ಸೋಮವಾರಪೇಟೆ, ಆ. 18: ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕಳೆದ ಒಂದು ತಿಂಗಳಿನಿಂದ ಆಯೋಜನೆಗೊಂಡಿದ್ದ ದುರ್ಗಾ ದೀಪ ನಮಸ್ಕಾರ ಪೂಜೆಯು ನೂರಾರು ಭಕ್ತಾದಿಗಳ ಸಮ್ಮುಖ ದೊಂದಿಗೆ ಸಂಪನ್ನಗೊಂಡಿತ್ತು.ಕೇರಳದ ಕಾಳೇಘಾಟ್ ಮನೆತನದ ಬ್ರಹ್ಮಶ್ರೀ ನಾರಾಯಣ ತಂತ್ರಿಗಳಿಂದ ಆಷಾಢ ಮಾಸದ ಕೊನೆಯ ದಿನದಂದು ದುರ್ಗಾ ಹೋಮದೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿ ಪ್ರಸಕ್ತ ವರ್ಷದ ದುರ್ಗಾದೀಪ ನಮಸ್ಕಾರ ಪೂಜೆಗೆ ತೆರೆಬಿದ್ದಿತು. ಕಳೆದ ಜುಲೈ 16 ರಂದು ಕರ್ಕಾಟಕ ಮಾಸದಲ್ಲಿ ಪ್ರಾರಂಭಗೊಂಡ ದುರ್ಗಾದೀಪ ನಮಸ್ಕಾರ ಪೂಜೆಯು ಭುವನೇಶ್ವರಿ ಸನ್ನಿಧಿಯಲ್ಲಿ ಒಂದು ತಿಂಗಳ ಕಾಲ ನಡೆಯಿತು. ಕರ್ಕಾಟಕ ಮಾಸದಲ್ಲಿ ಆರಂಭವಾಗುವ ಅಮವಾಸ್ಯೆಯ ದಿನದಂದು ಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ಸನ್ನಿಧಿಯಲ್ಲಿ ಶತ್ರುಸಂಹಾರ ಪೂಜೆ, ನಾಗನ ಸನ್ನಿಧಿಯಲ್ಲಿ ವಿಶೇಷವಾಗಿ ನಾಗರಪಂಚಮಿ ಪೂಜೆ, ವರಮಹಾಲಕ್ಷ್ಮಿ ಪೂಜೆ ಹಾಗೂ ಕೊನೆಯ ಶನಿವಾರದಂದು ಅಯ್ಯಪ್ಪನ ಸನ್ನಿಧಿಯಲ್ಲಿ ನಿರಾಂಜನ ಸೇವೆಯ ಪೂಜೆಯನ್ನು ವಿಶೇಷವಾಗಿ ಆಚರಿಸಲಾಯಿತು.

ಆಷಾಢ ಮಾಸದ ಕೊನೆಯ ದಿನವಾದ ಆಗಸ್ಟ್ 15 ರಂದು ಕೇರಳದ ಕಾಳೇಘಾಟಿನ ಬ್ರಹ್ಮಶ್ರೀ ನಾರಾಯಣ ತಂತ್ರಿಗಳಿಂದ ಭಗವತಿ ಸೇವೆ ಹಾಗೂ ಗಣಪತಿ ಹೋಮ ಹಾಗೂ ದುರ್ಗಾಹೋಮದೊಂದಿಗೆ ಸಮಾಪ್ತಿಯಾಯಿತು. ಆಷಾಢ ಮಾಸದ ಕೊನೆಯ ದಿನ ಪೂಜೆಗೆ ಅಯ್ಯಪ್ಪ ಸ್ವಾಮಿ, ಗಣಪತಿ, ಭುವನೇಶ್ವರಿ ಹಾಗೂ ನಾಗನಿಗೆ ಹೂವಿನ ಅಲಂಕಾರ ಮಾಡಿದ್ದು ವಿಶೇಷವಾಗಿತ್ತು.

ದುರ್ಗಾಹೋಮ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಅರ್ಚಕರಾದ ಜಗದೀಶ್ ಉಡುಪ, ರಾಘವೇಂದ್ರ ಭಟ್, ಸಿದ್ಧಲಿಂಗಪುರದ ಮಂಜುನಾಥೇಶ್ವರ ದೇವಾಲಯದ ಅವಧೂತರಾದ ರಾಜೇಶ್‍ನಾಥ್ ಗುರೂಜಿ, ನಾಗರಾಜ್‍ಮಯ್ಯ, ಶ್ರೀರಂಗಾಚಾರಿ, ವೇದವ್ಯಾಸಭಟ್, ವಾದಿರಾಜ್‍ಭಟ್, ಚಂದ್ರಹಾಸ್‍ಭಟ್, ಪ್ರಸಾದ್‍ಭಟ್, ಸರ್ವೇಶ್‍ಭಟ್ ಜಯಂತ್ ಭಟ್ ಅವರುಗಳು ಪಾಲ್ಗೊಂಡಿದ್ದರು.

ಒಂದು ತಿಂಗಳ ಕಾಲ ನಡೆದ ದುರ್ಗಾದೀಪ ನಮಸ್ಕಾರ ಪೂಜೆಯ ಸಂದರ್ಭ ಪ್ರತಿನಿತ್ಯ ಪೂಜಾ ಕೈಂಕರ್ಯಗಳೊಂದಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷರಾದ ಎನ್.ಡಿ. ವಿನೋದ್, ಗೌರವಾಧ್ಯಕ್ಷ ಎನ್.ಜಿ. ಜನಾರ್ಧನ್, ಕಾರ್ಯದರ್ಶಿ ಎನ್.ಟಿ. ಪ್ರಸನ್ನ, ಉಪಾಧ್ಯಕ್ಷ ವೇಲಾಯುಧನ್ ಹಾಗೂ ನಿರ್ದೇಶಕರುಗಳ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.