ಮಡಿಕೇರಿ, ಆ. 19 : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ 2017-18 ಹಾಗೂ 18-19ರ ಅವಧಿಗೆ ಸಮಿತಿ ರಚನೆ ಮಾಡಲಾಗಿದ್ದು, ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಗಿದೆ.ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿಂದು ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ದಸರಾ ಸಮಿತಿ ಮಹಾಸಭೆಯಲ್ಲಿ ಕಾರ್ಯಾಧ್ಯಕ್ಷರಾಗಿ ಮಹೇಶ್ ಜೈನಿ ಅವರನ್ನು ಪುನರಾಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳಾಗಿದ್ದು, ಕಾಂಗ್ರೆಸ್‍ನ ಪ್ರಕಾಶ್ ಆಚಾರ್ಯ ಹಾಗೂ ಬಿಜೆಪಿಯ ಕೆ.ಎಸ್. ರಮೇಶ್ ಅವರುಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅಂತಿಮವಾಗಿ ಈ ಹಿಂದಿನ ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ ಅವರನ್ನೇ ಪುನರಾಯ್ಕೆ ಮಾಡಲಾಯಿತು.

ಇನ್ನುಳಿದಂತೆ ಉಪಾಧ್ಯಕ್ಷರು ಗಳಾಗಿ ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ದಶಮಂಟಪ ಸಮಿತಿ ಕಡೆಯಿಂದ ಬಿ.ಎಸ್. ಪ್ರಶಾಂತ್, ಬಿ.ಕೆ. ಅರುಣ್‍ಕುಮಾರ್, ಅಶ್ರಫ್, ಪ್ರಭುರೈ, ಅನಿತಾ ಪೂವಯ್ಯ, ಪ್ರಕಾಶ್ ಆಚಾರ್ಯ ಅವರುಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಯಾಗಿ ಬಿ.ಎಂ. ರಾಜೇಶ್, ಸಹಕಾರ್ಯದರ್ಶಿಗಳಾಗಿ ಜಾನ್ಸನ್ ಪಿಂಟೋ, ಅಜ್ಜೇಟಿರ ಲೋಕೇಶ್, ಹೆಚ್.ಎಸ್. ಸತೀಶ್ ಕುಮಾರ್ ಅವರುಗಳನ್ನು ನೇಮಕ ಮಾಡಲಾಯಿತು. ಗೌರವ ಅಧ್ಯಕ್ಷರುಗಳಾಗಿ

(ಮೊದಲ ಪುಟದಿಂದ) ಬಿ.ಎಸ್. ಮೋಹನ್, ಎಸ್.ಸಿ. ಸುಬ್ರಮಣಿ, ಅಬ್ದಲು ರಜಾಕ್, ಎಂ.ಬಿ. ದೇವಯ್ಯ, ಬೈಶ್ರೀ ಪ್ರಕಾಶ್, ರಾಬಿನ್ ದೇವಯ್ಯ, ಟಿ.ಪಿ. ರಾಜೇಂದ್ರ, ಪಿ.ಡಿ. ಪೊನ್ನಪ್ಪ ಹಾಗೂ ಕೆ.ಇ. ಮ್ಯಾಥ್ಯೂ ಅವರುಗಳನ್ನು ನೇಮಕ ಮಾಡಲಾಯಿತು. ಖಜಾಂಚಿಯಾಗಿ ನಗರಸಭಾ ಸದಸ್ಯೆ ಸಂಗೀತ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಯಿತು.

ಇನ್ನುಳಿದಂತೆ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಬಿ.ಕೆ. ಜಗದೀಶ್, ಸಾಂಸ್ಕøತಿಕ ಸಮಿತಿಗೆ ಪತ್ರಕರ್ತ ಅನಿಲ್ ಎಚ್.ಟಿ. ಅವರು ಹೆಸರು ಪ್ರಸ್ತಾಪಗೊಂಡ ಕೂಡಲೇ ಕಾರ್ಯಾಧ್ಯಕ್ಷರು ಅವರ ಹೆಸರನನ್ನು ಘೋಷಿಸಿಬಿಟ್ಟರು. ಈ ನಡುವೆ ಭಾರತೀರಮೇಶ್ ಅವರ ಹೆಸರನ್ನು ಕೆಲವರು ಪ್ರಸ್ತಾಪಿಸಿದರು. ಆದರೆ ಮೊದಲೇ ಸೂಚನೆ ಮಾಡಲಿಲ್ಲ ಎಂಬ ಕಾರಣ ನೀಡಿ ಕಾರ್ಯಾಧ್ಯಕ್ಷರು ತಿರಸ್ಕರಿಸಿದರು. ಗೊಂದಲ ಘೋಷಣೆ ನಡುವೆ ಮತ್ತೊಂದು ಹೆಸರು ಸೂಚನೆ ಮಾಡುವಷ್ಟು ಅವಕಾಶವೇ ನೀಡಲಿಲ್ಲವೆಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಅಸಮಾಧಾನಿತರಾದ ಭಾರತೀರಮೇಶ್ ಸಭೆಯಿಂದ ಹೊರ ನಡೆದರು.

ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾನೆಹಿತ್ಲು ಮೊಣ್ಣಪ್ಪ, ಅಲಂಕಾರ ಸಮಿತಿ ಅಧ್ಯಕ್ಷರಾಗಿ ನಂದೀಶ್, ಅಯ್ಕೆಯಾದರೆ, ವೇದಿಕೆ ಸಮಿತಿಗೆ ಮನುಮಂಜುನಾಥ್ ಹಾಗೂ ಎ.ಜಿ. ರಮೇಶ್ ಅವರುಗಳ ಹೆಸರು ಪ್ರಸ್ತಾಪಗೊಂಡ ಹಿನ್ನೆಲೆಯಲ್ಲಿ ಇದರಲ್ಲೂ ಒಮ್ಮತ ಮಾಡದ ಹಿನ್ನೆಲೆಯಲ್ಲಿ ಇಬ್ಬರನ್ನು ಸೇರಿ ಜಂಟಿ ಅಧ್ಯಕ್ಷರುಗಳನ್ನರಾಗಿ ನೇಮಕ ಮಾಡಲಾಯಿತು.

ಪತ್ರಕರ್ತರಿಗೆ ಮೀಸಲಿರುವ ಬಹುಭಾಷಾ ಕವಿಗೋಷ್ಠಿ ಸಮಿತಿಗೆ ಈ ಹಿಂದಿನ ಅಧ್ಯಕ್ಷ ಕುಡೆಕಲ್ ಸಂತೋಷ್ ಹಾಗೂ ಐತಿಚಂಡ ರಮೇಶ್ ಉತ್ತಪ್ಪ ಅವರುಗಳ ಹೆಸರು ಪ್ರಸ್ತಾಪಗೊಂಡಿತು. ಸಂತೋಷ್ ರಮೇಶ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಸೂಚಿಸಿದ ಹಿನ್ನೆಲೆ ರಮೇಶ್ ಅಧ್ಯಕ್ಷರಾಗಿ ಆಯ್ಕೆಯಾದರು.

ಸಭೆಯಲ್ಲಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಅನಿತಾ ಪೂವಯ್ಯ, ಪಿ.ಡಿ. ಪೊನ್ನಪ್ಪ, ನಂದಕುಮಾರ್, ಶ್ರೀಮತಿ ಬಂಗೇರ, ಸತೀಶ್ ಪೈ, ಎಸ್.ಸಿ. ಸುಬ್ರಮಣಿ, ಬಿ.ಎಸ್. ಮೋಹನ್, ಎಂ.ಬಿ. ದೇವಯ್ಯ, ಕೆ.ಎಂ. ಗಣೇಶ್, ದಶಮಂಟಪ ಸಮಿತಿ ಅಧ್ಯಕ್ಷ ಸತೀಶ್ ಧರ್ಮಪ್ಪ, ರಾಬಿನ್ ದೇವಯ್ಯ, ಬೈ.ಶ್ರೀ. ಪ್ರಕಾಶ್, ಎಂ.ಎ. ಉಸ್ಮಾನ್, ನಗರಸಭಾ ಆಯುಕ್ತೆ ಬಿ. ಶುಭ ಇದ್ದರು. ಚುಮ್ಮಿ ದೇವಯ್ಯ ನಿರೂಪಿಸಿ, ಸ್ವಾಗತಿಸಿದರೆ, ಭಾರತಿ ರಮೇಶ್ ಪ್ರಾರ್ಥಿಸಿದರು.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಟಾಪಟಿ...!

ದಸರಾ ಉತ್ಸವ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂಬಂತೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಟಾಪಟಿ ನಡೆದು ಸಭೆ ಗೊಂದಲದ ಗೂಡಾಗಿ ಸುದೀರ್ಘ ನಾಲ್ಕು ಗಂಟೆಗಳನ್ನು ನುಂಗಿ ಹಾಕಿತು. ಪದಾಧಿಕಾರಿಗಳು, ಆಕಾಂಕ್ಷಿಗಳ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ತಲಪಿತ್ತು.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಪ್ರಕಾಶ್ ಆಚಾರ್ಯ ಅವರ ಹೆಸರು ಹಾಗೂ ಬಿಜೆಪಿಯ ಕೆ.ಎಸ್. ರಮೇಶ್ ಅವರುಗಳ ಹೆಸರು ಪ್ರಸ್ತಾಪಗೊಂಡಿತು. ಇಬ್ಬರ ಹೆಸರಿದ್ದ ಕಾರಣ ಇಬ್ಬರೂ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರುವಂತೆ ಸೂಚಿಸಲಾಯಿತು. ಆದರೆ ಇಬ್ಬರಲ್ಲೂ ಒಮ್ಮತ ಮೂಡದ ಕಾರಣ ಆಯ್ಕೆ ಪ್ರಕ್ರಿಯೆ ಗೊಂದಲವಾಗಿ ಪರಿಣಮಿಸಿತು. ಇಬ್ಬರು ಅಭ್ಯರ್ಥಿಗಳ ಪರ ಬೆಂಬಲಿಗರು ಪರಸ್ಪರ ವಾಗ್ವಾದಕ್ಕಿಳಿದರು. ಪದಾಧಿಕಾರಿಗಳು, ಆಕಾಂಕ್ಷಿಗಳ ನಡುವೆ ವಾಕ್ಸಮರದೊಂದಿಗೆ ಮೂರು ಬಾರಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲಪಿತ್ತು. ಈ ಸಂದರ್ಭದಲ್ಲಿ ಹಿರಿಯರು ಸೇರಿ ಇಬ್ಬರಿಗೂ ತಲಾ ಒಂದೊಂದು ವರ್ಷ ಅಧಿಕಾರ ಹಂಚಿಕೊಳ್ಳುವ ಬಗ್ಗೆ ತೀರ್ಮಾನಿಸಿದರೂ, ಇದರಲ್ಲೂ ತನಗೆ ಮೊದಲು ಆಗಬೇಕೆಂದು ಇಬ್ಬರೂ ಪಟ್ಟು ಹಿಡಿದಿದ್ದರಿಂದ ಅದೂ ವಿಫಲವಾಯಿತು.

ಮತದಾನಕ್ಕೆ ಹೋಗುವ ಬಗ್ಗೆ ಕೆಲವರು ಸಲಹೆ ನೀಡಿದರಾದರೂ ಕಾಂಗ್ರೆಸ್‍ನ ಸದಸ್ಯರುಗಳು ಬಾರದೇ ಇದ್ದುದರಿಂದ ಸಮ್ಮತಿಸದ ಕಾಂಗ್ರೆಸ್ಸಿಗರು ಹಿಂದೆ ಸರಿದದಲ್ಲದೆ ತಮ್ಮ ಸದಸ್ಯರುಗಳನ್ನು ಕರೆ ಮಾಡಿ ಕರೆಸಿಕೊಂಡರು. ಈ ನಡುವೆ ಇಬ್ಬರನ್ನು ಹೊರತುಪಡಿಸಿ ಅನಿತಾ ಪೂವಯ್ಯ ಅವರನ್ನು ನೇಮಕ ಮಾಡುವಂತೆ ರಮೇಶ್ ಸಲಹೆ ನೀಡಿದರಾದರೂ, ಇದಕ್ಕೆ ಕಾಂಗ್ರಸ್ಸಿಗರು ಒಪ್ಪಲಿಲ್ಲ.

ಒಂದೊಮ್ಮೆ ಸಭೆಯನ್ನು ಮುಂದೂಡುವ ಬಗ್ಗೆ ಅಧ್ಯಕ್ಷರು ಮುಂದಾದರಾದರೂ ಅದೂ ಫಲ ಕೊಡಲಿಲ್ಲ. ಅಂತಿಮವಾಗಿ ಗೊಂದಲ ನಿವಾರಿಸುವ ಸಲುವಾಗಿ ಇಬ್ಬರನ್ನು ಸಮಾಧಾನಿಸಿ ಈ ಹಿಂದಿನ ಪ್ರದಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ ಅವರನ್ನೇ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಯಿತು. ಪ್ರಕಾಶ್ ಆಚಾರ್ಯ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.