ಸಿದ್ದಾಪುರ, ಆ. 18: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತಿದ್ದ 9 ಗೋವುಗಳನ್ನು ಸಿದ್ದಾಪುರ ಪೋಲಿಸರು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.ನೆಲ್ಯಹುದಿಕೇರಿ ಪಟ್ಟಣ ಸಮೀಪದಲ್ಲಿ ಮಾಂಸ ಮಾಡಿ ಮಾರಾಟ ಮಾಡಲು ಅಕ್ರಮವಾಗಿ ಗೋವುಗಳನ್ನು ಸಾಗಿಸುತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಧಾಳಿ ನಡೆಸಿದ ಸಿದ್ದಾಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 9 ಗೋವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ವಶಪಡಿಸಿಕೊಂಡಿರುವ ಗೋವುಗಳನ್ನು ಮೈಸೂರಿನ ಗೋ ಶಾಲೆಗೆ ವಾಹನದ ಮುಖಾಂತರ ಬಿಡಲಾಯಿತು. ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

ಬಂದೊಬಸ್ತ್

ಗೋ ಸಾಗಾಟದ ವಿಚಾರದಲ್ಲಿ ಗ್ರಾಮಸ್ಥರ ನಡುವೆ ಮಧ್ಯರಾತ್ರಿ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಕೆಲವು ಸಂಘಟನೆಯ ಪ್ರಮುಖರು ಕೆಲವರ ವಿರುದ್ದ ಆರೋಪಿಸಿ ಸಿದ್ದಾಪುರ ಪೋಲಿಸ್ ಠಾಣೆಗೆ ಪುಕಾರು ನೀಡಿದ ಮೇರೆಗೆ ಸೂಕ್ಷ್ಮ ಪ್ರದೇಶವಾದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೆಲ್ಯಹುದಿಕೇರಿಯಲ್ಲಿ ಮಡಿಕೇರಿ ವಿಭಾಗದ ಡಿ.ವೈ.ಎಸ್.ಪಿ ಸುಂದರ್ ರಾಜ್ ನೇತೃತ್ವದಲ್ಲಿ 2 ಡಿ.ಎ.ಆರ್. ತುಕಡಿ ಹಾಗೂ ಸ್ಥಳೀಯ ಪೊಲೀಸರು ಸೇರಿದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಸಂದರ್ಭ ಮಡಿಕೇರಿ ವೃತ್ತ ನೀರಿಕ್ಷಕ ಮೇದಪ್ಪ, ಠಾಣಾಧಿಕಾರಿ ಸುಬ್ರಹ್ಮಣ್ಯ ಹಾಜರಿದ್ದರು.

ಹಲ್ಲೆಗೆ ಯತ್ನ

ನೆಲ್ಯಹುದಿಕೇರಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತಿದ್ದಾರೆ ಎಂಬ ಮಾಹಿತಿ ತಿಳಿದ ಹಿನೆÀ್ನಲೆಯಲ್ಲಿ ಸ್ಥಳಕ್ಕೆ ವರದಿ ಮಾಡಲೆಂದು ತೆರಳಿದ ಸಿದ್ದಾಪುರದ ಈರ್ವರು ವರದಿಗಾರರ ವಿರುದ್ದ ನೆಲ್ಯಹುದಿಕೇರಿ ನಿವಾಸಿಗಳಾದ ಮಹಮ್ಮದಾಲಿ ಮತ್ತು ಮಹಮ್ಮದ್ ಎಂಬವರು ಛಾಯಾಚಿತ್ರ ತೆಗೆಯದಂತೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದರು. ಈ ಘಟನೆಯನ್ನು ಸಿದ್ದಾಪುರ ನಗರ ಪತ್ರಕರ್ತರ ಸಂಘ ಖಂಡಿಸಿದೆ.