ಕೂಡಿಗೆ, ಆ. 18: ಕುಶಾಲನಗರ ಹೋಬಳಿ ವ್ಯಾಪ್ತಿಯ ಸಿದ್ದಲಿಂಗಪುರ, ತೊರೆನೂರಿನ ಕೆಲವು ಭಾಗ, 6ನೇ ಹೊಸಕೋಟೆ, ಅಳುವಾರ ಸೇರಿದಂತೆ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಮಳೆಯಾಶ್ರಿತವಾಗಿ ಮೆಕ್ಕೆಜೋಳವನ್ನು ರೈತರು ಬೆಳೆಯುತ್ತಿದ್ದಾರೆ. ಇದೀಗ ಜೋಳವು ತೆನೆ ಕಟ್ಟುವ ಸಂದರ್ಭವಾಗಿದ್ದು ಮಳೆಯ ಅವಶ್ಯಕತೆ ಮುಖ್ಯವಾಗಿದೆ. ಈ ಭಾಗಗಳಲ್ಲಿ ಕಳೆದ 15 ದಿನಗಳಿಂದ ತುಂತುರು ಮಳೆಯೂ ಬಾರದೆ ಇರುವದರಿಂದ ಜೋಳವು ಕಾಳು ಕಟ್ಟುತ್ತಿಲ್ಲ. ನೀರಿನ ಅವಶ್ಯಕತೆ ಇರುವದರಿಂದ ಮಳೆಯೂ ಬಾರದೆ ಜೋಳದ ಗಿಡಗಳು ಒಣಗುತ್ತಿವೆ.

ಈ ವ್ಯಾಪ್ತಿಯಲ್ಲಿ ಹೆಚ್ಚು ಜೋಳವನ್ನು ಬೆಳೆದು ರಾಜ್ಯ ಮತ್ತು ಹೊರ ರಾಜ್ಯಗಳಿಗೂ 150 ರಿಂದ 200 ಲಾರಿಗಳಷ್ಟು ಸಾಗಾಟವಾಗುತ್ತಿತ್ತು. ಆದರೆ ಇದೀಗ ಮಳೆ ಬಾರದೆ ಇರುವದರಿಂದ ಜೋಳದ ಕಡ್ಡಿಗಳು ತೇವಾಂಶ ಕಳೆದುಕೊಂಡು ನೆಲಕ್ಕೆ ಬೀಳುತ್ತಿದೆ. ಜೋಳವು ಒಣಗುತ್ತಿರುವದರಿಂದ ರೈತರು ತಮ್ಮ ಹಸುಗಳಿಗೆ ಕಟಾವು ಮಾಡಿ ಹಾಕುತ್ತಿರುವದು ಕಂಡು ಬರುತ್ತಿದೆ.

ಈ ಸಾಲಿನಲ್ಲಿ ಜೋಳದ ಬೇಸಾಯ ಮಾಡಿದ ಮತ್ತು ಕೃಷಿ ಸಾಲ ಮಾಡಿದ ಹಣವನ್ನು ಮರುಪಾವತಿ ಮಾಡಲು ಭಾರಿ ಕಷ್ಟಕರ ಪರಿಸ್ಥಿತಿ ಎದುರಾಗಿದೆ. ಮುಂದಿನ ದಿನದಲ್ಲಿ ಮಳೆ ಬಂದಲ್ಲಿ ಬೇರೆ ಬೆಳೆಯನ್ನು ಅವಲಂಬಿಸಬೇಕಾಗುತ್ತದೆ. ಸಂಬಂಧಪಟ್ಟ ಕೃಷಿ ಇಲಾಖೆಯವರು ಸ್ಥಳ ಪರಿಶೀಲಿಸಿ ಜೋಳದ ಬೆಳೆ ನಷ್ಟಕ್ಕೊಳಗಾದ ರೈತರುಗಳಿಗೆ ಪರಿಹಾರವನ್ನು ಒದಗಿಸಬೇಕೆಂದು ಈ ಭಾಗದ ರೈತರುಗಳ ಆಗ್ರಹವಾಗಿದೆ.