ಮಡಿಕೇರಿ, ಜು. 18: ವಿಶ್ವದಲ್ಲಿ ಅತ್ಯಂತ ಗೌರವಾನ್ವಿತ ವೃತ್ತಿಯೆಂಬ ಹೆಗ್ಗಳಿಕೆ ಇರುವ, ಶಿಕ್ಷಕ ವೃತ್ತಿಯೆಡೆಗೆ ಇಂದು ಯುವ ಸಮೂಹ ಬೆನ್ನು ತಿರುಗಿಸುತ್ತಿರುವ ಪರಿಣಾಮ; ಶಿಕ್ಷಕ ತರಬೇತಿ ಕೇಂದ್ರಗಳು ಬಾಗಿಲು ಮುಚ್ಚುವ ಹಂತದಲ್ಲಿದ್ದು, ಇದಕ್ಕೆ ಸರಕಾರಗಳು ಆಗಿಂದಾಗ್ಗೆ ಬದಲಾಯಿಸುತ್ತಿರುವ ಶಿಕ್ಷಣ ನೀತಿ ಕಾರಣವೆಂದು ಆರೋಪವಿದೆ.

ಪ್ರಾಥಮಿಕ ಹಂತದಿಂದ ಪ್ರೌಢ ಶಿಕ್ಷಣ ಅಥವಾ ದ್ವಿತೀಯ ಪಿಯುಸಿಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಇತ್ತೀಚಿನ ವರ್ಷಗಳ ತನಕ ಶಿಕ್ಷಕ ತರಬೇತಿಯೊಂದಿಗೆ ಬಿಎಡ್ ಅಥವಾ ಡಿಎಡ್ ಹೊಂದಿ ಶಾಲೆಗಳಲ್ಲಿ ಅಧ್ಯಾಪಕ ವೃತ್ತಿ ಕಂಡುಕೊಳ್ಳುತ್ತಿದ್ದರು.

ಆದರೆ ಸರಕಾರದ ಶಿಕ್ಷಣ ನೀತಿಯಿಂದಾಗಿ ಶಿಕ್ಷಕ ತರಬೇತಿಗೆ ಸೇರ್ಪಡೆಗೊಳ್ಳುವ ಅಭ್ಯರ್ಥಿಗಳು ಶೇ. 50 ರಿಂದ 60 ರಷ್ಟು ಕಡ್ಡಾಯವಾಗಿ ಎಲ್ಲ ವಿಷಯಗಳಲ್ಲಿ ಅಂಕಗಳಿಸಬೇಕೆಂಬ ನಿಯಮ ಹಾಗೂ ಪರಿಶಿಷ್ಟ ಜಾತಿ, ಪಂಗಡಕ್ಕೆ ಶೇ. 45 ಗಳಿಕೆಯ ಮಾನದಂಡದಿಂದ ವಿದ್ಯಾರ್ಥಿಗಳು ತರಬೇತಿಗೆ ಹಿಂದೇಟು ಹಾಕತೊಡಗಿದ್ದಾರೆ.

ಇದರೊಂದಿಗೆ ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪದವಿಯೊಂದಿಗೆ ಶಿಕ್ಷಕರ ತರಬೇತಿಗೆ ಮಾನದಂಡ ವಿಧಿಸಿರುವದು ಮತ್ತು ನಿರ್ದಿಷ್ಟ ವಿಷಯಗಳು ಬದಲಿಗೆ ಎಲ್ಲ ಪಠ್ಯಗಳನ್ನು ಏಕಕಾಲಕ್ಕೆ ಕಲಿಯಬೇಕೆಂಬ ಒತ್ತಡದಿಂದಾಗಿ ತರಬೇತಿ ಕೇಂದ್ರಗಳಲ್ಲಿ ಶಿಕ್ಷಣಾರ್ಥಿಗಳು ಪ್ರವೇಶ ಪಡೆಯುತ್ತಿಲ್ಲವೆಂದು ತಿಳಿದು ಬಂದಿದೆ.

ಮುಳುವಾದ ನೀತಿ: ಈ ದಿಸೆಯಲ್ಲಿ ಮಾಹಿತಿ ಕಲೆಹಾಕಿದಾಗ ತಿಳಿದು ಬಂದ ಅಂಶವೆಂದರೆ, ಸರಕಾರಗಳು ವರ್ಷದಿಂದ ವರ್ಷಕ್ಕೆ ಪಠ್ಯ ಕ್ರಮಗಳನ್ನು ಬದಲಾಯಿಸುತ್ತಿರುವದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರುಗಳು ಕಲಿಕೆಗೂ ಮುಳುವಾಗುವಂತಾಗಿದೆ.

ಶಿಕ್ಷಕ ವೃತ್ತಿಗಾಗಿ ತರಬೇತಿ ಹೊಂದಲು ಅಪೇಕ್ಷಿಸುವ ಅಭ್ಯರ್ಥಿಗಳು ತಾವು ಶಾಲಾ-ಕಾಲೇಜುಗಳಲ್ಲಿ ಕಲಿಯುವ ಅಥವಾ ಪರೀಕ್ಷೆ ಬರೆದು ತೇರ್ಗಡೆ ಹೊಂದುವ ವಿಷಯಗಳು ಅವರುಗಳು ತರಬೇತಿ ಪಡೆಯುವಷ್ಟರಲ್ಲಿ ಬದಲಾವಣೆಗೊಂಡಿರುತ್ತದೆ.

ಇನ್ನು ವರ್ಷಪೂರ್ತಿ ತಾವು ಕಲಿತ ವಿದ್ಯೆಯೊಂದಿಗೆ ಶಿಕ್ಷಕ ವೃತ್ತಿ ತರಬೇತಿ ಮುಗಿಸಿ ಬರುವಷ್ಟರಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಬೋಧಿಸಲು ಪಠ್ಯಕ್ರಮ ಮಾರ್ಪಾಡುಗೊಂಡಿರುತ್ತವೆ ಎನ್ನುವ ಪ್ರಸಂಗಗಳೇ ಹೆಚ್ಚು.

ಉದಾಹರಣೆಗೆ 2002ನೇ ಇಸವಿಯಿಂದ 2007ನೇ ಇಸವಿಯ ಅವಧಿಯಲ್ಲಿ ರಾಜ್ಯ ಸರಕಾರ 5 ಬಾರಿ (ವರ್ಷದಿಂದ ವರ್ಷಕ್ಕೆ) ಮಕ್ಕಳ ಪಠ್ಯ ಪುಸ್ತಕಗಳನ್ನು ತಿದ್ದುಪಡಿಗೊಳಿಸಿರುವದು ಬೆಳಕಿಗೆ ಬಂದಿದೆ. ಇಲ್ಲಿ ಯಾವದೇ ಮೌಲ್ಯಗಳು ಅಥವಾ ನೀತಿಗಳು ಮಾನದಂಡವಿರದೆ, ಯಾರೋ ಸಾಹಿತಿಗಳು ಹಾಗೂ ವಿಚಾರವಾದಿಗಳು ತಮ್ಮ ಮೂಗಿನ ನೇರಕ್ಕೆ ಮತ್ತು ಆಳುವ ಮಂದಿಯನ್ನು ಖುಷಿಪಡಿಸಲು ಪಠ್ಯಕ್ರಮ ಸಿದ್ಧಪಡಿಸುತ್ತಾರೆ ಎಂಬ ದೂಷಣೆ ಇದೆ.

ಕೂಡಿಗೆಗೂ ಅಭ್ಯರ್ಥಿಗಳಿಲ್ಲ: ಒಂದೊಮ್ಮೆ ಕೂಡಿಗೆಯಲ್ಲಿ ರಾಜ್ಯಮಟ್ಟದ ಪ್ರತಿಷ್ಠಿತ ಶಿಕ್ಷಕರ ತರಬೇತಿ ಕೇಂದ್ರದೊಂದಿಗೆ ರಾಜ್ಯದೆಲ್ಲೆಡೆಯಿಂದ ಪ್ರತಿವರ್ಷ 200ಕ್ಕೂ ಅಧಿಕ ಅಭ್ಯರ್ಥಿಗಳು ತರಬೇತಿಗೊಳ್ಳುತ್ತಿದ್ದರು. ಬೇರೆ ಬೇರೆ ಶಾಲೆಗಳಿಗೆ ನಿಯೋಜನೆಗೊಂಡು ಮಕ್ಕಳಿಗೆ ಉತ್ತಮ ವಿದ್ಯೆ ಕಲಿಸುತ್ತಿದ್ದರು. ಇಂದು ಈ ಸಂಸ್ಥೆಗೂ ಅಭ್ಯರ್ಥಿಗಳು ಲಭಿಸುತ್ತಿಲ್ಲ. ಬದಲಾಗಿ ಈ ಶಿಕ್ಷಕರ ತರಬೇತಿ ಕೇಂದ್ರವನ್ನು ಚಿಕ್ಕಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ವಸತಿಗೆ ಬಳಸಿಕೊಳ್ಳುತ್ತಿರುವದು ಕಂಡುಬಂದಿದೆ.

ಮಡಿಕೇರಿ ಸರಸ್ವತಿ ಶಿಕ್ಷಕ ತರಬೇತಿ ಕೇಂದ್ರ, ವೀರಾಜಪೇಟೆಯ ಸರ್ವೋದಯ ವಿದ್ಯಾಸಂಸ್ಥೆ, ಪೊನ್ನಂಪೇಟೆಯ ಸಾಯಿ ಶಂಕರ ಸಂಸ್ಥೆ ಸೇರಿದಂತೆ ಎಲ್ಲೆಡೆಯಲ್ಲಿ ಅಭ್ಯರ್ಥಿಗಳಿಲ್ಲದೆ ಹಿರಿಯರ ದೂರದೃಷ್ಟಿಯ ಈ ಸಂಸ್ಥೆಗಳು ಬಾಗಿಲು ಮುಚ್ಚುವ ಹಂತ ತಲಪಿವೆ.

ವರ್ಷದಿಂದ ವರ್ಷಕ್ಕೆ ಮೇಲಿನ ಸಂಸ್ಥೆಗಳಿಂದ ಅಭ್ಯರ್ಥಿಗಳು ತರಬೇತಿ ಪಡೆದು ವಿದ್ಯಾರ್ಥಿ ಸಮೂಹಕ್ಕೆ ಬೋಧಿಸುವ ಉತ್ತಮ ಶಿಕ್ಷಕರಾಗಿ ರೂಪುಗೊಳ್ಳುತ್ತಿದ್ದ ಸನ್ನಿವೇಶ ಬದಲಾಗಿ, ಕೈಬೆರಳೆಣಿಕೆಯಷ್ಟು ಮಂದಿಯಷ್ಟೇ ತರಬೇತಿಗೆ ದಾಖಲಾಗುತ್ತಿದ್ದಾರೆ.

ಈ ದಿಸೆಯಲ್ಲಿ ಸರಕಾರ ಹಾಗೂ ಶಿಕ್ಷಣ ಇಲಾಖೆಯು ಗಂಭೀರ ಚಿಂತನೆ ನಡೆಸಬೇಕಿದೆ. ಪ್ರಾಥಮಿಕ ಹಂತದಿಂದಲೇ ರಾಜ್ಯದಲ್ಲಿ ನೂರಾರು ಸರಕಾರಿ ಶಿಕ್ಷಣ ಸಂಸ್ಥೆಗಳು ಕೂಡ ಬಾಗಿಲು ಮುಚ್ಚಿಕೊಳ್ಳುತ್ತಿರುವದು ಇದೇ ಕಾರಣದಿಂದ ಎಂಬದು ಶಿಕ್ಷಕರ ತರಬೇತಿ ಸಂಸ್ಥೆಗಳ ಮುಖ್ಯಸ್ಥರ ಅಭಿಪ್ರಾಯ.

ಕಾರಣ ಪದವಿಯೊಂದಿಗೆ ಉನ್ನತ ಶಿಕ್ಷಣ ಪಡೆದವರಾರು ಪ್ರಾಥಮಿಕ ಶಾಲೆಗಳಿಗೆ ಬೋಧಿಸಲು ಬರುತ್ತಿಲ್ಲ; ಸರಕಾರದ ದ್ವಂದ್ವ ನೀತಿ ಹಾಗೂ ನಿರಂತರ ಪಠ್ಯಕ್ರಮಗಳ ಬದಲಾವಣೆಯಿಂದ ಸಾಮಾನ್ಯ ಹಂತದಲ್ಲಿ ಬೋಧಿಸುವ ಕ್ಷಮತೆಯನ್ನು ರೂಢಿಸಿಕೊಳ್ಳಲು ಅವಕಾಶವೇ ಇಲ್ಲದಂತಾಗಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗೊಂದಲಕ್ಕೆ ಪರಿಹಾರ ಹುಡುಕುವಲ್ಲಿ ಸರಕಾರ ಕಾಳಜಿಯೊಂದಿಗೆ ಪ್ರಾಥಮಿಕ ಶಿಕ್ಷಣದಿಂದಲೇ ವಿದ್ಯಾರ್ಥಿಗಳಿಗೆ ಭದ್ರಬುನಾದಿ ಹಾಕುವತ್ತ ಸಮಗ್ರ ಬದಲಾವಣೆ ಕಲ್ಪಿಸಬೇಕಿದೆ.

-ಶ್ರೀಸುತ