ಮಡಿಕೇರಿ, ಆ. 18: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದು, ಸಚಿವರುಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಅಂತಹ ಸಚಿವರುಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಇತ್ತೀಚೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮೇಲೆ ನಡೆದ ಐಟಿ ಧಾಳಿ ಸಂದರ್ಭ ಸುಮಾರು 20 ಕೋಟಿಗಿಂತ ಅಧಿಕ ಹಣ ಹಾಗೂ ಸಾವಿರಾರು ಕೋಟಿ ಆಸ್ತಿ ಲಭ್ಯವಾಗಿದೆ. ಇದು ಭ್ರಷ್ಟಾಚಾರದಿಂದ ಕೂಡಿಟ್ಟ ಹಣವಾಗಿದ್ದು, ನೈತಿಕ ಹೊಣೆಹೊತ್ತು ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡುವ ಕೆಲಸ ಮಾಡಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ
(ಮೊದಲ ಪುಟದಿಂದ) ಕೂಡ ರಾಜೀನಾಮೆ ನೀಡಬೇಕೆಂದು ಸಚಿವರಿಗೆ ಹೇಳಬೇಕಿತ್ತು. ಇಂತಹ ಭ್ರಷ್ಟ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಎಲ್ಲ ಭರವಸೆಗಳನ್ನು ವಿವಿಧ ಭಾಗ್ಯಗಳ ಮೂಲಕ ಈಡೇರಿಸಿದೆ ಎಂದು ಹೇಳುತ್ತಿದೆ. ಆದರೆ ಈ ಭಾಗ್ಯಗಳೊಂದಿಗೆ ಭ್ರಷ್ಟಚಾರ ಭಾಗ್ಯವನ್ನೂ ರಾಜ್ಯಕ್ಕೆ ನೀಡಲಾಗಿದೆ. ಸರ್ಕಾರದ ಭ್ರಷ್ಟಾಚಾರವನ್ನು ನೋಡಿ ಜನಾರ್ದನ ಪೂಜಾರಿಯಂತಹ ಕಾಂಗ್ರೆಸ್ ನಾಯಕರೇ ಇದರ ವಿರುದ್ಧ ದ್ವನಿ ಎತ್ತುತ್ತಿದ್ದಾರೆ. ಆದ್ದರಿಂದ ನೈತಿಕತೆ ಬಗ್ಗೆ ಮಾತನಾಡುವ ಸಿದ್ಧರಾಮಯ್ಯ ಅವರು, ಆ ಪದಕ್ಕೆ ಅರ್ಥ ಕೊಡಬೇಕೆನ್ನುವ ಭಾವನೆಗಳಿದ್ದರೆ ಭ್ರಷ್ಟಚಾರದ ಆರೋಪ ಇರುವ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಲೋಕಾಯುಕ್ತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಅದನ್ನು ಬಿಟ್ಟು ಎಸಿಬಿಯನ್ನು ಸರ್ಕಾರ ಜಾರಿಗೆ ತಂದಿದೆ. ಇದೀಗ ಎಸಿಬಿಯ ದುರುಪಯೋಗವನ್ನು ಸರ್ಕಾರ ಮಾಡುತ್ತಿದ್ದು, ಇದರಿಂದ ಬಿಜೆಪಿಯ ನೈತಿಕ ಬಲ ಕುಗ್ಗಿಸುವ ಕೆಲಸ ನಡೆಯುವದಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರ ಒಂದು ರೀತಿಯ ಭಂಡ ಸರ್ಕಾರವಾಗಿದ್ದು, ಸಚಿವ ಡಿ.ಕೆ. ಶಿವಕುಮಾರ್ ಪ್ರಾಮಾಣಿಕರಾಗಿದ್ದಲ್ಲಿ ಸೂಕ್ತ ದಾಖಲೆ ಬಹಿರಂಗಪಡಿಸಲಿ. ಈ ವಿಚಾರದಲ್ಲಿ ಕಾಂಗ್ರೆಸ್ ಯಾಕೆ ಹೋರಾಟ ಮಾಡಬೇಕು ಎಂದು ಪ್ರಶ್ನಿಸಿದರಲ್ಲದೆ, ಸರ್ಕಾರದ ವೈಫಲ್ಯಗಳಿಂದ ತಾಯಿ ಕಾವೇರಿ ಮುನಿದಿದ್ದು, ಪ್ರತಿಬಾರಿ ತುಂಬುತ್ತಿದ್ದ ಕೆಆರ್‍ಎಸ್ ಸಿದ್ದರಾಮಯ್ಯ ಆಡಳಿತದಲ್ಲಿ ತುಂಬುತ್ತಿಲ್ಲ. ಸಿದ್ದರಾಮಯ್ಯ ತಮ್ಮ ಪಾಪವನ್ನು ತೊಳೆಯಬೇಕಾದರೆ ತಲಕಾವೇರಿಗೆ ಬಂದು ಸ್ನಾನ ಮಾಡಿ ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ತಕ್ಷಣ ವಜಾ ಮಾಡಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಲಾಯಿತು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ, ಜಿಲ್ಲಾಧ್ಯಕ್ಷ ಭಾರತೀಶ್, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ, ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ, ಗೀತಾ ಪವಿತ್ರ, ತಾಲೂಕು ಅಧ್ಯಕ್ಷ ತಳೂರು ಕಿಶೋರ್, ಬಲ್ಲಾರಂಡ ಮಣಿ ಉತ್ತಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಚಿವರಿಗೆ ಬೋಪಯ್ಯ ತಿರುಗೇಟು!
ಜಿ.ಪಂ. ಅಧ್ಯಕ್ಷರ ಕಡೆಗಣನೆ ವಿಚಾರದಲ್ಲಿ ವಿಧಾನಸಭಾಧ್ಯಕ್ಷರಾಗಿದ್ದ ಕೆ.ಜಿ. ಬೋಪಯ್ಯ ಜಾತಿಯ ಬಗ್ಗೆ ನೀಡಿರುವ ಹೇಳಿಕೆ ಅವರಿಗೆ ಶೋಭೆ ತರುವಂತದಲ್ಲ ಎಂದು ಪ್ರತಿಕ್ರಿಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿಕೆಗೆ ಶಾಸಕರು ತಿರುಗೇಟು ನೀಡಿದರು. ಹಕ್ಕುಪತ್ರ ವಿತರಣೆ ಸರ್ಕಾರಿ ಕಾರ್ಯಕ್ರಮವಾಗಿದ್ದು, ಅದು ಕಾಂಗ್ರೆಸ್‍ನ ಕಾರ್ಯಕ್ರಮವಲ್ಲ. ವಿಧಾನಸಭಾಧ್ಯಕ್ಷನಾಗಿರುವದಕ್ಕೆ ತೂಕ ತಪ್ಪಿ ಮಾತನಾಡಿಲ್ಲ. ಇಲ್ಲದಿದ್ದರೆ ಕಾಂಗ್ರೆಸ್‍ನವರಿಗಿಂತ ಕೆಟ್ಟದಾಗಿ ಮಾತನಾಡುತ್ತೇನೆ. ಸಚಿವರು ಶೋಭೆ ತರುವಂತದಲ್ಲ ಎಂದಿರುವ ಮಾತನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಹೇಳಿದರು.