ಮಡಿಕೇರಿ ಆ. 18: ಆಹಾರ ಭದ್ರತೆಯ ನೆಪದಲ್ಲಿ ಕೊಡಗಿನ ಪಾಳು ಬಿದ್ದಿರುವ ಭೂಮಿಯ ವಿವರವನ್ನು ಸಲ್ಲಿಸುವಂತೆ ಸರಕಾರ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ ಎಂದು ಆರೋಪಿಸಿರುವ ವೀರಾಜಪೇಟೆ ಕೊಡವ ಹಿತರಕ್ಷಣಾ ಸಮಿತಿ ಸರಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸುವದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸಿ.ಬಿ. ಪಳಂಗಪ್ಪ, ಕೆಲವು ಕೋಮುವಾದಿ ಹಾಗೂ ಪ್ಯಾಸಿಸ್ಟ್ ಶಕ್ತಿಗಳ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗಳು ಪಾಳುಬಿದ್ದಿರುವ ಭೂಮಿಯ ಸಮೀಕ್ಷೆ ಮಾಡಲು ಕೊಡಗು ಜಿಲ್ಲೆಗೆ ಸೀಮಿತವಾಗುವಂತೆ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಹೊಲ ಹಾಗೂ ಗದ್ದೆಗಳು ಕೃಷಿ ಮಾಡದೆ ಪಾಳುಬಿಟ್ಟಿದ್ದು, ಲಕ್ಷಾಂತರ ಎಕರೆ ಕೃಷಿ ಯೋಗ್ಯ ಭೂಮಿಗಳು ಇಂದು ಮನೆ ನಿವೇಶನಗಳಾಗಿ ಪರಿವರ್ತನೆಗೊಂಡಿವೆ. ಇವುಗಳನ್ನು ಬಿಟ್ಟು ಜಿಲ್ಲೆಯಲ್ಲಿ ಸಮೀಕ್ಷೆಗೆ ಆದೇಶ ಮಾಡಿ ಆಹಾರ ಭದ್ರತೆ ಕಾನೂನನ್ನು ಕೊಡಗಿಗೆ ಮಾತ್ರ ಸೀಮಿತ ಮಾಡುವ ಮೂಲಕ ಸಂಘರ್ಷಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿಯ ಸದಸ್ಯ ಸಿ.ಎಸ್. ಸೂರಜ್ ತಮ್ಮಯ್ಯ ಮಾತನಾಡಿ, ಹೊಲ, ಗದ್ದೆಗಳು ಪಾಳುಬೀಳಲು ಇಂದು ಕೃಷಿಕರು ಅನುಭವಿಸುತ್ತಿರುವ ಕಷ್ಟ, ನಷ್ಟಗಳೇ ಕಾರಣವೆಂದು ಅಭಿಪ್ರಾಯಪಟ್ಟರು.

ಕೃಷಿ ಕ್ಷೇತ್ರ, ಮಳೆ ನೀರು ಅಥವಾ ನಾಲೆಯಿಂದ ನಿಗದಿತ ಸಮಯದಲ್ಲಿ ನೀರು ಸಿಗದೆ ಇರುವದು, ಲಾಭದಾಯಕ ವೃತ್ತಿ ಅಲ್ಲದಿರುವದರಿಂದ ಕೃಷಿಕರ ಮಕ್ಕಳು ಕೃಷಿಯನ್ನು ಒಂದು ವೃತ್ತಿಯಾಗಿ ಅವಲಂಭಿಸದೇ ಇರುವದು, ಬಾಲ ಕಾರ್ಮಿಕ ಕಾನೂನುಗಳು, ರೈತರಿಗೆ ಕನಿಷ್ಟ ಎಕರೆಗೆ ಹತ್ತು ಸಾವಿರ ರೂ. ಸಹಾಯಧನ ನೀಡದಿರುವದು, ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿ, ಕೃಷಿ ಇಲಾಖೆ ರೈತರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿರುವದು, ಮಳೆಯ ಅಭಾವ, ಹವಾಗುಣ ವೈಪರೀತ್ಯ ಹೀಗೆ ಅನೇಕ ಕಾರಣಗಳು ರೈತರ ಸಂಕಷ್ಟಕ್ಕೆ ಕಾರಣವಾಗಿದೆ ಎಂದರು. ಕೊಡಗಿನಲ್ಲಿ ಕೃಷಿ ಭೂಮಿ ಪಾಳುಬಿದ್ದಿದೆ ಎಂದು ಅಭಿಪ್ರಾಯಪಟ್ಟ ಸಿ.ಎಸ್. ಸೂರಜ್ ತಮ್ಮಯ್ಯ, ಕೃಷಿ ವಸ್ತುಗಳಿಗೆ ನೇರವಾಗಿ ರೈತರ ಖಾತೆಗೆ ಹಣ ಜಮಾವಣೆ ಮಾಡುವಂತಾಗಬೇಕು ಎಂದು ಒತ್ತಾಯಿಸಿದರು.

ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಹೊರಡಿಸಿರುವ ಆದೇಶವನ್ನು ಮುಖ್ಯಮಂತ್ರಿಗಳು ತಕ್ಷಣ ವಾಪಾಸ್ಸು ಪಡೆಯಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪೂಣಚ್ಚ ಉಪಸ್ಥಿತರಿದ್ದರು.