ವೀರಾಜಪೇಟೆ, ಆ. 18: ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಆಚರಿಸುವ ಸಾಂಪ್ರದಾಯಿಕ ಗಣೇಶೋತ್ಸವಕ್ಕೆ 25 ವರ್ಷ ತುಂಬಲಿರುವದರಿಂದ ಬೆಳ್ಳಿ ಮಹೋತ್ಸವ ಗಣೇಶೋತ್ಸವದ ಆಚರಣೆಗೆ ಚಾಲನೆ ನೀಡಲಾಗುವದು ಎಂದು ಸಮಿತಿಯ ಕಾರ್ಯಾಧ್ಯಕ್ಷ ಪಿ.ಎ. ಮಂಜುನಾಥ್ ತಿಳಿಸಿದರು.

ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳ್ಳಿ ಮಹೋತ್ಸವದ ಆಚರಣೆಗಾಗಿ ಉತ್ಸವ ಸಮಿತಿಯಿಂದ ಈಗಾಗಲೇ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ತಾ. 25 ರಂದು ಉತ್ಸವ ಆರಂಭಗೊಳ್ಳಲಿದ್ದು, ಸೆ. 5 ರವರಗೆ ಪ್ರತಿ ದಿನ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ರಾತ್ರಿ ಗಣೇಶನ ಪೂಜಾ ಸೇವೆಯ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಿತಿಯು ಉತ್ಸವದ ದಿನಗಳಲ್ಲಿ ಸಮಾಜ ಸೇವೆಗೂ ಆದ್ಯತೆ ನೀಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಆಯ್ದ ಸಾಧಕರನ್ನು ಗುರುತಿಸಿ ಪ್ರತಿ ವರ್ಷ ಸನ್ಮಾನವನ್ನು ಮಾಡುತ್ತಿದೆ. ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡುವ ಸಲುವಾಗಿ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗುತ್ತಿದ್ದು ಈ ಬಾರಿಯೂ ಅವಕಾಶ ನೀಡಲಾಗಿದೆ ಎಂದರು.

ಸಮಿತಿಯ ಸಂಸ್ಥಾಪಕರಲ್ಲೊಬ್ಬರಾದ ಮಾಳೇಟಿರ ಕಾಶಿ ಕುಂಞಪ್ಪ ಮಾತನಾಡಿ, ಗಣೇಶೋತ್ಸವ ಸಮಿತಿ ಸ್ಥಾಪನೆಗೊಂಡು ಸುಮಾರು 40 ವರ್ಷಗಳಾಗಿವೆ. ಕೆಲವು ವರ್ಷಗಳು 5 ದಿನಗಳವರಗೆ, 9 ದಿನಗಳವರೆಗೆ ಗಣೇಶನನ್ನು ಪೂಜಿಸಿ ವಿಸರ್ಜಿಸಲಾಗುತಿತ್ತು. ನಂತರದ ವರ್ಷಗಳಲ್ಲಿ ಗಣೇಶನ್ನು 11 ದಿನಗಳವರೆಗೆ ಪೂಜಿಸಿ ಗೌರಿ-ಗಣೇಶನ ಸಾಮೂಹಿಕ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತಾಗಿ ಈ ವರ್ಷ 25 ವರ್ಷಗಳು ತುಂಬುತ್ತಿರುವದರಿಂದ ಉತ್ಸವದ ಬೆಳ್ಳಿ ಮಹೋತ್ಸವದ ಆಚರಣೆಗೆ ಸೂಕ್ತವಾಗಿದೆ. ಗಣೇಶೋತ್ಸವಕ್ಕೆ ಈವರೆಗೆ ಸಹಕರಿಸಿದ ಗಾಂಧಿನಗರದ ನಿವಾಸಿಗಳು, ದಾನಿಗಳು ಹಾಗೂ ಪಟ್ಟಣದ ಪ್ರಮುಖರನ್ನು ಸಮಿತಿ ಈ ಸಂದರ್ಭದಲ್ಲಿ ಸ್ಮರಿಸುತ್ತದೆ. ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಜಿ.ಬಿ. ಚಾಮಿ, ಪದಾಧಿಕಾರಿಗಳು ಹಾಗೂ ಈವರೆಗೆ ದೀರ್ಘಕಾಲ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಪದಾಧಿಕಾರಿಗಳನ್ನು ಬೆಳ್ಳಿ ಮಹೋತ್ಸವದ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವದು ಎಂದು ಹೇಳಿದರು.

ಸಮಿತಿಯ ಗೌರವ ಅಧ್ಯಕ್ಷ ಕುಯ್ಮಂಡ ರಾಕೇಶ್ ಬಿದ್ದಪ್ಪ ಮಾತನಾಡಿ, ಗಾಂಧಿನಗರದ ಗಣೇಶೋತ್ಸವದ ಬೆಳ್ಳಿ ಮಹೋತ್ಸವದ ಪ್ರಯುಕ್ತ ಈ ಹಿಂದಿನ ಎಲ್ಲ ವರ್ಷಗಳಿಗಿಂತಲೂ ಸಮಿತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಸ್ಥಳೀಯ ಕಲಾವಿದರು ಭಾಗವಹಿಸುವಂತಾಗಬೇಕು ಎಂದರು.

ಗೋಷ್ಠಿಯಲ್ಲಿ ಸಮಿತಿಯ ಸಲಹೆಗಾರರಾದ ಮುಂಡಂಡ ಪೂಣಚ್ಚ ಉಪಸ್ಥಿತರಿದ್ದರು.