ಮಡಿಕೇರಿ, ಆ. 16: ಕೊಡಗು ಮೂಲದ ಹಾಕಿಪಟು, ಭಾರತ ಹಾಕಿ ತಂಡದ ‘ಫಾರ್ವರ್ಡ್’ ಆಟಗಾರ ಎಸ್.ವಿ. ಸುನಿಲ್‍ಗೆ ವಿವಾಹ ನಿಗದಿಯಾಗಿದ್ದು, 2018ರ ಮಾರ್ಚ್ ತಿಂಗಳಿನಲ್ಲಿ ಸುನಿಲ್ ಮಂಗಳೂರಿನ ಕುವರಿ ನಿಷಾರನ್ನು ಬಾಳ ಸಂಗಾತಿಯಾಗಿ ವರಿಸಲಿದ್ದಾರೆ.

ಅಕ್ಟೋಬರ್ 13 ರಂದು ನಿಶ್ಚಿತಾರ್ಥ ನಿಗದಿಯಾಗಿತ್ತಾದರೂ ಏಷ್ಯಾ ಕಪ್ ಹಾಕಿ ಹಣಾಹಣಿ ಅದೇ ವೇಳೆಗೆ ನಡೆಯಲಿರುವ ಬಗ್ಗೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಕೆಲ ದಿನಗಳ ಹಿಂದಷ್ಟೆ ಮಂಗಳೂರಿನ ನಿಷಾ ಅವರ ಮನೆಯಲ್ಲಿ ನಿಶ್ಚಿತಾರ್ಥ ಸಮಾರಂಭ ನೆರವೇರಿದೆ. ಮಂಗಳೂರಿನ ತಾರಾತಾಥ್ ಆಚಾರ್ಯ ಹಾಗೂ ಸುನಿತಾ ದಂಪತಿಯ ಪುತ್ರಿಯಾಗಿರುವ 24 ವರ್ಷದ ನಿಷಾ ಮಂಗಳೂರಿನ ಮಣಿಪಾಲ್ ಇನ್ಸ್‍ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜ್ಯುಕೇಶನ್ ವಿಭಾಗದಲ್ಲಿ ಅಕೌಂಟಿಂಗ್ ಸಾಫ್ಟ್‍ವೇರ್ ತರಬೇತಿ ನೀಡುವ ವೃತ್ತಿ ನಿರ್ವಹಿಸುತ್ತಿದ್ದಾರೆ. ಮಡಿಕೇರಿಯ ದಿ. ವಿಠಲಾಚಾರ್ಯ ಶಾಂತ ದಂಪತಿಯ ಪುತ್ರನಾಗಿರುವ 29 ವರ್ಷ ವಯಸ್ಸಿನ ಸುನಿಲ್ ಭಾರತ ಹಾಕಿ ತಂಡದಲ್ಲಿ ಕಳೆದ ಹಲವು ವರ್ಷಗಳಿಂದ ಆಡುತ್ತಿದ್ದು, ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ.

ಸುನಿಲ್ ಹಾಗೂ ನಿಷಾ ಇವರುಗಳ ವಿವಾಹವು ಮುಂದಿನ ಮಾರ್ಚ್ 4 ರಂದು ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ನೆರವೇರಲಿದೆ. ತಾ. 5 ರಂದು ಮಡಿಕೇರಿಯಲ್ಲಿ ಆರತಕ್ಷತೆ ಏರ್ಪಡಿಸಲು ಕುಟುಂಬದವರು ಚಿಂತಿಸಿದ್ದು, ಇನ್ನೂ ಹಾಲ್ ನಿಗದಿ ಪಡಿಸಿಲ್ಲ ಎಂದು ಸುನಿಲ್ ‘ಶಕ್ತಿ’ಗೆ ತಿಳಿಸಿದ್ದಾರೆ. -ಉಜ್ವಲ್ ರಂಜಿತ್