿ ಗುತ್ತಿಗೆದಾರರಿಗೆ ಸೂಚಿಸಿದರಲ್ಲದೆ, ಈ ಬಗ್ಗೆ ಕ್ರಮಕೈಗೊಳ್ಳುವದಾಗಿ ಜಿಲ್ಲಾಧಿಕಾರಿಗಳಲ್ಲಿ ಹೇಳಿದರು.

ಈ ಸಂದರ್ಭ ನಗರಸಭಾ ಅಧಿಕಾರಿಗಳಿದ್ದರು.

ರಸ್ತೆ ದುರಸ್ತಿ

ರಸ್ತೆಗಳಲ್ಲಿ ಗುಂಡಿ ಬಿದ್ದಿರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದಂತೆ ಇಂದು ಉಕ್ಕಡ ರಸ್ತೆಯಲ್ಲಿನ ಭಾರೀ ಹೊಂಡಗಳನ್ನು ಕಾಂಕ್ರೀಟ್ ಹಾಕಿ ಮುಚ್ಚಲಾಗಿದೆ. ಆದರೆ ಗ್ರಹಚಾರವೆಂಬಂತೆ ಸಂಜೆ ಸುರಿದ ಮಳೆಗೆ ಕೊಚ್ಚಿ ಹೋಗಿದೆ!