ಸೋಮವಾರಪೇಟೆ, ಆ. 18: ರಾಜ್ಯ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‍ಗಳನ್ನು ನೀಡಿದ್ದಾರೆ. ಅದರಂತೆ 2017-18ನೇ ಸಾಲಿನಲ್ಲೂ ರೂ. 50 ಕೋಟಿ ಅನುದಾನ ನೀಡಿದ್ದು, ಮಳೆಗಾಲ ಮುಗಿದ ನಂತರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದರು.

ಸಮೀಪದ ಹಾನಗಲ್ಲು ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಪಕ್ಷದ ವಲಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಚುನಾವಣೆಗೂ ಮುಂಚಿತವಾಗಿ ನೀಡಿದ್ದ ಭರವಸೆಗಳಲ್ಲಿ ಇದುವರೆಗೂ ಶೇ. 78 ರಷ್ಟನ್ನು ಈಡೇರಿಸಲಾಗಿದೆ. ಪ್ರತಿವರ್ಷ ರೂ. 50 ಕೋಟಿ ವಿಶೇಷ ಪ್ಯಾಕೇಜ್ ಅನುದಾನ ಒದಗಿಸಿದ್ದು, ಈ ವರ್ಷವೂ ಒದಗಿಸಿರುವ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಮಳೆಗಾಲ ಮುಗಿದ ತಕ್ಷಣ ಕಾಮಗಾರಿಗಳು ಪ್ರಾರಂಭಗೊಳ್ಳಲಿದ್ದು, ಎರಡು ತಿಂಗಳೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣ ಗೊಳಿಸಲು ಕ್ರಮ ವಹಿಸಲಾಗುವದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಲವಷ್ಟು ಮಂದಿ ವಿವಿಧ ಪಕ್ಷಗಳ ಕಾರ್ಯ ಕರ್ತರು ಕಾಂಗ್ರೆಸ್ ಸೇರ್ಪಡೆ ಗೊಳ್ಳುತ್ತಿದ್ದಾರೆ. ಸೋಮವಾರಪೇಟೆ ಬ್ಲಾಕ್ ವ್ಯಾಪ್ತಿಯಲ್ಲಿ ವಲಯ, ಬೂತ್ ಸಮಿತಿಗಳ ರಚನೆ ಮಾಡಲಾಗುತ್ತಿದೆ ಎಂದರು. ಯುವ ಕಾಂಗ್ರೆಸ್ ಕ್ಷೇತ್ರ ಅಧ್ಯಕ್ಷ ಮಿಥುನ್ ಮಾತನಾಡಿ, ಕಳೆದ 2 ವರ್ಷಗಳಲ್ಲಿ ಹಾನಗಲ್ಲು ಗ್ರಾಮ ಪಂಚಾಯಿತಿಗೆ ರಾಜ್ಯ ಸರ್ಕಾರದಿಂದ ರೂ. 92 ಲಕ್ಷ ಅನುದಾನ ಬಂದಿದ್ದು, ರೂ. 45 ಲಕ್ಷದ ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರಲ್ಲದೇ, ಕಳೆದ 20 ವರ್ಷಗಳಿಂದ ಶಾಸಕರು ಯಾವದೇ ಅನುದಾನ ಕೊಟ್ಟಿಲ್ಲ ಎಂದು ಆರೋಪಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಯಾಕೂಬ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಪ.ಪಂ. ಸದಸ್ಯೆ ಶೀಲಾ ಡಿಸೋಜ, ಕಾಂಗ್ರೆಸ್ ಉಪಾಧ್ಯಕ್ಷ ನಂದಕುಮಾರ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಸುರೇಶ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿ.ಎ. ಲಾರೆನ್ಸ್, ಗ್ರಾ.ಪಂ. ಸದಸ್ಯ ರಮೇಶ್, ಪ್ರಮುಖರಾದ ರಾಮಕೃಷ್ಣ, ಬಸವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಭಾರತೀಯ ಜನತಾ ಪಾರ್ಟಿ ಸೇರಿದಂತೆ ಇತರ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.