ಸೋಮವಾರಪೇಟೆ, ಆ.18: ಕೊಡಗು ಜಿಲ್ಲೆಯಲ್ಲಿ ಗೋ ವಧೆ ನಿಷೇಧವಿದೆ. ಆದರೆ ಮಾರಾಟಕ್ಕೆ ಯಾವದೇ ನಿರ್ಬಂಧವಿಲ್ಲ. ಆದರೂ ಗೋವು ಮತ್ತು ಗೋ ಮಾಂಸ ಮಾರಾಟ ಸಂದರ್ಭ ಹಿಂಸೆ ನೀಡುವದು ಯಾಕೆ? ಎಂದು ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸ್ಸೀನ್ ಪ್ರಶ್ನಿಸಿದರು.ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಸೋಮವಾರಪೇಟೆ ಘಟಕದ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ‘ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ-ಜನತೆಯ ಅಭಿಯಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊಡಗಿನಲ್ಲಿ ಕಾವೇರಿ ಹರಿಯುತ್ತಿರುವದರಿಂದ ಗೋವುಗಳ ವಧೆಯನ್ನು ನಿಷೇಧಿಸಿರುವ ಬಗ್ಗೆ ಕೂರ್ಗ್ ಗೆಜೆಟಿಯರ್‍ನಲ್ಲಿ ಉಲ್ಲೇಖ ವಿದೆ. ಆದರೆ ಗೋವುಗಳ ಮಾರಾಟ, ಮಾಂಸ ಮಾರಾಟದ ಬಗ್ಗೆ ಯಾವ ನಿರ್ಬಂಧವೂ ಇಲ್ಲ. ಆದರೂ ಸಹ ಗೋವಿನ ವಿಷಯದಲ್ಲಿ ಹಲ್ಲೆ, ಹತ್ಯೆಯಂತಹ ಹಿಂಸಾ ಕೃತ್ಯಗಳು ನಡೆಯುತ್ತಿವೆ. ಇದನ್ನು ಪ್ರತಿ ರೋಧಿಸುವ ಶಕ್ತಿ ಎಲ್ಲರಿಗೂ ಬೇಕಾಗಿದೆ ಎಂದರು.

ಎಲ್ಲರನ್ನೂ ಸಮಾನವಾಗಿ ಕಾಣುವ ಅಂಬೇಡ್ಕರ್ ಅವರ ಸಂವಿಧಾನದ ಯಥಾವತ್ ಜಾರಿ ಆಗಬೇಕು. ಹಿಂದುತ್ವದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಸಹಿಸಲು ಯಾರೂ ಸಿದ್ದರಿಲ್ಲ. ಇದೀಗ ಪಾಕಿಸ್ತಾನ ಮತ್ತು ಚೀನಾ ಭಾರತದ ಮೇಲೆ ಯುದ್ಧಕ್ಕೆ ತಯಾರಾಗಿದ್ದು, ಭಾರತೀಯರೆಲ್ಲರೂ ಒಂದಾಗಿ ಶತ್ರು ರಾಷ್ಟ್ರಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.

ಅಖಂಡ ಭಾರತ ಸಂಕಲ್ಪದ ಹೆಸರಿನಲ್ಲಿ ಪಂಜಿನ ಮೆರವಣಿಗೆ ನಡೆಸುವ ಹಿಂದೂಪರ ಸಂಘಟನೆಗಳ ಕಾರ್ಯವನ್ನು ಟೀಕಿಸಿದ ಮೊಹಿಸ್ಸೀನ್, ದೇಶಭಕ್ತಿಯ ಹೆಸರಿನಲ್ಲಿ ಕೆಲವರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಆಗ್ರಹಿಸುವ ಇವರು ಅದೇ ಪಾಕಿಸ್ತಾನವನ್ನು ಭಾರತಕ್ಕೆ ಸೇರ್ಪಡೆಗೊಳಿಸುವ ಘೋಷಣೆ ಕೂಗುವದರಲ್ಲಿ ಅರ್ಥವಿಲ್ಲ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದಸಂಸ ಮುಖಂಡ ಜಯಪ್ಪ ಹಾನಗಲ್ ತಿನ್ನುವ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ. ದೌರ್ಜನ್ಯಗಳ ವಿರುದ್ಧ ಪ್ರಶ್ನೆ ಮಾಡುವದನ್ನೇ ಧಮನಿಸುವ ಕಾರ್ಯ ನಡೆಯುತ್ತಿದೆ. ದೇಶದಲ್ಲಿರುವ ಸರ್ವಾಧಿಕಾರಿ ಧೋರಣೆಯನ್ನು ತಡೆಗಟ್ಟಬೇಕಾಗಿದೆ ಎಂದರು.

ಕಳೆದ 6 ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಜನಪರ ಕೆಲಸ ಮಾಡಿದ್ದರೆ, ದೇಶದಲ್ಲಿಂದು ಬಡವರೇ ಇರುತ್ತಿರಲಿಲ್ಲ ಎಂದು ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ಪಿಎಫ್‍ಐ ಜಿಲ್ಲಾಧ್ಯಕ್ಷ ಹ್ಯಾರೀಸ್, ಎಸ್‍ಡಿಪಿಐ ಜಿಲ್ಲಾ ಮುಖಂಡ ಅಬೂಬಕರ್, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಡ್ಕರ್, ಸೋಮವಾರಪೇಟೆ ಘಟಕದ ಅಧ್ಯಕ್ಷ ಖಾಲಿದ್, ಗ್ರಾ.ಪಂ. ಮಾಜೀ ಸದಸ್ಯ ಜಾಫರ್, ಕರ್ನಾಟಕ ರಾಜ್ಯ ರೈತ ಮುಖಂಡ ಡಿ.ಎಸ್. ನಿರ್ವಾಣಪ್ಪ ಅವರುಗಳು ಉಪಸ್ಥಿತರಿದ್ದರು.