ಮಡಿಕೇರಿ, ಆ. 16: ಪ್ರಮುಖ ಪ್ರವಾಸಿ ತಾಣ ಮಂಜಿನನಗರಿ ಮಡಿಕೇರಿಗೆ ಯಾರೇ ಅಡಿಯಿಡಲಿ ಅವರನ್ನು ಸ್ವಾಗತಿಸುವದು ಹೊಂಡ - ಗುಂಡಿಗಳ ರಸ್ತೆಗಳು..! ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಬಂದ ಉಸ್ತುವಾರಿ ಸಚಿವರನ್ನು ಕೂಡ ಇದೇ ಹೊಂಡ- ಗುಂಡಿಗಳು ಸ್ವಾಗತ ಮಾಡಿವೆ...!
ನಗರದಲ್ಲಿ ಯಾವದೇ ರಸ್ತೆ ಸುಸ್ಥಿತಿಯಲ್ಲಿಲ್ಲ, ನೆಪಮಾತ್ರಕ್ಕೆ ಒಳಚರಂಡಿಯಿಂದಾಗಿ ಗುಂಡಿಯಾಗಿದೆ ಎಂಬ ಸಬೂಬು ನಗರಸಭೆಯಿಂದ. ಗುಂಡಿಗಳಾಗುತ್ತವೆ ಮಳೆಗಾಲದಲ್ಲಿ ತೊಂದರೆಯಾಗಲಿದೆ ಎಂಬ ಅರಿವಿದ್ದರೂ ಮಳೆಗಾಲ ಸಂದರ್ಭದಲ್ಲಿ ಒಳಚರಂಡಿ ನಿರ್ಮಾಣಕ್ಕೆ ಅವಕಾಶ ನೀಡಿರುವದು ನಗರಸಭೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಕೆಲವೊಂದು ರಸ್ತೆ ಒಳಚರಂಡಿಯಿಂದಾಗಿ ಗುಂಡಿಯಾಗಿರಬಹುದು. ಅದು ಅವರ ಕೊಡುಗೆ ಎಂದುಕೊಳ್ಳೋಣ! ಆದರೆ ಇನ್ನೂ ಹಲವೆಡೆ ರಸ್ತೆ ಹಳ್ಳ ಸೇರಿದರೂ ಗಮನ ಹರಿಸುವವರಿಲ್ಲದಂತಾಗಿದೆ. ಮುಖ್ಯವಾಗಿ ರಾಜಾಸೀಟ್ ರಸ್ತೆ, ವೆಬ್ಸ್ ರಸ್ತೆ, ಕಾನ್ವೆಂಟ್ ಜಂಕ್ಷನ್, ಎ.ವಿ. ಶಾಲೆ ಜಂಕ್ಷನ್, ಹೀಗೆ.., ಉಕ್ಕಡ ರಸ್ತೆಯಲ್ಲಂತೂ ಓರ್ವ ಮನುಷ್ಯನನ್ನು ಹುದುಗಿಸುವಷ್ಟು ದೊಡ್ಡ ಗುಂಡಿಯಾಗುತ್ತಿದೆ. ಒಂದು ವಾಹನ ಮಾತ್ರ ಹೋಗುವಷ್ಟು ಅಗಲವಿರುವ ರಸ್ತೆ ಬದಿ ಚರಂಡಿಗಳೂ ಇಲ್ಲ. ರಸ್ತೆ ಸುರಂಗದಂತಾಗುತ್ತಿದ್ದರೂ ಗಮನವಿಲ್ಲ. ಅನಾಹುತವಾಗುವ ಮುನ್ನ ಅರಿತುಕೊಳ್ಳಬಹುದೇನೋ ಎಂಬ ನಿರೀಕ್ಷೆಯಲ್ಲಿ ಜನತೆಯಿದ್ದಾರೆ. ಆದರೆ, ನಗರಸಭೆಯ 23 ಮಂದಿ ಸದಸ್ಯರುಗಳು ಎಲ್ಲಿದ್ದಾರೆ ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ. ಪಕ್ಷಾಂತರ, ರಾಜಕೀಯ, ಅಧಿಕಾರ, ದಸರಾ ಹೀಗೆ ಏನೆಲ್ಲೋ ಚಟುವಟಿಕೆಗಳಲ್ಲಿ ಬಿಸಿಯಾಗಿದ್ದಾರಂತೆ, ವಾರ್ಡ್ ಸಮಸ್ಯೆ ಮರೆತು ಹೋಗಿದೆಯಂತೆ ಎಂದು ಜನ ಅಡಿಕೊಳ್ಳವಂತಾಗಿದೆ. - ಸಂತೋಷ್