ಮಡಿಕೇರಿ, ಆ. 19: ಸಾಮಾಜಿಕ ಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಅವರ ಜನಪರ ಕಾರ್ಯಕ್ರಮಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ ಎಂದು ಜಿ.ಪಂ. ಅಧ್ಯಕ ಬಿ.ಎ. ಹರೀಶ್ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಡಿ. ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆಯ ಅಂಗವಾಗಿ ಡಿ.ದೇವರಾಜ ಅರಸು ಅವರ ಜೀವನ ಸಾಧನೆ ಬಗ್ಗೆ ನಗರದ ದೇವರಾಜ ಅರಸು ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.

ಜನಪರ ಕಲ್ಯಾಣ ಕಾರ್ಯಕ್ರಮಗಳ ಮೂಲಕ ರಾಜ್ಯಾಧಿಕಾರ ನಡೆಸಿ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ಶ್ರಮಿಸಿದ ಡಿ.ದೇವರಾಜ ಅರಸು ಅವರು ವಿಶಿಷ್ಟ ಹಾಗೂ ವಿಭಿನ್ನ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

ವಿದ್ಯಾರ್ಥಿ ನಿಲಯಗಳ ಆರಂಭ, ಶಿಷ್ಯ ವೇತನ, ಹಾವನೂರು ವರದಿ ಜಾರಿ, ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಕರಣ, ಜೀತಪದ್ಧತಿ ರದ್ದು, ಮಲ ಹೊರುವ ಪದ್ಧತಿ ನಿಷೇಧ ಹೀಗೆ ಹಲವು ಕ್ರಾಂತಿಕಾರಕ ಕಾರ್ಯಕ್ರಮ ಹಾಗೂ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಜನಪ್ರಿಯ, ಮುತ್ಸದ್ಧಿ ಮುಖ್ಯಮಂತ್ರಿ ಎನಿಸಿಕೊಂಡರು ಎಂದು ಹೇಳಿದರು.

ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್ ಮಾತನಾಡಿ ಡಿ. ದೇವರಾಜ ಅರಸು ಅವರು ಕೈಗೊಂಡ ಸುಧಾರಣಾ ಕಾರ್ಯಕ್ರಮಗಳು ಶಾಶ್ವತವಾದವು. ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸುವದು ಡಿ. ದೇವರಾಜ ಅರಸು ಅವರ ಕಾರ್ಯಕ್ರಮಗಳಾಗಿದ್ದು, ಅವರ ಆಡಳಿತ ವೈಖರಿ, ಮುಂದಾಲೋಚನೆ ಸ್ಮರಿಸುವಂತದ್ದು ಎಂದು ನುಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕೆ.ಸಿ. ದಯಾನಂದ ಮಾತನಾಡಿ, ಡಿ. ದೇವರಾಜ ಅರಸು ಉಳುವವನೆ ಭೂಮಿಯ ಒಡೆಯ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು.

80ರ ದಶಕದಲ್ಲಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ 20 ಅಂಶಗಳನ್ನು ಜಾರಿಗೊಳಿಸಿದರು. ಈ 20 ಅಂಶಗಳು ರಾಜ್ಯದಲ್ಲಿ ಪರಿಣಾಮ ಕಾರಿಯಾಗಿ ಅನುಷ್ಠಾನಗೊಳ್ಳಲು ಡಿ. ದೇವರಾಜ ಅರಸು ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಚಿತ್ರಾ, ಪ್ರಕಾಶ್, ಬಿಸಿಎಂ ಇಲಾಖೆಯ ವ್ಯವಸ್ಥಾಪಕ ಪುಟ್ಟರಾಜು ಹಾಗೂ ಇತರರು ಇದ್ದರು. ಲಿಖಿತ ಪ್ರಾರ್ಥಿಸಿದರು.