ಸೋಮವಾರಪೇಟೆ,ಆ.17: ವಿದ್ಯಾರ್ಥಿಗಳಿಗೆ ತಮ್ಮ ಶಾಲೆಯ ಪರೀಕ್ಷೆಗಿಂತಲೂ ಜೀವನದ ಪರೀಕ್ಷೆ ಎದುರಿಸುವದು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕಲಿಕೆಯ ಅವಶ್ಯಕತೆಯೂ ಇದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಾತ್ರಕ್ಕೆ ಜೀವನದಲ್ಲಿ ಯಾರೂ ಸೋಲುವದಿಲ್ಲ. ಆತ್ಮಹತ್ಯೆಯಂತಹ ಚಿಂತನೆಗಳು ವಿದ್ಯಾರ್ಥಿಗಳ ಮನದಲ್ಲಿ ಬರಬಾರದು ಎಂದು ಮಡಿಕೇರಿಯ ಕೊಡಗು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮಾನಸಿಕ ತಜ್ಞ ಡಾ. ರೂಪೇಶ್ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಿದರು.

ನಾಲ್ಗುಡಿ ಸಂಸ್ಥೆ, ಶರಣ ಸಾಹಿತ್ಯ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಒಕ್ಕಲಿಗರ ಸಂಘ, ಕುವೆಂಪು ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ನಾನು ಮತ್ತು ಪರೀಕ್ಷೆ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಐಎಸ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅವರು ಜೀವನಮೌಲ್ಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ಬದುಕನ್ನು ರೂಪಿಸಿಕೊಳ್ಳುವ ಜ್ಞಾನವನ್ನು ಸಂಪಾದಿಸಿಕೊಂಡರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಪ್ರತಿಯೋರ್ವ ವಿದ್ಯಾರ್ಥಿಗೆ ಯಾವದೇ ವಿಷಯದ ಬಗ್ಗೆ ಗ್ರಹಿಕೆ ಅಗತ್ಯ. ಶಾಲೆಯಲ್ಲಿ ಶಿಕ್ಷಕರು ಮಾಡುವ ಪಾಠಗಳನ್ನು ಕ್ರಮಬದ್ಧವಾಗಿ ಆಲಿಸಿದರೆ ಪರೀಕ್ಷೆಯಲ್ಲಿ ಯಶಸ್ಸು ಕಾಣಬಹುದು ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ. ಸಿ.ಎಂ.ಧರ್ಮಪ್ಪ ಮಾತನಾಡಿ, ವಿದ್ಯಾರ್ಥಿಗಳು ಆಯಾ ದಿನದ ಪಾಠಗಳನ್ನು ಆ ದಿನದಂದೆ ಅಭ್ಯಾಸ ಮಾಡಿದರೆ ಪರೀಕ್ಷಾ ಸಮಯದಲ್ಲಿ ಭಯ ಮತ್ತು ಆತಂಕಗಳನ್ನು ದೂರ ಮಾಡಬಹುದು. ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಂದರ್ಭದಲ್ಲಿ ಮೊಬೈಲ್ ಬಳಕೆ, ಟಿ.ವಿ.ವೀಕ್ಷಣೆಯಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್ ವಹಿಸಿದ್ದರು. ವೇದಿಕೆಯಲ್ಲಿ ನಾಲ್ಗುಡಿ ಸಂಸ್ಥೆಯ ಸಂಚಾಲಕ ಚಾಮೇರ ದಿನೇಶ್, ಡಯಟ್ ಪ್ರಾಂಶುಪಾಲ ಶಾಂತಪ್ಪ ಎಸ್.ಬಿರಾದಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ.ದೀಪಕ್, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಧರ್ಮಪ್ಪ, ಮುಖ್ಯ ಶಿಕ್ಷಕ ವೆಂಕಟೇಶ್ ನಾಯಕ್ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸೋಮವಾರಪೇಟೆ ತಾಲೂಕಿನ 70ಕ್ಕೂ ಅಧಿಕ ಪ್ರೌಢಶಾಲೆ ಮತ್ತು ಕಾಲೇಜುಗಳಿಂದ 1300ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.