ಸೋಮವಾರಪೇಟೆ,ಆ.18: ತಾಲೂಕಿನಾದ್ಯಂತ ಪೈಸಾರಿ ಜಾಗದಲ್ಲಿ ಮನೆಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಕೆಲವೊಂದು ಗ್ರಾಮಗಳಲ್ಲಿರುವ ಸಿ ಮತ್ತು ಡಿ, ಊರುಡುವೆ ಪೈಸಾರಿ ಜಾಗಗಳಿಂದ ಉಂಟಾಗಿರುವ ಗೊಂದಲ ನಿವಾರಣೆಗಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಾಲೂಕು ಕಚೇರಿಯ ಅರುಣ್‍ಕುಮಾರ್ ಮಾಹಿತಿ ನೀಡಿದರು.ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಮಾಹಿತಿ ಒದಗಿಸಿದರು.
94 ಸಿ ಅಡಿಯಲ್ಲಿ 12,331 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, 1048 ಅರ್ಜಿಗಳು ಮಂಜೂರಾತಿ ಗೊಂಡಿವೆ. ಇದರಲ್ಲಿ 337 ಮಂದಿಗೆ ಹಕ್ಕುಪತ್ರ ವಿತರಿಸ ಲಾಗಿದೆ ಎಂದರು. 94ಸಿ.ಸಿ. ಅಡಿಯಲ್ಲಿ 926 ಮಂದಿ ಅರ್ಜಿ ಸಲ್ಲಿಸಿದ್ದು, 127 ಮಂಜೂರಾತಿ ಗೊಂಡಿವೆ. ಇದರಲ್ಲಿ 77 ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಅರುಣ್‍ಕುಮಾರ್ ಮಾಹಿತಿ ಒದಗಿಸಿದರು.
ಸಿ ಮತ್ತು ಡಿ, ಊರುಡುವೆ ಪೈಸಾರಿ ಜಾಗಗಳಲ್ಲಿ ಮನೆಕಟ್ಟಿಕೊಂಡಿ ರುವವರೂ ಸಹ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆ ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿ ಕಾರಿಗಳಿಗೆ ಪತ್ರ ಬರೆಯಲಾಗಿದೆ. ಇಂತಹ
(ಮೊದಲ ಪುಟದಿಂದ) ಅರ್ಜಿಯನ್ನು ತಾತ್ಕಾಲಿಕ ವಾಗಿ ತಡೆಹಿಡಿಯಲಾಗುತ್ತಿದ್ದು, ಯಾರ ಅರ್ಜಿಯನ್ನೂ ತಿರಸ್ಕರಿಸುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಳೆದ ಸಾಲಿನಲ್ಲಿ ತಾಲೂಕಿನ 3770 ಮಂದಿ ರೈತರಿಗೆ ಬೆಳೆ ಪರಿಹಾರ ಧನ ವಿತರಿಸಲಾಗಿದೆ ಎಂದು ಇದೇ ಸಂದರ್ಭ ಮಾಹಿತಿ ನೀಡಿದರು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಕಂಡುಬರುತ್ತಿದ್ದು ಕಂದಾಯ ಇಲಾಖೆಯಿಂದ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಹೇಳಿದರು.
ಸೋಮವಾರಪೇಟೆ ಪ.ಪಂ.ಗೆ ಸಂಬಂಧಿಸಿದಂತೆ ಸಿದ್ದಲಿಂಗಪುರದಲ್ಲಿ ಜಾಗ ಖರೀದಿಸಿದ್ದು, ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಸಮಸ್ಯೆ ಎದುರಾಗಿದೆ. ಕಲ್ಕಂದೂರು ಕೋರೆ ಸಮೀಪ ಜಾಗ ಗುರುತಿಸಿದ್ದರೂ ಅಲ್ಲೂ ಸಹ ಇದೇ ಸಮಸ್ಯೆ ಉಂಟಾಗಿದೆ ಎಂದು ಅರುಣ್ ತಿಳಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಪೈಸಾರಿ ಜಾಗ ಇದ್ದರೆ ಗುರುತಿಸಿ, ಒಂದುವೇಳೆ ಪೈಸಾರಿ ಜಾಗ ಒತ್ತುವರಿಯಾಗಿದ್ದರೆ ಸರ್ವೆ ಮಾಡಿಸಿ ಅಂತಹ ಜಾಗದಲ್ಲಿ ಕಸ ವಿಲೇವಾರಿಗೆ ಘಟಕ ನಿರ್ಮಿಸುವದು ಸೂಕ್ತ ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸಲಹೆ ನೀಡಿದರು.
ಮಾದಾಪುರ ಮತ್ತು ಶನಿವಾರಸಂತೆ ಗ್ರಾ.ಪಂ.ನಲ್ಲೂ ಕಸದ ಸಮಸ್ಯೆ ಎದುರಾಗಿದ್ದು, ಸ್ಥಳ ಗುರುತಿಸಿದ್ದೀರಾ ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಪ್ರಶ್ನಿಸಿದರು. ಶನಿವಾರಸಂತೆ ಗ್ರಾ.ಪಂ.ನ ಕಸದ ವಿಲೇವಾರಿ ಸಮಸ್ಯೆ ಬಗೆಹರಿದಿದೆ. ಮಾದಾಪುರ ಗ್ರಾ.ಪಂ.ಗೆ ಸಂಬಂಧಿಸಿದಂತೆ ಮೂವತ್ತೊಕ್ಲು ಗ್ರಾಮದ ಸ.ನಂ.1/17 ರಲ್ಲಿ ಜಾಗ ಗುರುತಿಸಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ ಎಂದರು.
ತಾಲೂಕು ಕಚೇರಿಯಲ್ಲಿ ಮಧ್ಯಾಹ್ನದ ನಂತರ ಸಾರ್ವಜನಿಕರ ಆಧಾರ್ ಕಾರ್ಡ್‍ಗೆ ಅರ್ಜಿ ಪಡೆಯಲಾಗುತ್ತಿದೆ. ಇದರೊಂದಿಗೆ ಹೋಬಳಿ ಕೇಂದ್ರಗಳಲ್ಲೂ ಆಧಾರ್ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಮಾದಾಪುರ, ಸೂರ್ಲಬ್ಬಿ, ಗರ್ವಾಲೆ ಭಾಗದಲ್ಲಿ ಇಲಾಖೆಯ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್ ಜಿ.ಪಂ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರ ರಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಮುಂದಿನ ತಾ.ಪಂ. ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಗಳಿಗೆ ಎಲ್ಲಾ ಜೂನಿಯರ್ ಇಂಜಿನಿಯರ್‍ಗಳೂ ಆಗಮಿಸಬೇಕು. ಸಭೆಗೆ ಬರುವಾಗ ಸರಿಯಾಗಿ ‘ಹೋಂ ವರ್ಕ್’ ಮಾಡಿಕೊಂಡು ಬರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವಶ್ಯಕತೆಗೆ ಅನುಗುಣವಾಗಿ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೃಷಿ ಇಲಾಖೆಯಿಂದ ಕೇವಲ ಜಾತ್ರೆಗಳು ನಡೆಯುವ ಸಂದರ್ಭ ಮಾತ್ರ ಕೃಷಿ ವಸ್ತು ಪ್ರದರ್ಶನ ಆಯೋಜಿಸುವ ಬದಲು ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ವಸ್ತುಪ್ರದರ್ಶನ ಆಯೋಜಿಸಿ ಕೃಷಿಕರಿಗೆ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಕಾರ್ಯ ಆಗಬೇಕು ಎಂದು ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧಿಕಾರಿ ಮುಕುಂದ ಅವರಿಗೆ ಸೂಚಿಸಿದರು.
ಉಳಿದಂತೆ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು.