ಗೋಣಿಕೊಪ್ಪಲು, ಆ. 18: ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರವನ್ನು ಕೊಡಗಿನ ಈರ್ವರು ಶಾಸಕರುಗಳು ಟೀಕಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.ಕಾಂಗ್ರೆಸ್ ಸರ್ಕಾರ ಕೊಡಗನ್ನು ಕಡೆಗಣನೆ ಮಾಡಿದೆ ಎಂದು ಹೇಳಿಕೆ ನೀಡಿರುವದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಶಾಸಕರುಗಳಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ನಿರಾಧಾರವಾದ ಹೇಳಿಕೆ ನೀಡುವ ಮೂಲಕ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದ ಬಿಜೆಪಿ ಸಾಲ ಮನ್ನಾ ಮಾಡಲು ವಿಫಲವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಆಶ್ವಾಸನೆಗಳನ್ನೇ ನೀಡದೆ ಸಹಕಾರ ಸಂಘಗಳಲ್ಲಿನ ಸಾಲವನ್ನು ಮನ್ನಾ ಮಾಡಿ ರೈತರ ನೋವಿಗೆ ಸ್ಪಂದಿಸಿದೆ ಎಂದರು. ಬಿಜೆಪಿ ಶಾಸಕರು ಕೈಗೊಂಡ ಆಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದರು. ಕಾಂಗ್ರೆಸ್ ಸರ್ಕಾರ ಜನತೆಯ ಪರವಾಗಿ ದುಡಿಯಲು ಬದ್ದವಾಗಿದ್ದು ಬಿಜೆಪಿ ಸರ್ಕಾರದ 2015 ಚುನಾವಣಾ ಪ್ರಣಾಳಿಕೆಯ ಪ್ರಕಾರ ಸಾಲ ಮನ್ನಾ ಮಾಡುವದರಲ್ಲಿ ವಿಫಲವಾಗಿದೆ. ಅನಗತ್ಯವಾಗಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಶಾಸಕರು ಟೀಕಿಸುತ್ತಿದ್ದಾರೆ ಎಂದರು.

ನಗರ ಕಾಂಗ್ರೆಸ್ ಅಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಸಂಸದರು ಕಸ್ತೂರಿ ರಂಗನ್ ವರದಿ ಜಾರಿಯಾಗುವದನ್ನು ತಡೆಯುವಲ್ಲಿ ವಿಫಲವಾಗಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿ ಮುನ್ನ ಕೇಂದ್ರ ಪರಿಸರ ಖಾತೆ ಸಚಿವಾಲಾಯ ಕರೆದಿದ್ದ ಸಭೆಗೆ ಗೈರಾಗುವ ಮೂಲಕ ಸಂಸದ ಜನತೆಗೆ ದ್ರೋಹವೆಸಗಿದ್ದಾರೆ ಎಂದು ಆರೋಪಿಸಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇಂದಿರ ಪ್ರಭಾವತಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಹಾಗೂ ಪ್ರ ಕಾರ್ಯದರ್ಶಿ ಕಡೇಮಾಡ ಚೇತನ್ ಗೋಷ್ಠಿಯಲ್ಲಿದ್ದರು.