ಕೂಡಿಗೆ, ಆ. 18: ಕೂಡಿಗೆ ಗ್ರಾಮ ಪಂಚಾಯಿತಿಯ 2017-18ನೇ ಸಾಲಿನ ಗ್ರಾಮಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ಕೂಡಿಗೆಯ ಸದ್ಗುರು ಅಪ್ಪಯ್ಯ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು.

ಹಾರಂಗಿ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಕುಸಿಯುವ ಹಂತದಲ್ಲಿದ್ದರೂ ಇದರ ಬಗ್ಗೆ ಅಧಿಕಾರಗಳು ಯಾವದೇ ಕ್ರಮಕೈಗೊಂಡಿಲ್ಲ ಎಂಬುದರ ಕುರಿತು ಕೊಡಗು ಜಿಲ್ಲಾ ಹಿತರಕ್ಷಣ ಸಮಿತಿಯ ಬಿ.ಡಿ.ಅಣ್ಣಯ್ಯ ಸಭೆಯಲ್ಲಿ ಅಧಿಕಾರಿಗೆ ಕೇಳಿದರು. ಅಧಿಕಾರಿಯಿಂದ ಸಮರ್ಪಕ ಉತ್ತರ ಬಾರದ ಸಂದರ್ಭ ಪರ ವಿರುದ್ಧವಾದ ಚರ್ಚೆಗಳು ನಡೆದವು.

ಈ ಸಂದರ್ಭ ಬ್ಯಾಡಗೊಟ್ಟ ಗ್ರಾಮಕ್ಕೆ ಕಳೆದ ತಿಂಗಳ ಹಿಂದೆ ರಾಜ್ಯ ಸರ್ಕಾರದ ಕಂದಾಯ ಸಚಿವರು ಭೇಟಿ ನೀಡಿ ಈ ವ್ಯಾಪ್ತಿಯ ವಸತಿ ರಹಿತರಿಗೆ 8 ಎಕರೆ ಜಾಗವನ್ನು ಮಂಜೂರು ಮಾಡುವ ಬಗ್ಗೆ ಅಧಿಕಾರಿಗಳಿಗೆ ಸ್ಥಳದಲ್ಲೆ ಸೂಚನೆ ನೀಡಿ ಜಾಗದ ಸರ್ವೆ ನಡೆಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಸೂಚಿಸಿದ್ದರೂ ಇವುಗಳ ಕಡತವು ಜಿಲ್ಲಾಧಿಕಾರಿಗಳ ಕಚೇರಿಯಿಂದ ಮುಂದುವರೆದು ಪುನಃ ತಾಲೂಕು ಕಚೇರಿಗೆ ಬಂದರೂ ಮಂಜೂರಾಗಿರುವದು ಕೇವಲ 1.5 ಎಕರೆ ಜಾಗ ಮಾತ್ರ. ಕಡತದ ಹಿಂದೆ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಯವರು ಸಂಬಂಧಪಟ್ಟ ವರನ್ನು ಸಂಪರ್ಕಿಸದೆ ಮಂಜೂರಾಗಬೇಕಿದ್ದ 8 ಎಕರೆ ಜಾಗ ಈಗ ಕಡಿಮೆ ಯಾಗಿರುವ ಬಗ್ಗೆ ಗ್ರಾಮಸ್ಥರುಗಳಾದ ಗಣೇಶ್, ಅಣ್ಣಯ್ಯ, ಮಂಜುನಾಥ್, ಗಿರೀಶ್, ಕುಮಾರ್ ಮೊದಲಾದವರು ಸಭೆಗೆ ಪ್ರಶ್ನಿಸಿದರು.

ಆಹಾರ ಇಲಾಖೆಯ ಅಧಿಕಾರಿ ರಾಜಣ್ಣ ಮಾಹಿತಿ ನೀಡುವ ಸಂದರ್ಭ ಕೂಡಿಗೆ ನ್ಯಾಯಬೆಲೆ ಅಂಗಡಿ ಯೊಂದರಲ್ಲಿ ಸಮರ್ಪಕವಾಗಿ ಪಡಿತರ ವಸ್ತುಗಳು ವಿತರಣೆ ಯಾಗುತ್ತಿಲ್ಲ. ಪಡಿತರ ವಸ್ತುಗಳ ಮೇಲೆ ಸರ್ಕಾರ ನಿಗಧಿ ಪಡಿಸಿದ ಬೆಲೆಯನ್ನು ಪಡೆಯದೆ ಅಧಿಕ ಹಣ ವಸೂಲಿ ಮಾಡಿ ಮನ ಬಂದಂತೆ ಕಾರ್ಡು ಗಳನ್ನು ರದ್ದು ಪಡಿಸುತ್ತಿರುವದರಿಂದ ಈ ಭಾಗದ ಜನರಿಗೆ ಅನ್ಯಾಯ ವಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಅಧಿಕಾರಿ ಹಾಗೂ ಸಭೆಯ ಅಧ್ಯಕ್ಷರ ಎದುರೆ ತೆರಳಿ ಪಡಿತರದಾರರು ಕೂಗಾಟದಲ್ಲಿ ತೊಡಗಿದರು.

ಇದಕ್ಕೆ ಉತ್ತರಿಸಿದ ಆಹಾರ ಇಲಾಖೆಯ ಅಧಿಕಾರಿ ರಾಜಣ್ಣ, ಸರ್ಕಾರ ನಿಗಧಿ ಪಡಿಸಿದ ಬೆಲೆಯಲ್ಲೆ ನ್ಯಾಯಬೆಲೆ ಅಂಗಡಿ ಮಾಲೀಕ ಮಾರಾಟ ಮಾಡಬೇಕು. ಅಲ್ಲದೆ, ಮನಬಂಧಂತೆ ಮಾರಾಟ ಮಾಡುತ್ತಿರುವ ವಿಷಯವನ್ನು ಪಡಿತರ ವಸ್ತುಗಳು ವಿತರಣೆ ಮಾಡುವ ಸಂದರ್ಭ ಗಮನಕ್ಕೆ ತಂದರೆ ಅದಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವದು, ಅಲ್ಲದೆ ತಹಶೀಲ್ದಾರರ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳ ಕ್ರಮಕ್ಕೆ ಆಗ್ರಹ ಮಾಡಲಾಗುವದು ಎಂದರು.

ನಂತರ ಸಭೆಯಲ್ಲಿ ಕೂಡಿಗೆ ಸರ್ಕಲ್‍ನಲ್ಲಿ ಕಸದ ತೊಟ್ಟಿಗಳಲ್ಲಿ ಕಸ ತುಂಬಿ ಗಬ್ಬೆದ್ದು ನಾರಿದರೂ ಶುಚಿತ್ವ ಮತ್ತು ಬೀದಿ ದೀಪ ಅಡವಡಿಸುವಿಕೆ ಯಲ್ಲಿ ಗಮನ ಹರಿಸುತ್ತಿಲ್ಲ ಎಂದು ಆಟೋ ಚಾಲಕ ಸಂಘದ ಕಾರ್ಯದರ್ಶಿ ಭದ್ರ, ಸ್ಥಳೀಯರು ಗಳಾದ ರಾಜ, ಮಂಜುನಾಥ್, ಕಿರಣ ಮೊದಲಾದವರು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದರು.

ಸಭೆಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಚರ್ಚೆ ನಡೆದು ಗ್ರಾ.ಪಂ ವ್ಯಾಪ್ತಿಯಲ್ಲಿ ಯಾವದೇ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಯಾವದೇ ಕಾಮಗಾರಿಗಳು ನಡೆಯದಿರುವದರ ಬಗ್ಗೆ ಹಾಜರಿದ್ದ ಗ್ರಾಮಸ್ಥರು ಆಡಳಿತ ಮಂಡಳಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಕಾಂತರಾಜ್, ರಾಜು ಮೊದಲಾದವರು ಯೋಜನೆಯ ಉಪಯುಕ್ತತೆಯ ಬಗ್ಗೆ ಗ್ರಾಮಸ್ಥರಿಗೆ ಸಮರ್ಪಕ ಮಾಹಿತಿ ನೀಡಿ ಗ್ರಾಮಗಳ ಕಾಮಗಾರಿಗಳನ್ನು ನಡೆಸದೆ ಕಾಲ ತಳ್ಳುತ್ತಿರುವದು ಆಡಳಿತ ಮಂಡಳಿಗೆ ಶೋಭೆ ತರುವಂತದಲ್ಲ ಎಂದು ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ನಿವೇಶನ ರಹಿತ ಫಲಾನುಭವಿಗಳು ಸೇರಿದಂತೆ ಗ್ರಾಮದ ಕಾಮಗಾರಿಗಳ ಬಗ್ಗೆ ಚರ್ಚೆಗಳು ನಡೆದವು. ಅಧ್ಯಕ್ಷತೆ ವಹಿಸಿದ ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡುತ್ತಾ ಸಭೆಯಲ್ಲಿ ಚರ್ಚೆಯಾದ ವಿಚಾರಗಳನ್ನು ನೊಂದಾಯಿಸಿ ಕೊಳ್ಳಲಾಗಿದೆ. ಅದಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿ ಅಭಿವೃದ್ಧಿಯ ಕೆಲಸಗಳನ್ನು ಕೈಗೊಳ್ಳಲಾಗುವದು ಎಂದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್‍ಕುಮಾರ್ ನೋಡೆಲ್ ಅಧಿಕಾರಿ ಮಹೇಶ್, ಹೇಮಂತ್‍ಕುಮಾರ್ ಸೇರಿದಂತೆ ಗ್ರಾ.ಪಂನ ಎಲ್ಲಾ ಸದಸ್ಯರುಗಳು ಹಾಜರಿದ್ದರು.