ಮಡಿಕೇರಿ, ಆ. 18: ಕೊಡಗು ಜಿಲ್ಲೆಯ ಅಂಗನವಾಡಿಗಳಿಗೆ ಗುಣಮಟ್ಟದಿಂದ ಕೂಡಿದ ಪೌಷ್ಟಿಕ ಆಹಾರ ಪೂರೈಸುವಂತೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಸೂಚಿಸಿದ್ದಾರೆ. ನಿನ್ನೆ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವದು ಎಂದರು.

ಈ ವೇಳೆ ಅಂಗನವಾಡಿ ಮಕ್ಕಳಿಗೆ, ಕಿಶೋರಿಯರಿಗೆ ಮತ್ತು ಬಾಣಂತಿಯರು, ಗರ್ಭಿಣಿಯರಿಗೆ ಹಾಗೂ ಶಿಶುಗಳಿಗೆ ನೀಡಲಾಗುವ ಆಹಾರ ದಾಸ್ತಾನು ಪರಿಶೀಲಿಸಿದ ಅವರು, ಆಹಾರ ಗುಣಮಟ್ಟದ ಕುರಿತು ಸಮಾಧಾನ ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತರನ್ನು ವಿವಿಧ ಇಲಾಖೆಗಳ ಕೆಲಸಕ್ಕೆ ಬಳಸಿಕೊಳ್ಳುವದರಿಂದ, ದೈನಂದಿನ ಕಾರ್ಯಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಜಿ.ಪಂ. ಸಭೆಯಲ್ಲಿ ಚರ್ಚಿಸುವದಾಗಿ ಭರವಸೆ ನೀಡಿದ ವಿಜು ಸುಬ್ರಮಣಿ, ಇಲಾಖೆಯ ಉದ್ಯೋಗಿಗಳು ಹಾಗೂ ಕಾರ್ಯ ಕರ್ತೆಯರಿಗೆ ಒತ್ತಡ ಆಗದಂತೆ ಗಮನ ಹರಿಸುವದಾಗಿ ಆಶ್ವಾಸನೆ ನೀಡಿದರು.

ವಸತಿಗೆ ಭೇಟಿ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯಕ್ಕೂ ಭೇಟಿ ನೀಡಿ ಪರಿಶೀಲಿಸಿದ ಸ್ಥಾಯಿ ಸಮಿತಿ ಅಧ್ಯಕ್ಷರು, ವಸತಿ ನಿಲಯ ಕೊಠಡಿಗಳ ಶುಚಿತ್ವ, ಆಹಾರದ ಗುಣಮಟ್ಟ ಪರಿಶೀಲಿಸಿದರು. ವಸತಿ ನಿಲಯ ವಿದ್ಯಾರ್ಥಿನಿಯರಿಗೆ ಆಗಿಂದಾಗ್ಗೆ ಆಪ್ತ ಸಲಹೆ ನೀಡುವ ಮೂಲಕ, ಅವರಲ್ಲಿ ಸ್ವಚ್ಛತೆ, ಶಿಸ್ತು, ಅಚ್ಚುಕಟ್ಟುತನ ಇತ್ಯಾದಿಗಳ ಪಾಲನೆಗೆ ಒತ್ತು ನೀಡಬೇಕೆಂದು ಮೇಲ್ವಿಚಾರಕರಿಗೆ ತಿಳಿಹೇಳಿದರು.

ಸರಕಾರದಿಂದ ವಿದ್ಯಾರ್ಥಿಗಳಿಗೆ ಇರುವಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ತಲಪಿಸುವ ಕೆಲಸ ಆಯಾ ಇಲಾಖೆಗಳ ಮೇಲ್ವಿಚಾರಕರದ್ದು ಎಂದು ನೆನಪಿಸಿದ ಅವರು, ಯಾವದೇ ಕೊರತೆ ಅಥವಾ ದೂರುಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.