ಸೋಮವಾರಪೇಟೆ, ಆ. 17: ಅಂತರರಾಷ್ಟ್ರೀಯ ಛಾಯಾಗ್ರಾಹಕರ ದಿನದ ಅಂಗವಾಗಿ ಇಲ್ಲಿನ ಪುಷ್ಪಗಿರಿ ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ತಾ. 19ರಂದು ಪೂರ್ವಾಹ್ನ 10 ಗಂಟೆಯಿಂದ ಸಂಜೆ 4ರವರೆಗೆ ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆದರ್ಶ್ ಬಿಳಿಮಗ್ಗ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ನೀಡುವ ರಕ್ತದಿಂದ ಮೂರು ವ್ಯಕ್ತಿಗಳ ಜೀವ ಉಳಿಸಲು ಸಾಧ್ಯವಿದೆ. ಹೆಚ್ಚಿನ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆ ಕಾಡುತ್ತಿದ್ದು, ಇದರಿಂದ ಅನೇಕ ಜೀವಹಾನಿಯಾಗುತ್ತಿದೆ. ಇದನ್ನು ತಪ್ಪಿಸಲು ಎಲ್ಲರೂ ರಕ್ತದಾನ ಮಾಡಬೇಕೆಂದರು.

ರಕ್ತಕ್ಕೆ ಪರ್ಯಾಯ ಯಾವದೂ ಇಲ್ಲ, 18 ರಿಂದ 60ವರ್ಷದೊಳಗಿನ ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ದಾನ ಮಾಡುವದರಿಂದ ತಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳುವದರೊಂದಿಗೆ ರಕ್ತದ ಕೊರತೆಯನ್ನೂ ನೀಗಿಸಬಹುದೆಂದರು.

ರಕ್ತದಾನ ಶಿಬಿರದಲ್ಲಿ ಜಿಲ್ಲೆಯ ಛಾಯಾಚಿತ್ರಗ್ರಾಹಕರ ಸಂಘದ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ಸಾರ್ವಜನಿಕ ರಕ್ತದಾನಿಗಳು ಆಗಮಿಸಿ ರಕ್ತದಾನ ಮಾಡಬಹುದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊ: 9901066680, 9916029241ನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಡೇವಿಡ್, ಖಜಾಂಚಿ ಹರೀಶ್ ಕೋಟ್ಯಾನ್ ಹಾಗೂ ಸಲಹೆಗಾರ ಸುಬ್ರಮಣಿ ಉಪಸ್ಥಿತರಿದ್ದರು.