ಮಡಿಕೇರಿ, ಆ. 18: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆರೆಂಟು ವರ್ಷಗಳ ಹಿಂದೆ, ರಾಜ್ಯ ಸರಕಾರದಿಂದ ಎರಡು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಮಂಜೂರಾಗಿದ್ದು, ತರಾತುರಿಯಲ್ಲಿ ಈ ಎರಡು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯೊಂದಿಗೆ ಶೈಕ್ಷಣಿಕ ಚಟುವಟಿಕೆ ಪ್ರಾರಂಭಗೊಂಡು, ವರ್ಷಗಳೂ ಉರುಳಿ ಹೋಗಿವೆ.ಒಂದು ಸರಕಾರಿ ಪ್ರಥಮ ದರ್ಜೆ ಕಾಲೇಜು, ತಾತ್ಕಾಲಿಕವಾಗಿ ಇಲ್ಲಿನ ಪ.ಪೂ. ಕಾಲೇಜು ಆವರಣದಲ್ಲಿ ಪ್ರೌಢಶಾಲಾ ವಿಭಾಗದ ಕಟ್ಟಡಗಳನ್ನು ಬಳಸಿಕೊಂಡು ಪ್ರಾರಂಭವಾಗಿದೆ. ಇನ್ನಷ್ಟು ಕೊಠಡಿಗಳನ್ನು ಪ್ರಾಥಮಿಕ ಶಾಲಾ ಕೊಠಡಿಗಳ ಬಳಕೆ ಮೂಲಕ ನಡೆಸಲಾಗುತ್ತಿದೆ. ಆ ದಿನಗಳಲ್ಲಿ ವಿಧಾನಸಭಾ ಉಪಾಧ್ಯಕ್ಷರಾಗಿದ್ದ ಹಾಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಮಾಜಿ ಮಂತ್ರಿ ಹಾಗೂ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಇವರುಗಳ ಮಧ್ಯಸ್ಥಿಕೆ ಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆರಂಭವಾಯಿತು.
ಅಲ್ಲದೆ ಇವರುಗಳ ಪ್ರಯತ್ನದಿಂದ ಈ ಕಾಲೇಜು ಕಟ್ಟಡದ ನಿರ್ಮಾಣಕ್ಕಾಗಿ ರೂ. 7 ಕೋಟಿಯಷ್ಟು ಹಣವೂ ಬಿಡುಗಡೆ ಗೊಂಡಿತ್ತು. ಆದರೆ, ಆ ದಿನಗಳಲ್ಲಿ ಸರಕಾರ
(ಮೊದಲ ಪುಟದಿಂದ) ಕಲ್ಪಿಸಿದ್ದ ಇಷ್ಟೊಂದು ಮೊತ್ತದ ಹಣ ಹಾಗೂ ಕಾಲೇಜು ಲಭಿಸಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲೇ ಇಲ್ಲ. ಪರಿಣಾಮ ಬಿಡುಗಡೆಗೊಂಡಿದ್ದ ಹಣ ಕೂಡ ಸರಕಾರಕ್ಕೆ ವಾಪಾಸಾಗಿರುವ ಸುಳಿವು ಲಭಿಸಿದೆ. ಆ ನಂತರದಲ್ಲಿ ಸರಕಾರ ಮತ್ತೆ ರೂ. 2 ಕೋಟಿಯಷ್ಟು ಹಣವನ್ನು ಈ ಕಾಲೇಜಿನ ಕಟ್ಟಡಕ್ಕಾಗಿ ಮತ್ತೆ ಬಿಡುಗಡೆ ಮಾಡಲಾಗಿದೆ.
ಹೀಗಿದ್ದೂ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಪ್ರಾಂಶುಪಾಲರ ಸಹಿತ ಉಪನ್ಯಾಸಕರು ಕಾಲೇಜು ಕಟ್ಟಡಕ್ಕಾಗಿ ನಿವೇಶನ ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ ನಗರ ಪ್ರದೇಶದಲ್ಲಿ ಸೂಕ್ತ ನಿವೇಶನ ಲಭಿಸಿಲ್ಲ. ಇಲ್ಲಿನ ಅರಣ್ಯ ಭವನ ಬಳಿ ಜಾಗ ಗುರುತಿಸಿದ್ದರೂ, ಆ ಜಾಗವನ್ನು ವಿದ್ಯಾ ಇಲಾಖೆಗೆ ನೀಡಲು ಅರಣ್ಯ ಇಲಾಖೆ ತೊಡರುಗಾಲಾಗಿದೆ. ಮಕ್ಕಂದೂರು ಬಳಿ ಒಂದೂವರೆ ಎಕರೆ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ಒಂದೂವರೆ ಎಕರೆ ಜಾಗ ಗುರುತಿಸಿದ್ದರೂ, ಕಾಲೇಜು ನಿರ್ವಹಣೆಗೆ 5 ರಿಂದ 6 ಎಕರೆ ಸ್ವಂತ ನಿವೇಶನ ಹೊರತು ವಿಶ್ವವಿದ್ಯಾನಿಲಯಗಳು ಕಾಲೇಜು ಕಟ್ಟಡಕ್ಕೆ ಅಂಗೀಕಾರ ನೀಡುತ್ತಿಲ್ಲ.
ಹೀಗಾಗಿ ರಾಜ್ಯ ಸರಕಾರದಿಂದ ಜಿಲ್ಲಾ ಕೇಂದ್ರ ಮಡಿಕೇರಿಗೆ ವರ್ಷಗಳ ಹಿಂದೆ ಮಂಜೂರಾಗಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಒಂದೆಡೆಯಾದರೆ, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕೂಡಾ ವಿವಾದದ ಸುಳಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಹಲವು ವಿಘ್ನಗಳನ್ನು ಎದುರಿಸುವಂತಾಗಿದೆ. ಸರಕಾರಿ ಪಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡದಲ್ಲಿ ಪ್ರಾರಂಭಗೊಂಡ ಪದವಿ ಕಾಲೇಜಿನ ಸಮಸ್ಯೆಯಂತೆಯೇ, ಮಹಿಳಾ ಕಾಲೇಜು ಕೂಡ ಜಿಲ್ಲಾ ಯುವ ಭವನ ಕಟ್ಟಡದಲ್ಲಿ ತಾತ್ಕಾಲಿಕ ಆರಂಭಗೊಂಡಿದ್ದು, ಇಂದು ಯುವ ಒಕ್ಕೂಟ ಈ ಕಟ್ಟಡದ ತೆರವಿಗಾಗಿ ಹೋರಾಟ ಆರಂಭಿಸಿದೆ. ಹೀಗಾಗಿ ಕಾಲೇಜು ನಿರ್ವಹಣೆಗೆ ಸಮಸ್ಯೆ ಎದುರಾಗಿದೆ.
ಈ ಎರಡು ಕಾಲೇಜುಗಳಿಗೆ ಜಿಲ್ಲಾ ಕೇಂದ್ರದಲ್ಲಿ ನಿವೇಶನ ಲಭಿಸದಿರುವ ಪರಿಣಾಮ, ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆ ಹೊರತು ಆಟದ ಮೈದಾನ ಇತ್ಯಾದಿ ಸೌಲಭ್ಯಗಳಿಲ್ಲದೆ ನಿತ್ಯ ಸಮಸ್ಯೆ ಎದುರಾಗಿದೆ. ಜನಪ್ರತಿನಿಧಿಗಳು ಹಾಗೂ ಕಾಲೇಜು ಉಪನ್ಯಾಸಕರು ಜಾಗ ಹುಡುಕಾಟದೊಂದಿಗೆ, ಪದೇ ಪದೇ ಕಂದಾಯ ಇಲಾಖೆಗೆ ಮಂಜೂರಾತಿಗಾಗಿ ಮನವಿ ಸಲ್ಲಿಸುತ್ತಿದ್ದರೂ, ಇಲಾಖಾ ಮಂದಿ ಗುರುತಿಸುವ ಜಾಗಕ್ಕೆ ಹಲವು ಕಾರಣ ಮುಂದಿಟ್ಟು ತೊಡರುಗಾಲು ಹಾಕುತ್ತಿರುವ ಆರೋಪವಿದೆ.
ಹೀಗಾಗಿ ನಗರದಲ್ಲಿ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸರಕಾರ ಪ್ರತ್ಯೇಕ ಎರಡು ಕಾಲೇಜುಗಳನ್ನು ಒದಗಿಸಿದರೂ, ನಿವೇಶನದ ಕೊರತೆಯಿಂದ ನಿತ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ನೊಂದ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಸಮೂಹ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.