ಸೋಮವಾರಪೇಟೆ, ಆ. 16: ಭಾರತದಲ್ಲಿ ಹಿಂದೂ ಮತ್ತು ಮುಸಲ್ಮಾನರು ಒಂದಾಗಿ ಬದುಕಲು ಯಾವ ಅಡ್ಡಿಯೂ ಇಲ್ಲ. ಸೌಹಾರ್ಧತೆ ಎಂಬುದು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿ ಭಾವೈಕ್ಯತೆ ಕಡಿಮೆಯಾಗುತ್ತಿರುವದರಿಂದ ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಘರ್ಷಣೆಗಳು ಏರ್ಪಡುತ್ತವೆ ಎಂದು ಇಲ್ಲಿನ ಜಲಾಲಿಯಾ ಮಸೀದಿಯ ಧರ್ಮಗುರು ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಹೇಳಿದರು.
ಇಲ್ಲಿನ ಜಲಾಲಿಯಾ ಮಸೀದಿಯ ಎಸ್ಬಿಎಸ್ ಕಮಿಟಿ ಮತ್ತು ಸೋಮವಾರಪೇಟೆ ಎಸ್ಎಸ್ಎಫ್ ಸೆಕ್ಟರ್ನ ಆಶ್ರಯದಲ್ಲಿ ಸ್ಥಳೀಯ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವ ಸ್ನೇಹ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತವನ್ನು ಉಳಿಸುವ ಶಕ್ತಿ 125 ಕೋಟಿ ಜನರಿಗೆ ಇದೆ. ಜಾತಿ ಮತ ಪಂಗಡ ಮರೆತು ಎಲ್ಲರೂ ಒಂದಾಗಬೇಕು. ರಾಷ್ಟ್ರಹಿತದ ವಿಚಾರದಲ್ಲಿ ಭಾರತೀಯತೆಯನ್ನು ಎತ್ತಿ ಹಿಡಿಯಬೇಕು. ಇಲ್ಲಿನ ಹಿಂದೂ ಮತ್ತು ಮುಸ್ಲಿಂ ಸಮುದಾಯ ಒಂದಾಗಿ ಬದುಕಲು ಯಾವ ಅಡ್ಡಿಯೂ ಇಲ್ಲ. ಬ್ರಿಟೀಷರು ದೇಶ ಬಿಟ್ಟು ತೊಲಗುವ ಸಂದರ್ಭ ವಿಭಜನೆಯ ವಿಷಬೀಜ ಬಿತ್ತಿದ್ದಾರೆ. ಅದನ್ನು ನಾವುಗಳು ಪೋಷಿಸಬಾರದು ಎಂದು ಕರೆ ನೀಡಿದರು.
ಭಾರತ ದೇಶ ಯಾವದೇ ಧರ್ಮಕ್ಕೂ ಸೀಮಿತವಲ್ಲ. ಸಮಸ್ತ ಭಾರತೀಯರಿಗೆ ದೇಶ ಸೇರಿದೆ. ಜಾತಿ ಹೆಸರಿನಲ್ಲಿ ಜಗಳ ಮಾಡು ಎಂದು ಯಾವ ಧರ್ಮವೂ ಹೇಳಿಲ್ಲ. ಮದರಸಾಗೆ ತೆರಳದ ಮುಸ್ಲಿಂ, ದೇವಾಲಯಕ್ಕೆ ತೆರಳದ ಹಿಂದೂ, ಚರ್ಚ್ಗಳಿಗೆ ತೆರಳದ ಕ್ರಿಶ್ಚಿಯನ್ನಂತಹ ಮತಾಂಧ ವ್ಯಕ್ತಿಗಳಿಂದ ಅಶಾಂತಿ ತಲೆದೋರುತ್ತಿದೆ ಎಂದು ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಅಭಿಪ್ರಾಯಿಸಿದರು.
ಇಂದು ಮನುಷ್ಯ ಮನುಷ್ಯನನ್ನು ನೋಡಿ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಗತ್ತು ಹತ್ತಿರವಾದಂತೆ ಮನಸ್ಸುಗಳು ದೂರಾಗುತ್ತಿವೆ. ಮಿಸೈಲ್, ವಿಜ್ಞಾನ ತಂತ್ರಜ್ಞಾನ ಗಳಿಗಿಂತ ಮಾನವೀಯತೆಯನ್ನು ಕಲಿಸುವ ಪಾಠಶಾಲೆಗಳ ಅಗತ್ಯವಿದೆ ಎಂದ ಅಬೂಬಕರ್, ಭಾರತದ ಸ್ವಾತಂತ್ರ್ಯಕ್ಕಾಗಿ ಹಿಂದೂಗಳೊಂದಿಗೆ ಮುಸಲ್ಮಾನರೂ ಹೋರಾಟ ನಡೆಸಿದ್ದಾರೆ. ಮುಸಲ್ಮಾನರ ದೇಶಭಕ್ತಿಯನ್ನು ಯಾರಿಗೂ ಪ್ರಶ್ನಿಸಲು ಸಾಧ್ಯವಿಲ್ಲ. ಮಸೀದಿಗಳು ಕೇವಲ ಪ್ರಾರ್ಥನಾ ಮಂದಿರವಲ್ಲ; ದೇಶಭಕ್ತಿಯನ್ನು ಪ್ರಕಟಿಸುವ ಸಂಕೇತಗಳಾಗಿವೆ ಎಂದರು.
ಕೋಮುಗಲಭೆಯ ಕಾರಣಕ್ಕಾಗಿಯೇ ಕೋಟ್ಯಾಂತರ ರೂಪಾಯಿಗಳು ವ್ಯಯವಾಗುತ್ತಿವೆ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂದು ವಿಷಾಧಿಸಿದ ಅವರು, ದೇಶಾದ್ಯಂತ ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಿದರೆ ಶಾಂತಿ ನೆಲೆಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ಇಂದು ಜನಪ್ರತಿನಿಧಿಗಳು ಜನಸೇವೆ ಮಾಡುವ ಬದಲು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ವೈದಿಕತೆ ಸಮಾಜಕ್ಕೆ ಶಾಪವಾಗಿದೆ. ಸಮಾನತೆಯನ್ನು ಒಪ್ಪದ ಸ್ಥಿತಿ ನಿರ್ಮಾಣವಾಗಿದೆ. ಶೋಷಿತರು ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಇನ್ನಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದ ಅವರು, ಭಾರತ-ಚೀನಾದ ನಡುವೆ ಯುದ್ಧದ ಕಾರ್ಮೋಡವಿದೆ. ಆದರೆ ಇಲ್ಲಿ ಪಂಜಿನ ಮೆರವಣಿಗೆ ಮಾಡುತ್ತಿರುವದು ಅಭಾಸ ಎಂದರು.
ಐಎನ್ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ಜಾತಿ-ಧರ್ಮಗಳ ನಡುವೆ ದ್ವೇಷ ಬಿತ್ತುವ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಜಾಗ್ರತೆ ವಹಿಸಬೇಕು ಎಂದರು. ಜೆಡಿಎಸ್ ಜಿಲ್ಲಾ ಉಸ್ತುವಾರಿ ವಿ.ಎಂ. ವಿಜಯ ಮಾತನಾಡಿ, ಕೋಮು ಸಾಮರಸ್ಯ ಹಾಳು ಮಾಡುವ ವ್ಯಕ್ತಿಗಳನ್ನು ಆಯಾ ಸಮಾಜಗಳೇ ದೂರವಿಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಲಾಲೀಯ ಮಸೀದಿ ಅಧ್ಯಕ್ಷ ಕೆ.ಎ.ಆದಂ ವಹಿಸಿದ್ದರು. ವೇದಿಕೆಯಲ್ಲಿ ಎಸ್ವೈಎಸ್ ಜಿಲ್ಲಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ, ಸೋಮವಾರಪೇಟೆ ಎಸ್ಎಸ್ಎಫ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ, ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್, ಸರ್ಕಲ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಚೇಂಬರ್ ಆಫ್ ಕಾಮರ್ಸ್ ತಾಲೂಕು ಅಧ್ಯಕ್ಷ ಮನುಕುಮಾರ್ ರೈ ಉಪಸ್ಥಿತರಿದ್ದರು.