ಮಡಿಕೇರಿ, ಆ. 16: ನಗರದ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಹೊರಭಾಗದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ನಾಲ್ಕಾರು ಗುಡಿಸಲುಗಳು ತಲೆಯೆತ್ತಿದ್ದು, ಅಲ್ಲಿನ ನಿವಾಸಿಗಳು ಅಕ್ಕ ಪಕ್ಕ ಮಲ, ಮೂತ್ರ ವಿಸರ್ಜನೆಯೊಂದಿಗೆ ದುರ್ನಾತ ಬೀರುವಂತಾಗಿದೆ. ಈ ಬಗ್ಗೆ ನಗರಸಭೆಯ ನಿರ್ಲಕ್ಷ್ಯ ವಿರುದ್ಧ ದಾರಿ ಹೋಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಗುಡಿಸಲು ವಾಸಿಗಳ ಬಗ್ಗೆ ಮಾಹಿತಿ ಕಲೆ ಹಾಕಿದಾಗ, ಮೂಲತಃ ಶಿವಮೊಗ್ಗ ಜಿಲ್ಲೆಯಿಂದ ಬಂದಿದ್ದು, ಕಳೆದ 15 -20 ವರ್ಷಗಳಿಂದ ಆಗಿಂದಾಗ್ಗೆ ವರ್ಷದ ಆರೆಂಟು ತಿಂಗಳು ಕೊಡಗಿನಲ್ಲಿ ಮಣ್ಣು ಕೆಲಸ ಮಾಡುತ್ತಿರುವದಾಗಿ ಹೇಳಿ ಕೊಂಡಿದ್ದಾರೆ. ಸಾಮಾನ್ಯವಾಗಿ ದಸರಾ ವೇಳೆಗೆ ಬಂದು ಅಲ್ಲಲ್ಲಿ ಟೆಂಟ್ ಹಾಕಿಕೊಂಡು ಇರುವದಾಗಿಯೂ, ಮಳೆಗಾಲದ ಆರಂಭದಲ್ಲಿ ಊರಿಗೆ ಹೋಗುವದಾಗಿ ಈ ಮಂದಿ ಹೇಳುತ್ತಿದ್ದಾರೆ. ಆದರೆ ಪ್ರಸಕ್ತ ವರ್ಷ ಮಳೆಗಾಲದಲ್ಲೂ ಇಲ್ಲಿಯೇ ಠಿಕಾಣಿ ಹೂಡಿರುವದು ಗೋಚರಿಸಿದೆ.
ಊರಿನಲ್ಲಿ ಸೌಲಭ್ಯ : ಬಡತನದ ಬದುಕು ಕಟ್ಟಿಕೊಂಡಿರುವ ಇವರುಗಳಿಗೆ ಸರಕಾರದ ಸವಲತ್ತುಗಳು ಲಭಿಸಲಿದೆಯೇ ಎಂದು ಪ್ರಶ್ನಿಸಿದರೆ, ಊರಿನಲ್ಲಿ ಮನೆ ಮಂದಿಯಿದ್ದು, ಪಡಿತರ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಅಲ್ಲಿರುವವರು ಪಡೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಅಲ್ಲದೆ, ಮಡಿಕೇರಿಯಲ್ಲಿರುವ ತಮಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ಮೂಲಕ ಎಲ್ಲಾ ಸೌಲಭ್ಯ ಕೊಡಿಸುತ್ತಿದ್ದಾರೆ ಎನ್ನುವ ಈ ಮಂದಿ, ಸೌಲಭ್ಯ ಕೊಡಿಸುವವರು ಯಾರೆಂದು ಪ್ರಶ್ನೆ ಮಾಡಿದರೆ, ನಗುತ್ತ ಗುಡಿಸಲು ಸೇರಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಪ್ರತಿನಿತ್ಯ ಫೀ.ಮಾ. ಕಾರ್ಯಪ್ಪ ಕಾಲೇಜಿಗೆ ಹಾಗೂ ಐಟಿಐಗೆ ತೆರಳುವ ವಿದ್ಯಾರ್ಥಿನಿಯರ ಸಹಿತ, ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ರಸ್ತೆ ಬದಿ ದುರ್ನಾತಕ್ಕೆ ಕಾರಣವಾಗಿರುವ ಗುಡಿಸಲುವಾಸಿಗಳಿಂದ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ‘ಶಕ್ತಿ’ ಯೊಂದಿಗೆ ಅಳಲು ತೋಡಿ ಕೊಂಡಿದ್ದಾರೆ. ಅಲ್ಲದೆ, ಹೀಗೆ ಹಾದಿ ಬೀದಿಯಲ್ಲಿ ನೆಲೆ ಕಂಡು ಕೊಳ್ಳುತ್ತಿರುವವರ ಬಗ್ಗೆ ನಗರಸಭಾ ಆಡಳಿತದ ನಿರ್ಲಕ್ಷ್ಯ ಜನವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ. - ಶ್ರೀಸುತ