ಕುಶಾಲನಗರ, ಆ. 19: ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳು ತಮ್ಮ ಅವಧಿಯಲ್ಲಿ ರಾಜ್ಯದ ಪರಿಶಿಷ್ಟ ಜಾತಿ, ಪಂಗಡದವರಿಗೆ ಅನುಕೂಲವಾಗುವ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಎಂದು ಜೆಡಿಎಸ್ ಪರಿಶಿಷ್ಟ ಜಾತಿ, ಪಂಗಡಗಳ ರಾಜ್ಯ ಘಟಕದ ಅಧ್ಯಕ್ಷ ಡಾ.ಕೆ. ಅನ್ನದಾನಿ ಹೇಳಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಜ್ಯವನ್ನು ಪ್ರತಿನಿಧಿಸಿದ ಪಕ್ಷದ ನಾಯಕರುಗಳು ದೀನದಲಿತರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ದೇವೇಗೌಡ, ರಾಮಕೃಷ್ಣ ಹೆಗ್ಗಡೆ, ಜೆ.ಹೆಚ್.ಪಟೇಲ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ ಸ್ಥಳೀಯ ಆಡಳಿತಗಳ ಮೀಸಲಾತಿ ವ್ಯವಸ್ಥೆ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ, ವರ್ಗದ ಅಭ್ಯರ್ಥಿಗಳಿಗೆ ನೇರ ನೇಮಕಾತಿ ಆದೇಶ, ಗಂಗಾ ಕಲ್ಯಾಣ, ಗ್ರಾಮ ವಾಸ್ತವ್ಯ, ಸುವರ್ಣ ಗ್ರಾಮ ಯೋಜನೆಗಳು ದಲಿತ ಪರವಾಗಿದ್ದವು. ಮೇಲ್ಮನೆಗೆ ನಾಮಕರಣ ಮಾಡುವ ಸಂದರ್ಭ ಸ್ವಜಾತಿಯವರನ್ನು ಬದಿಗೊತ್ತಿ ಹಿಂದುಳಿದ, ದಲಿತರ ಪರವಾಗಿ ನಿಂತಿರುವ ಕೀರ್ತಿ ಪಕ್ಷದ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ಯೋಜನೆಗಳ ಬಗ್ಗೆ ದಲಿತರಲ್ಲಿ ಅರಿವು ಮೂಡಿಸುವದು ಅಗತ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಸುವ ನಿಟ್ಟಿನಲ್ಲಿ ರಾಜ್ಯದ ದಲಿತರು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಜೆಡಿಎಸ್ ಆಶ್ರಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಪರಿಶಿಷ್ಟ ಜಾತಿ, ಪಂಗಡಗಳ ಸಮಾವೇಶ ಹಾಗೂ ಪಕ್ಷ ಸಂಘಟನೆ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ ಮೂಡಿಗೆರೆ ಕ್ಷೇತ್ರ ಶಾಸಕರಾದ ಬಿ.ಬಿ.ನಿಂಗಯ್ಯ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ಭ್ರಷ್ಟಾಚಾರ ಹಾಗೂ ವ್ಯಾಪಾರೀ ಕರಣದಿಂದಾಗಿ ರಾಜಕೀಯ ಕ್ಷೇತ್ರ ತನ್ನ ಮೌಲ್ಯ ಕಳೆದುಕೊಂಡಿದೆ. ಜನತೆ ಪ್ರಾದೇಶಿಕ ಪಕ್ಷದತ್ತ ಒಲವು ತೋರಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ಅವ್ಯವಸ್ಥೆಗಳ ಬಗ್ಗೆ ಅರಿವಿರುವ ರಾಜ್ಯದ ಜನತೆ ಬದಲಾವಣೆಯತ್ತ ಚಿಂತನೆ ಹರಿಸಬೇಕಿದೆ. ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್‍ನತ್ತ

ಒಲವು ತೋರಿ ಹೆಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿಸಲು ಪಣತೊಡಬೇಕಿದೆ ಎಂದರು.

ಪರಿಶಿಷ್ಟ ಜಾತಿ, ಪಂಗಡಗಳ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಮ್ಮೇಶ್ ಪ್ರಭು, ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹೆಚ್.ಆರ್.ಸುರೇಶ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಾಜೇಶ್, ಕುಶಾಲನಗರ ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಡಿ. ಚಂದ್ರು, ಕೂಡಿಗೆ ಗ್ರಾಮಪಂಚಾಯ್ತಿ ಸದಸ್ಯ ರಾಮಚಂದ್ರ, ಮಡಿಕೇರಿ ನಗರಸಭೆ ಸದಸ್ಯ ಕೆ.ಎಂ.ಬಿ. ಗಣೇಶ್, ಲೀಲಾ ಶೇಷಮ್ಮ, ಪ್ರಮುಖರಾದ ಕೆ.ಕೆ. ಹೇಮಂತ್‍ಕುಮಾರ್, ಬಿ.ಡಿ.ಅಣ್ಣಯ್ಯ, ರಘು ಮತ್ತಿತರರು ಇದ್ದರು.