ಕೂಡಿಗೆ, ಆ. 18: ಶಿರಂಗಾಲ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಉದ್ಘಾಟನೆಯನ್ನು ಅರಕಲಗೂಡಿನ ಬಿ.ಜಿ.ಎಸ್. ಪದವಿಪೂರ್ವ ಕಾಲೇಜಿನ ಹೆಚ್.ಬಿ. ಮಹೇಶ್ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಸಾಧಕರಿದ್ದಾರೆ. ಅವರನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜ್ಞಾನವಂತರಾಗಿ ಬೆಳೆಯಬೇಕು ಎಂದರು. ಭಾರತದ ಪುರಾತನ ಸಾಹಿತ್ಯದ ಮಹತ್ವವನ್ನು ಹಾಗೂ ಅದರೊಂದಿಗೆ ಹೊಂದಿ ಕೊಂಡಿರುವ ವಿಜ್ಞಾನದ ಹಿನ್ನೆಲೆಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವದರ ಮೂಲಕ ಪ್ರಗತಿಯತ್ತ ಮುನ್ನುಗ್ಗಲು ಪ್ರಯತ್ನಿಸಬೇಕೆಂದರು.

ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆಯನ್ನು ಬಾಳೆಲೆ ವಿಜಯಲಕ್ಷ್ಮೀ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಕೆ.ಜೆ. ಅಶ್ವಿನ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಉದ್ಧಾರದ ಕನಸು ಕಂಡವರು ಮಹಾತ್ಮ ಗಾಂಧೀಜಿ. ಅವರ ಕನಸನ್ನು ಈಡೇರಿಸಲು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆ ಸಹಕಾರಿಯಾಗುತ್ತವೆ ಎಂದರು.

ಕಾಲೇಜಿನ ಉಪನ್ಯಾಸಕ ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಎಂ.ಆರ್. ಸುರೇಶ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಾ.ಪಂ. ಸದಸ್ಯ ಜಯಣ್ಣ, ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ರಮೇಶ್, ಶಿರಂಗಾಲ ದೇವತಾ ಸಮಿತಿಯ ಕಾರ್ಯದರ್ಶಿ ಸಿ.ಎನ್. ಲೋಕೇಶ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎನ್.ಬಿ. ಮಹೇಶ್, ಸದಸ್ಯ ಎನ್.ಎನ್. ಶ್ರೀಧರ್, ಹಿರಿಯ ಸಹ ಶಿಕ್ಷಕ ಸೋಮಯ್ಯ, ಎನ್.ಎಸ್.ಎಸ್. ಅಧಿಕಾರಿ ಎಸ್.ಆರ್. ವೆಂಕಟೇಶ್ ಇದ್ದರು. ಕಾರ್ಯಕ್ರಮವನ್ನು ಕೆ.ಎನ್. ಪಲ್ಲವಿ, ಎಸ್. ಸುಚಿತ್ರ, ಕಾವ್ಯಶ್ರೀ, ಹೆಚ್.ಆರ್. ಶಿವಕುಮಾರ್ ನಿರ್ವಹಿಸಿದರು.