ಸೋಮವಾರಪೇಟೆ, ಆ. 16: ‘ಬೃಹತ್ ಕಟ್ಟಡ, ಇನ್ನಿತರ ಸೌಕರ್ಯಗಳನ್ನು ಹೊಂದಿರುವ ಆಸ್ಪತ್ರೆಯಿದ್ದರೂ ಮೂಲಭೂತವಾಗಿ ಇರಬೇಕಾದ ವೈದ್ಯರೇ ಇಲ್ಲಿಲ್ಲ. ಗ್ರಾಮೀಣ ಭಾಗದಲ್ಲಿ ಬಡ ಜನರು, ರೈತಾಪಿ ವರ್ಗವೇ ಅಧಿಕವಿದ್ದು, ಆರೋಗ್ಯದಲ್ಲಿ ಹೆಚ್ಚೂಕಮ್ಮಿಯಾದರೆ ಕನಿಷ್ಟ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಹೋಗೋವರೆಗಾದರೂ ಪ್ರಾಥಮಿಕ ಚಿಕಿತ್ಸೆ ನೀಡಲು ಶಾಂತಳ್ಳಿ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸಿ’ ಹೀಗೆ ಬೇಡಿಕೆ ಮುಂದಿಟ್ಟು ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದರು.
ಸೋಮವಾರಪೇಟೆ ಪಟ್ಟಣದಿಂದ 10 ಕಿ.ಮೀ. ದೂರದಲ್ಲಿರುವ ಶಾಂತಳ್ಳಿಯಲ್ಲಿ ಹಲವು ದಶಕಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಾಗಿದ್ದು, ಇದೀಗ ಒಂದು ವರ್ಷದಿಂದ ವೈದ್ಯರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಶುಶ್ರೂಷಕಿಯರೂ ಇಲ್ಲದೇ ಇರುವದರಿಂದ ರೋಗಿಗಳು ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಕಳೆದ ಒಂದು ವಾರಗಳ ಹಿಂದೆಯೇ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನ ಸೆಳೆದಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಆಸ್ಪತ್ರೆ ಎದುರು ಧರಣಿ ನಡೆಸಿದರು.
ಆಸ್ಪತ್ರೆಯಲ್ಲಿ ಒಟ್ಟು 25 ಮಂದಿ ಸಿಬ್ಬಂದಿಗಳಿರಬೇಕಿದ್ದು, ಇದರಲ್ಲಿ ಆಯುರ್ವೇದ ವೈದ್ಯರೊಂದಿಗೆ ಕೇವಲ ಮೂವರು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣಪುಟ್ಟ ಖಾಯಿಲೆಗಳಿಗೆ ತುತ್ತಾಗಿ ರೋಗಿಗಳು ಆಸ್ಪತ್ರೆಗೆ ಬಂದರೂ ಸಹ ಚುಚ್ಚುಮದ್ದು ಮತ್ತು ಮಾತ್ರೆ ನೀಡಲು ಯಾರೂ ಇಲ್ಲ ಎಂದು ವಿಧಾನ ಪರಿಷತ್ ಮಾಜೀ ಸದಸ್ಯ ಹಾಗೂ ಸ್ಥಳೀಯರೂ ಆದ ಎಸ್.ಜಿ. ಮೇದಪ್ಪ ಆರೋಪಿಸಿದರು.
ಗ್ರಾಮೀಣ ಭಾಗದಲ್ಲಿ ಬಡ ಜನರೇ ಅಧಿಕವಿದ್ದು, ತೋಟ ಗದ್ದೆಗಳಲ್ಲಿ ಕೆಲಸ ನಿರ್ವಹಿಸುವ ಸಂಬಂಧ ಹಾವು, ಚೇಳು ಕಚ್ಚಿದರೂ ಸಹ ಶಾಂತಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಲಭಿಸುತ್ತಿಲ್ಲ. ಇಲ್ಲಿರುವ ಆಯುರ್ವೇದ ವೈದ್ಯರು ಆಸ್ಪತ್ರೆಯಲ್ಲಿರುವ ಇತರ ಚುಚ್ಚುಮದ್ದುಗಳನ್ನು ನೀಡಲು ಸಾಧ್ಯವಿಲ್ಲ. ದಿನಕ್ಕೆ ಕನಿಷ್ಟ 50 ರಿಂದ 100 ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಯಾವದೇ ಚಿಕಿತ್ಸೆ ಲಭಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೂರದ ಕುಂದಳ್ಳಿ, ಮಲ್ಲಳ್ಳಿ, ಕೊತ್ನಳ್ಳಿ, ಜಕ್ಕನಳ್ಳಿ, ಕುಡಿಗಾಣ, ಹೆಗ್ಗಡಮನೆ, ಹರಗ, ಬೆಟ್ಟದಕೊಪ್ಪ, ಕಿಕ್ಕರಳ್ಳಿ ಸೇರಿದಂತೆ ಇತರ ಕುಗ್ರಾಮಗಳಿಂದ ರೋಗಿಗಳು ಶಾಂತಳ್ಳಿ ಆಸ್ಪತ್ರೆಗೆ ಆಗಮಿಸುತ್ತಿದ್ದು, ಇಲ್ಲಿ ಯಾವದೇ ಚಿಕಿತ್ಸೆ ದೊರಕದ ಹಿನ್ನೆಲೆ ಇನ್ನಷ್ಟು ತೊಂದರೆಗೆ ಸಿಲುಕುತ್ತಿದ್ದಾರೆ. ಕನಿಷ್ಟ ಸೋಮವಾರಪೇಟೆ ಪಟ್ಟಣದಲ್ಲಿರುವ ಆಸ್ಪತ್ರೆಗೆ ತೆರಳುವವರೆಗಾದರೂ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಲು ವೈದ್ಯರನ್ನು ನಿಯೋಜಿಸಲು ಡಿಹೆಚ್‍ಓ ಕ್ರಮ ಕೈಗೊಳ್ಳಬೇಕೆಂದು ಎಸ್.ಜಿ. ಮೇದಪ್ಪ ಆಗ್ರಹಿಸಿದರು.
ಪ್ರತಿಭಟನೆಯ ನಡುವೆಯೇ ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಎಸ್.ಜಿ. ಮೇದಪ್ಪ, ಕಳೆದ ವಾರವೇ ಈ ಬಗ್ಗೆ ಬೇಡಿಕೆ ಇಟ್ಟಿದ್ದು, ಎರಡು ದಿನದಲ್ಲಿ ಶುಶ್ರೂಷಕಿಯನ್ನು ನಿಯೋಜಿಸುವದಾಗಿ ಭರವಸೆ ನೀಡಿದ್ದಿರಿ. ಆದರೆ ಇಂದಿಗೂ ಶುಶ್ರೂಷಕಿ ಆಗಮಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಈಗಾಗಲೇ ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರಸಂತೆಯಿಂದ ಓರ್ವ ಹಿರಿಯ ಆರೋಗ್ಯ ಸಹಾಯಕಿಯನ್ನು ನಿಯೋಜಿಸಿದ್ದು, ತಾ. 17ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ದೂರವಾಣಿಯಲ್ಲಿಯೇ ಭರವಸೆ ನೀಡಿದರು. ತಾ.17ರಂದು ಕರ್ತವ್ಯಕ್ಕೆ ಹಾಜರಾಗದಿದ್ದರೆ ತಾ. 21ರಂದು ಶಾಂತಳ್ಳಿ ಆಸ್ಪತ್ರೆಗೆ ಬೀಗ ಜಡಿಯಲಾಗುವದು. ಮುಂದಿನ 15 ದಿನಗಳ ಒಳಗೆ ವೈದ್ಯರನ್ನು ನಿಯೋಜಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ನಂತರ ಧರಣಿಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಪಿ. ಗಣಪತಿ, ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ರಘು, ಪ್ರಮುಖರಾದ ಲಿಂಗರಾಜು, ಕೆ.ಟಿ. ರಾಜಶೇಖರ್, ಕೆ.ಪಿ. ಬಸಪ್ಪ, ಸಿಂಗ್ರಪ್ಪ, ದಿವ್ಯಕುಮಾರ್, ಸುಂದರ್, ಮಧು, ಉತ್ತಯ್ಯ, ಮನೋಜ್‍ಕುಮಾರ್, ಪ್ರತಾಪ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಓರ್ವ ಆಡಳಿತ ವೈದ್ಯಾಧಿಕಾರಿ, ಓರ್ವ ಶುಶ್ರೂಷಕಿ, ಈರ್ವರು ಹಿರಿಯ ಆರೋಗ್ಯ ಸಹಾಯಕರು, ಓರ್ವ ಔಷಧಿ ವಿತರಕರು, ಓರ್ವ ಕಿರಿಯ ಪ್ರಯೋಗಾಲಯ ತಜ್ಞರು, 12 ಮಂದಿ ಕಿರಿಯ ಆರೋಗ್ಯ ಸಹಾಯಕರು, ಮೂವರು ಗ್ರೂಪ್ ಡಿ ನೌಕರರು ಸೇರಿದಂತೆ ತಲಾ ಓರ್ವರಂತೆ ದ್ವಿತೀಯ ದರ್ಜೆ ಗುಮಾಸ್ತರು, ಗಣಕಯಂತ್ರ ನಿರ್ವಾಹಕರು, ವಾಹನ ಚಾಲಕರು ಮತ್ತು ಅಡುಗೆಯವರು ಸೇರಿದಂತೆ ಒಟ್ಟು 25 ಮಂದಿ ಇರಬೇಕಿದ್ದು, ಇದೀಗ ಮೂವರು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಓರ್ವ ಆಯುರ್ವೇದ ವೈದ್ಯರು ಮಾತ್ರ ಕರ್ತವ್ಯದಲ್ಲಿದ್ದಾರೆ.