ಸೋಮವಾರಪೇಟೆ, ಆ. 18: ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಶಾಂತಳ್ಳಿ ಗ್ರಾಮದಲ್ಲಿ ಕಳೆದ 8 ವರ್ಷಗಳ ಹಿಂದೆ ಸ್ಥಾಪಿಸ ಲಾಗಿರುವ ಬಿಎಸ್‍ಎನ್ ಎಲ್ ಟವರ್ ಸಮರ್ಪಕ ವಾಗಿ ಕಾರ್ಯನಿರ್ವಹಿ ಸದೇ ಇರುವದರಿಂದ ಈ ಭಾಗದ ಸಾವಿರಾರು ಮಂದಿ ಗ್ರಾಹಕರು ಬಿಎಸ್‍ಎನ್‍ಎಲ್ ಸಂಸ್ಥೆಗೆ ದಿನನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ಸಂಸ್ಥೆಯ ಟವರ್ ನಂಬಿ ಮೊಬೈಲ್ ಖರೀದಿಸಿದ ಗ್ರಾಹಕರು ಇದೀಗ ನೆಟ್‍ವರ್ಕ್ ಸಮಸ್ಯೆಯಿಂದ ಬೇಸತ್ತಿದ್ದಾರೆ. ವಿದ್ಯುತ್ ಸರಬರಾಜು ಇರುವ ಸಂದರ್ಭ ಮಾತ್ರ ಟವರ್ ಕಾರ್ಯನಿರ್ವಹಿಸುತ್ತಿದ್ದು, ವಿದ್ಯುತ್ ಪೂರೈಕೆ ಸ್ಥಗಿತಗೊಂಡ ತಕ್ಷಣ ಮೊಬೈಲ್‍ನ ನೆಟ್‍ವರ್ಕ್ ಸಹ ಕಡಿತಗೊಳ್ಳುತ್ತಿದೆ.

ಟವರ್‍ನ ನಿರ್ವಹಣೆಗೆ ಓರ್ವ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇದಕ್ಕೆ ಅಳವಡಿಸಿರುವ ಬ್ಯಾಟರಿ, ಜನರೇಟರ್ ಕ್ಷಮತೆ ಕಳೆದುಕೊಂಡಿರುವ ಪರಿಣಾಮ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಶಾಂತಳ್ಳಿ, ಬೆಟ್ಟದಳ್ಳಿ, ಹಂಚಿನಳ್ಳಿ, ಕುಂದಳ್ಳಿ, ಹರಗ, ಬೆಟ್ಟದಕೊಪ್ಪ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಾವಿರಾರು ಮಂದಿ ಬಿಎಸ್‍ಎನ್‍ಎಲ್ ಸಿಮ್ ಉಪಯೋಗಿಸುತ್ತಿದ್ದು, ಅಗತ್ಯ ಸಂದರ್ಭಗಳಲ್ಲಿ ತುರ್ತು ಕರೆಯನ್ನೂ ಮಾಡಲಾಗದ ಸ್ಥಿತಿ ಎದುರಿಸುತ್ತಿದ್ದಾರೆ.

ಶಾಂತಳ್ಳಿ ಭಾಗದ ಮಂದಿ ಹತ್ತಾರು ಬಾರಿ ಈ ಬಗ್ಗೆ ಬಿಎಸ್‍ಎನ್‍ಎಲ್ ಸಂಸ್ಥೆಗೆ ದೂರು ನೀಡಿದ್ದರೂ ಯಾವದೇ ಪ್ರಯೋಜನ ಕಂಡಿಲ್ಲ. ಶಾಂತಳ್ಳಿ ಟವರ್‍ಗೆ ಅಳವಡಿಸಬೇಕಾದ ನೂತನ ಬ್ಯಾಟರಿ, ಜನರೇಟರ್‍ಗಳನ್ನು ಸೋಮವಾರಪೇಟೆಯ ಕೇಂದ್ರ ಕಚೇರಿಗೆ ಅಳವಡಿಸಿಕೊಂಡು ಅಲ್ಲಿರುವ ಹಳೆಯ ಬ್ಯಾಟರಿಗಳನ್ನು ಶಾಂತಳ್ಳಿಗೆ ಕೊಡುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಈ ಭಾಗದಲ್ಲಿ ಬಿಎಸ್‍ಎನ್‍ಎಲ್ ಟವರ್ ಹೊರತುಪಡಿಸಿ ಬೇರಾವದೇ ನೆಟ್‍ವರ್ಕ್‍ಗಳಿಲ್ಲದೇ ಇರುವದರಿಂದ ಸಂಸ್ಥೆಯಿಂದಲೂ ಹೆಚ್ಚಿನ ಅನಾದರ ಕಂಡುಬರುತ್ತಿದೆ. ರಾತ್ರಿ 12 ಗಂಟೆಯ ನಂತರ ಟವರ್ ಸ್ಥಗಿತಗೊಳ್ಳುತ್ತಿದೆ. ನೆಟ್‍ವರ್ಕ್ ಸಮಸ್ಯೆಯಿಂದ ಕೆಲವೊಮ್ಮೆ ಸಾವಿನ ಸುದ್ದಿಯನ್ನು ತಿಳಿಸಲೂ ಸಹ ಅಸಾಧ್ಯವಾಗುತ್ತಿದೆ. ಮೊಬೈಲ್‍ಗಳ ಮೂಲಕ ಪ್ರಪಂಚ ಇನ್ನಷ್ಟು ಹತ್ತಿರವಾಗಿದ್ದರೂ ಶಾಂತಳ್ಳಿ ಭಾಗದಲ್ಲಿ ಮಾತ್ರ ಆದಿಕಾಲದ ಪರಿಸ್ಥಿತಿಯೇ ಮುಂದುವರೆದಿದೆ. ಈ ಬಗ್ಗೆ ಬಿಎಸ್‍ಎನ್‍ಎಲ್ ಸಂಸ್ಥೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಸೋಮವಾರಪೇಟೆಯಲ್ಲಿರುವ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲಾಗುವದು ಎಂದು ಗ್ರಾಮಸ್ಥರೂ ಹಾಗೂ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಗ್ರಾಮಸ್ಥರಾದ ಸುಂದರ್, ಮಧು, ಗಣಪತಿ, ಬಸಪ್ಪ, ಲಿಂಗರಾಜು ಸೇರಿದಂತೆ ಇತರರು ಎಚ್ಚರಿಸಿದ್ದಾರೆ.