ಮಡಿಕೇರಿ, ಆ. 19 :ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 75 ಲಕ್ಷ ರೂ.ಗಳಷ್ಟು ಹಣ ದುರುಪ ಯೋಗವಾಗಿದ್ದು, ಈ ಹಗರಣವನ್ನು ಮುಚ್ಚಿ ಹಾಕಲು ಆಡಳಿತ ಮಂಡಳಿ ಯತ್ನಿಸುತ್ತಿದೆ ಎಂದು ಸಂಘದ ಸದಸ್ಯರುಗಳಾದ ಆರ್.ಕೆ.ಚಂದ್ರ, ಕೆ.ಎಸ್. ಮೋಹನ್ ಹಾಗೂ ಕೆ.ಜಿ.ದೇವಯ್ಯ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಕೆ.ಚಂದ್ರ, 2015-16 ರ ಮಹಾಸಭೆ ಸಂದರ್ಭ ಸಂಘ ಲಾಭದಲ್ಲಿದೆ ಎಂದು ಹೇಳಿಕೊಂಡಿದ್ದ ಆಡಳಿತ ಮಂಡಳಿ ಇದೀಗ ಕೇವಲ ಆರೇ ತಿಂಗಳಿನಲ್ಲಿ 75 ಲಕ್ಷ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಘೋಷಿಸಿದೆ. ಇದು ಹಣ ದುರುಪ ಯೋಗವಾಗಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ತಕ್ಷಣ ಆಡಳಿತ ಮಂಡಳಿ ತುರ್ತು ವಿಶೇಷ ಸಭೆ ಕರೆದು ಸಂಘದ ಎಲ್ಲಾ ಸದಸ್ಯರುಗಳಿಗೆ ಸ್ಪಷ್ಟೀಕರಣ ನೀಡಬೇಕೆಂದು ಒತ್ತಾಯಿಸಿದರು. ಕೇವಲ 6 ತಿಂಗಳಿನಲ್ಲಿ ಲೆಕ್ಕಪತ್ರದಲ್ಲಿ ವ್ಯತ್ಯಾಸವಾಗಿರುವದನ್ನು ಗಮನಿಸಿದರೆ ಅನೇಕ ಸಂಶಯಗಳು ಮೂಡುತ್ತವೆ. ಆಡಳಿತ ಮಂಡಳಿಯ ಸದಸ್ಯರುಗಳು ಹಗರಣದಿಂದ ನುಣುಚಿ ಕೊಳ್ಳುವ ದಕ್ಕಾಗಿ ಸಂಘದ ಗುಮಾಸ್ತರೊಬ್ಬರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಗುಮಾಸ್ತರು ಸಂಘಕ್ಕೆ ಹಾಜರಾಗದೆ ಅನೇಕ ದಿನಗಳು ಕಳೆದಿದ್ದರೂ ನಾಪತ್ತೆ ಪ್ರಕರಣ ದಾಖಲಿಸಿಲ್ಲ. ಅವರ ಮನೆಗೆ ತಿಳುವಳಿಕೆ ಪತ್ರವನ್ನು ಕೂಡ ನೀಡಿಲ್ಲ. ಸಂಘದ ಸದಸ್ಯರಲ್ಲದವರು ಪ್ರಕರಣದ ಕುರಿತು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರ್.ಕೆ. ಚಂದ್ರ ಟೀಕಿಸಿದರು.

(ಮೊದಲ ಪುಟದಿಂದ) ಲೆಕ್ಕ ಪರಿಶೋಧನೆಯ ವಿಚಾರಣೆಯ ಸಂದರ್ಭದಲ್ಲಿ ಗುಮಾಸ್ತರನ್ನಷ್ಟೇ ಗುರಿ ಮಾಡಲಾಗುತ್ತಿದ್ದು, ಸಂಘದ ಅಧಿಕಾರಿಗಳನ್ನಾಗಲಿ ಅಥವಾ ಆಡಳಿತ ಮಂಡಳಿಯನ್ನಾಗಲಿ ಪ್ರಶ್ನಿಸುತ್ತಿಲ್ಲ ವೆಂದು ಆರೋಪಿಸಿದ ಅವರು ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗ ಬೇಕೆಂದು ಒತ್ತಾಯಿಸಿದರು. ರೈತರ ಅಭ್ಯುದಯಕ್ಕಾಗಿ ರಚನೆಗೊಂಡಿರುವ ಸಹಕಾರ ಸಂಘದಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಗರಣ ನಡೆದಿರುವದು ಅತ್ಯಂತ ಖಂಡನೀಯವೆಂದರು.

ಮತ್ತೊಬ್ಬ ಸದಸ್ಯ ಕೆ.ಎಸ್. ಮೋಹನ್ ಮಾತನಾಡಿ, 75 ಲಕ್ಷ ರೂ. ಹಗರಣಕ್ಕೆ ಸಂಬಂಧಿಸಿದಂತೆ ಸಂಘದ ಸಿಇಒ ಉಡಾಫೆ ಉತ್ತರ ನೀಡುತ್ತಿದ್ದು, ಆಡಳಿತ ಮಂಡಳಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಸಹಕಾರ ಸಂಘದ ಉಪ ನಿಬಂಧಕರಿಗೆ ಈಗಾಗಲೇ ದೂರು ನೀಡಲಾಗಿದ್ದು, ನಿಷ್ಪಕ್ಷಪಾತ ತನಿಖೆಯ ಮೂಲಕ ತಪ್ಪಿತಸ್ತರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.