ವೀರಾಜಪೇಟೆ, ಆ. 17: ಸಿ.ಐ.ಟಿ. ವತಿಯಿಂದ ನಡೆಯುತ್ತಿರುವ ರಾಜ್ಯ ವ್ಯಾಪಿ ಸಂವಿಧಾನ ಉಳಿಸಿ: ಕಾರ್ಮಿಕರ ಹಕ್ಕು ಸಂರಕ್ಷಿಸಿ ಅಭಿಯಾನದ ಅಂಗವಾಗಿ ವೀರಾಜಪೇಟೆಯ ತಾಲೂಕು ಕಛೇರಿ ಮುಂಭಾಗ ತಾ.14ರಂದು ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿವರೆಗೆ ಧರಣಿ ನಡೆಯಿತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸಿಸ್ಟ್) ಕೊಡಗು ಜಿಲ್ಲಾ ಕಾರ್ಯದರ್ಶಿ ಡಾ. ಐ.ಆರ್. ದುರ್ಗಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದ ಸಂವಿಧಾನದಲ್ಲಿ ಕಾರ್ಮಿಕರ ಹಕ್ಕುಗಳ ಬಗ್ಗೆ ಸ್ಪಷ್ಟವಾದ ಪ್ರತಿಪಾದನೆ ಇದ್ದರೂ ಇಂದಿಗೂ ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿಯಿಂದಾಗಿ ಕಾರ್ಮಿಕ ವಿಭಾಗಕ್ಕೆ ತಮ್ಮ ಮೂಲ ಅಗತ್ಯಗಳನ್ನು ಪೂರೈಸಲು ಇಂದು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಜಿಲ್ಲಾ ಉಪಾಧ್ಯಕ್ಷ ಎಂ.ಡಿ.ಕುಟ್ಟಪ್ಪನ್ ಮಾತನಾಡಿ ದೇಶದ 71ನೇ ಸ್ವಾತಂತ್ರ್ಯದ ದಿನಾಚರಣೆ ಸಂದರ್ಭದಲ್ಲಿಯೂ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಿಜವಾದ ಸ್ವಾತಂತ್ರ್ಯ ಹೋರಾಟ ನಡೆಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿರುವದು ದುರದೃಷ್ಟಕರ ವಾಗಿದೆ ಎಂದರು. ಸಿ.ಐ.ಟಿ.ಯು ಪದಾಧಿಕಾರಿಗಳಾದ ಮಹಾದೇವ, ಎ.ಸಿ.ಸಾಬು ಈ ಸಂದರ್ಭದಲ್ಲಿ ನೆರೆದಿದ್ದ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು. ಹೆಚ್.ಆರ್. ಶಿವಪ್ಪ ನಿರೂಪಿಸಿದರು.