ಮಡಿಕೇರಿ, ಆ. 18: ಬಾಧ್ರಪದ ಮಾಸದಲ್ಲಿ ವರ್ಷಂಪ್ರತಿಯಂತೆ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವ ಹಾಗೂ ಶ್ರೀ ಗೌರಿ ವ್ರತವು ತಾ. 25 ರಂದು ನಾಡಿನೆಲ್ಲೆಡೆ ಜರುಗುವದರೊಂದಿಗೆ ಅಲ್ಲಲ್ಲಿ ಸಾರ್ವಜನಿಕ ಉತ್ಸವಕ್ಕೆ ತಯಾರಿ ನಡೆಸಲಾಗುತ್ತಿದೆ.ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು, ಅಂದು ಸಾರ್ವಜನಿಕವಾಗಿ ಆಚರಣೆಗೆ ತಂದಿರುವ ಶ್ರೀ ಗಣೇಶೋತ್ಸವವು ಇಂದು ದೇಶದೆಲ್ಲೆಡೆ ಬೃಹತ್ ರೀತಿಯಲ್ಲಿ ಆಚರಣೆ ಗೊಳ್ಳುತ್ತಿದ್ದು, ಕೊಡಗಿನಲ್ಲಿ ಕೂಡ 500ಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕವಾಗಿ ನಡೆಯುತ್ತಿದೆ.

ಸಾರ್ವಜನಿಕ ಗಣೇಶೋತ್ಸ ವಗಳಲ್ಲದೆ, ಬಹುತೇಕ ಮನೆ ಮನೆಗಳಲ್ಲಿ ಕೂಡ ಭಾದ್ರಪದ ಶುಕ್ಲ ಚೌತಿಯಂದು ಗೌರಿ ಗಣೇಶೋತ್ಸವ ಆಚರಣೆ ಜಾರಿ ಯಲ್ಲಿದೆ. ಭಾರತದಲ್ಲಿ ಹೈದರಾಬಾದ್ ಹಾಗೂ ಮುಂಬೈ ಪ್ರಾಂತಗಳಲ್ಲಿ ಪ್ರಸಿದ್ಧಿಗೊಂಡಿರುವ ಬೃಹತ್ ಉತ್ಸವಗಳು ವರ್ಷಗಳು ಉರುಳಿದಂತೆ ಎಲ್ಲೆಡೆ ಕಾಣುವಂತಾಗಿದೆ. ಕೊಡಗಿನಂತಹ ಪುಟ್ಟ ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಪ್ರಸಕ್ತ ವರ್ಷದಲ್ಲಿ ಸುಮಾರು 32 ಕಡೆಗಳಲ್ಲಿ ಸಾರ್ವಜನಿಕ ಉತ್ಸವ ಆಚರಣೆಗೊಳ್ಳುವ ಮಾಹಿತಿ ಲಭಿಸಿದೆ. ಈ ದಿಸೆಯಲ್ಲಿ ತಯಾರಿ ಕೂಡ ಅಲ್ಲಲ್ಲಿ ಕಂಡುಬರುತ್ತಿದೆ.

ಸೋಮವಾರಪೇಟೆ ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ಒಳ ಗೊಂಡಂತೆ ಈಗಿನ ಮಾಹಿತಿಯಂತೆ 50ಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಜರುಗಲಿರುವದಾಗಿ ಗೊತ್ತಾಗಿದೆ. ಅಲ್ಲದೆ ಕುಶಾಲನಗರ, ಕೂಡಿಗೆ ಸುತ್ತಮುತ್ತ 16ಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸಿದ್ಧತೆ ನಡೆದಿದ್ದು, ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೆಂಟು ಕಡೆಗಳಲ್ಲಿ ನಡೆಸಲಾಗುವದು ಎಂದು ಮಾಹಿತಿಯಿದೆ.

ವೀರಾಜಪೇಟೆ ಪಟ್ಟಣದಲ್ಲಿ 18ಕ್ಕೂ ಹೆಚ್ಚಿನ ಸಾರ್ವಜನಿಕ ಗೌರಿ - ಗಣೇಶೋತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಕಳೆದ ನಾಲ್ಕಾರು ದಶಕಗಳಿಂದ ವೀರಾಜಪೇಟೆಯಲ್ಲಿ ಈ ಉತ್ಸವ ಅನೇಕ ದಿನಗಳ ತನಕ ಜರುಗುತ್ತಾ, ಅಂತಿಮವಾಗಿ ನಿಗದಿತ ದಿನದಂದು ರಾತ್ರಿಯಿಡೀ ಬೆಳಕಿನ ವಿದ್ಯುತ್ ಮಂಟಪಗಳ ಮೆರವಣಿಗೆ ಬಳಿಕ ಮುಂಜಾವಿನಲ್ಲಿ ಉತ್ಸವ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನಡೆಸುವದು ವಿಶೇಷ.

ಇನ್ನು ದಕ್ಷಿಣ ಕೊಡಗಿನ ಕುಟ್ಟ, ಶ್ರೀಮಂಗಲ, ಬಿರುನಾಣಿ, ಬಾಳೆಲೆ, ಪೊನ್ನಂಪೇಟೆ ಸುತ್ತಮುತ್ತಲಿನಲ್ಲಿ 80ಕ್ಕೂ ಅಧಿಕ ಸಾರ್ವಜನಿಕ ಗಣೇಶೋತ್ಸವಗಳು ಹಾಗೂ ಗೋಣಿಕೊಪ್ಪಲು ಹಾಗೂ ಇತರೆಡೆಗಳಲ್ಲಿ 17ಕ್ಕೂ ಹೆಚ್ಚಿನ ಕಡೆ ಸಾಮೂಹಿಕ ಆಚರಣೆ ನಡೆಯಲಿದೆ.

ಮಡಿಕೇರಿ ಗ್ರಾಮಾಂತರ, ಭಾಗಮಂಡಲ ಸುತ್ತಮುತ್ತಲಿನ ಗ್ರಾಮಗಳು, ನಾಪೋಕ್ಲು ಆಸುಪಾಸಿನಲ್ಲಿ ಸುಮಾರು 15 ಕಡೆಗಳಲ್ಲಿ ಸಾರ್ವಜನಿಕ ಉತ್ಸವ ಮೂರ್ತಿ ಆರಾಧನೆ ನಡೆಯುವ ಮಾಹಿತಿ ಲಭಿಸಿದೆ.

ಇತ್ತ ಮಕ್ಕಂದೂರು, ಗಾಳಿಬೀಡು, ಮಾದಾಪುರ, ಸುಂಟಿಕೊಪ್ಪ, ಹಾಲೇರಿ, ಮೇಕೇರಿ, ಹಾಕತ್ತೂರು, ಮರಗೋಡು ಮುಂತಾದೆಡೆ ಮತ್ತು ಮೂರ್ನಾಡು ವಿನಲ್ಲಿ ಕೂಡ ಹತ್ತಾರು ಕಡೆಗಳಲ್ಲಿ ಪ್ರತ್ಯೇಕ ಗಣೇಶೋತ್ಸವ ಕಾರ್ಯ ಕ್ರಮಗಳು ಆಯೋಜಿತಗೊಳ್ಳುತ್ತಿದೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಪ್ರಸಕ್ತ ವರ್ಷದಲ್ಲಿ 500ಕ್ಕೂ ಅಧಿಕ ಸಾರ್ವಜನಿಕ ಗಣೇಶೋತ್ಸವಗಳು ಹಾಗೂ ಅಲ್ಲಲ್ಲಿ ದೇವಾಲಯಗಳಲ್ಲಿ ಪೂಜೆಯೊಂದಿಗೆ ಅನೇಕರು ತಮ್ಮ ತಮ್ಮ ಮನೆಗಳಲ್ಲಿ ವಿನಾಯಕ ಚತುರ್ಥಿಯೊಂದಿಗೆ ಗೌರಿ ಪೂಜೆ ಆಚರಿಸುತ್ತಾರೆ. ಅಂದು ಸ್ವಾತಂತ್ರ್ಯಕ್ಕೆ ಹೊಸ ತಿರುವು ನೀಡಿದ್ದ ಸಾರ್ವಜನಿಕ ಗಣೇಶೋತ್ಸವಗಳು, ಇಂದು ನಾಡಿನಲ್ಲಿ ಸಾರ್ವತ್ರಿಕ ಆಚರಣೆ ಯೊಂದಿಗೆ ಸಾಮಾಜಿಕ ಸಾಮರಸ್ಯ, ಧಾರ್ಮಿಕತೆಗೆ ಭದ್ರ ಬುನಾದಿ ಯೊಂದಿಗೆ ದೈವಿಕ ಭಕ್ತಿ ಜನಮಾನಸ ದಲ್ಲಿ ಜಾಗೃತಿಗೊಂಡು ನಾಡಿಗೆ, ರಾಷ್ಟ್ರಕ್ಕೆ ಶ್ರೀರಕ್ಷೆಯೊಂದಿಗೆ ಸುಖ ಸಮೃದ್ಧಿ ನೀಡಲಿ.

ಜಗತ್ತಿನಲ್ಲಿ ಎದುರಾಗಿರುವ ಯುದ್ಧೋನ್ಮಾದ ದಂತಹ ಕ್ಷೋಭೆ ಶ್ರೀ ಗಣೇಶನಿಂದ ನಿವಾರಣೆಗೊಳ್ಳಲು ಇಂತಹ ಉತ್ಸವಗಳು ಸಹಕಾರಿಯಾಗಲೆಂದು ಆಶಿಸೋಣ.

-ಶ್ರೀಸುತ.